ಯಡಿಯೂರಪ್ಪ ಕುರ್ಚಿ ಭವಿಷ್ಯ ಇಂದು?

ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಡಿನೋಟಿಫಿಕೇಷನ್ ಹಗರಣ ಆರೋಪದಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ. ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಉಳಿಸಲು ಕೇಂದ್ರ ನಾಯಕರು ಮನಸ್ಸು ಮಾಡಿದ್ದು, ಯಡಿಯೂರಪ್ಪ ಅವರ ತಲೆದಂಡಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಲಿಂಗಾಯಿತರ ಮುಖಂಡ ಆಗಿರುವ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಇನ್ನೊಬ್ಬ ಲಿಂಗಾಯಿತ ಮುಖಂಡ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಪರಿಶೀಲನೆ ನಡೆಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪ್ರವಾಸದಲ್ಲಿದ್ದು, ಸಂಜೆ ವೇಳೆಗೆ ಅವರೂ ಕೂಡಾ ದೆಹಲಿಗೆ ಆಗಮಿಸುವ ಸಾಧ್ಯತೆ. ಅವರ ಬಂದ ನಂತರ ಅವರೊಂದಿಗೆ ಕೂಲಂಕಷ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇಂದು ರಾತ್ರಿ 8 ಗಂಟೆ ನಂತರ ಅಧ್ಯಕ್ಷ ನಿತಿನ್ ಗಡ್ಕರಿ ಅಥವಾ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ನಿವಾಸದಲ್ಲಿ ಮಹತ್ವ ಬಿಜೆಪಿ ಕೋರ್ ಕಮೀಟಿ ಸಭೆ ನಡೆಯಲಿದ್ದು, ಯಡಿಯೂರಪ್ಪ ಅವರ ಹಣೆಬರಹ ತೀರ್ಮಾನವಾಗಲಿದೆ.
ಈ ಮಧ್ಯೆ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಕ್ಕಳು ಹಾಗೂ ಸಂಬಂಧಿಕರಿಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆದುಕೊಳ್ಳಲಾಗುವುದು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಹೇಳಿಕೆ ಕೂಡಾ ಭಾರಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.
ಆದರ್ಶ ಹೌಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಅಶೋಕ್ ಚವಾಣ್, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭ್ರಷ್ಟಾಚಾರ ನಡೆಸಿದ್ದ ಸುರೇಶ್ ಕಲ್ಮಾಡಿ ಹಾಗೂ ಟೆಲಿಕಾಂ ಹಗರಣದಿಂದ ಎ ರಾಜಾ ಅವರು ರಾಜೀನಾಮೆ ನೀಡಿದ್ದಾರೆ. ಎ ರಾಜಾ ಅವರ ರಾಜೀನಾಮೆಯನ್ನಂತೂ ಬಿಜೆಪಿ ನಾಯಕರು ತೀವ್ರ ಪ್ರತಿಭಟನೆ ಮೂಲಕ ಪಡೆದುಕೊಂಡಿದ್ದಾರೆ.
ಹೀಗಿರುವಾಗ ಬಿಜೆಪಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಬಿಜೆಪಿ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಮನೆಗೆ ಕಳುಹಿಸಿ, ಆ ಜಾಗಕ್ಕೆ ಶೆಟ್ಟರ್ ಅವರನ್ನು ತರುವ ಚಿಂತನೆ ನಡೆದಿದೆ. ಯಾವುದಕ್ಕೂ ರಾತ್ರಿ ನಡೆಯುವ ಕೋರ್ ಕಮೀಟಿಯಲ್ಲಿ ತಿಳಿಯಲಿದೆ. ಈ ನಡುವೆ ಬಿಜೆಪಿ ಅನರ್ಹ ಶಾಸಕರ ಗುಂಪು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಮಂತ್ರಿ ಶಿವನಗೌಡ ನಾಯಕ್ ಗುಲ್ಬರ್ಗಾ ಹೇಳಿದ್ದಾರೆ.












Click it and Unblock the Notifications