ಕೊನೆಗೂ ಅಖಾಡಕ್ಕಿಳಿದ ಮಾಜಿ ಪಿಎಂ ದೇವೇಗೌಡ

ಹೋಟೆಲ್ ಸಿಟಾಡೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡ, ಇತ್ತೀಚೆಗಿನ ರಾಜಕೀಯ ಬೆಳವಣಿಗೆ ಮತ್ತು ಸರಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಖಂಡಿಸಿದರು. ಸದನದೊಳಗೆ ಸಮವಸ್ತ್ರ ಧರಿಸಿದ ಪೊಲೀಸರು ಬರಬಾರದು ಎಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಸರಕಾರ ಖಾಕಿ ವ್ಯಕ್ತಿಗಳನ್ನು ಸದನದೊಳಕ್ಕೆ ಬಿಟ್ಟುಕೊಟ್ಟು ಮಲೀನ ಮಾಡಿದ್ದಾರೆ.
ಅಲ್ಲದೇ, 50 ವರ್ಷಗಳ ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಭ್ರಷ್ಟ ಮುಖ್ಯಮಂತ್ರಿ ಹಾಗೂ ಸಂವಿಧಾನ ವಿರೋಧಿ ಸ್ಪೀಕರ್ ನನ್ನು ಕಂಡಿಲ್ಲ. ಈ ಇಬ್ಬರಿಂದ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಕುರ್ಚಿ ಮಲೀನವಾಗಿವೆ. ಇವುಗಳನ್ನು ಮೊದಲು ಸುಗಂಧದೃವ್ಯದಿಂದ ಸ್ವಚ್ಚಗೊಳಿಸಬೇಕು ಎಂದು ದೇವೇಗೌಡ ಲೇವಡಿ ಮಾಡಿದರು. ಕರ್ನಾಟಕದ ಸರಕಾರ ಭ್ರಷ್ಟಚಾರದಲ್ಲಿ ನಂಬರ್ 1 ಎಂದು ಔಟ್ ಲುಕ್ ವಿಶೇಷ ಸಂಚಿಕೆ ಪ್ರಕಟಿಸಿದೆ. ಇಂತಹ ಜನವಿರೋಧಿ, ಸ್ವಜನಪಕ್ಷಪಾತಿ, ಭ್ರಷ್ಟ ಸರಕಾರ ಬೇಕಾ ಎಂದು ದೇವೇಗೌಡ ಪ್ರಶ್ನಿಸಿದರು.
ಸ್ಪೀಕರ್ ಕೆಜಿ ಬೋಪಯ್ಯ ಅವರ ಮೇಲೆ ಕೆಂಡಕಾರಿದ ಗೌಡರು, ಕೊಡಗಿನವರು ಶಿಸ್ತಿಗೆ ಹೆಸರುವಾಸಿ. ಆದರೆ, ಕೊಡಗಿನ ಈ ಸ್ಪೀಕರ್ ಅದಕ್ಕೆ ಅಪವಾದ ಎಂದು ವ್ಯಂಗ್ಯವಾಡಿದರು. ರಾಜ್ಯ ಸರಕಾರದಲ್ಲಿ ನಡೆಯುತ್ತಿರುವ ಅನೈತಿಕತೆ ವಿರುದ್ಧ ಹೋರಾಟ ಆರಂಭಿಸಿದ ಪ್ರತಿಪಕ್ಷಗಳ ನಾಯಕರನ್ನು ಮುಖ್ಯಮಂತ್ರಿ ಬಂಧಿಸುವಂತೆ ಆದೇಶ ನೀಡುತ್ತಾನೆ. ಈ ಮುಖ್ಯಮಂತ್ರಿಯನ್ನು ಮೊದಲು ಮನೆಗೆ ಕಳುಹಿಸಿಬೇಕು ಎಂದು ದೇವೇಗೌಡ ಅಧಿಕೃತವಾಗಿ ಬಹಿರಂಗವಾಗಿ ರಣಕಹಳೆ ಊದಿದರು. ಇದೀಗ ಬಿಜೆಪಿ ನಡೆಸಿರುವ ಅಪರೇಷನ್ ಕಮಲಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ವಿಧಾನಸಭೆ ವಿಸರ್ಜಿಸಿ ಜನಾದೇಶಕ್ಕೆ ಹೋಗುವುದು ಒಳಿತು ಎಂದರು.












Click it and Unblock the Notifications