ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳೆಗೇರಿಯಲ್ಲಿ ಅಚ್ಚ ಬಿಳಿ ಸಫಾರಿಯಲ್ಲಿ ಸಿಎಂ

By Prasad
|
Google Oneindia Kannada News

BSY with adopted son Vishwanath
ಬೆಂಗಳೂರು, ಅ. 16 : ಮೈಸೂರು ರಸ್ತೆಯಲ್ಲಿರುವ ಬ್ಯಾಟರಾಯನಪುರದ ಆ ಕೊಳೆಗೇರಿಯಲ್ಲಿ ದೊರೆ ನಡೆದು ಬರುತ್ತಿದ್ದರೆ ಕೇರಿಗೆ ಕೇರಿಯೇ ಸಂಭ್ರಮದಿಂದ ಬೀಗುತ್ತಿತ್ತು. ಕೊಳಕಾದ ರಸ್ತೆಗಳು ಇಂದು ಬೆಳಗಿನ ಜಾವ ಅಚ್ಚರಿಯೆಂಬಂತೆ ಝಳಝಳ ಎನ್ನುತ್ತಿದ್ದವು. ಅಚ್ಚ ಬಿಳುಪಿನ ಸಫಾರಿ ಧರಿಸಿ ಮುಖ್ಯಮಂತ್ರಿಗಳು ಬಂದಾಗ ಆಯುಧ ಪೂಜೆಯ ಸಾರ್ಥಕತೆ ಕೊಳಗೇರಿ ವಾಸಿಗಳ ಮೊಗದಲ್ಲಿ ಎದ್ದು ಕಾಣುತ್ತಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪನವರು ದತ್ತು ಪುತ್ರನನ್ನಾಗಿ ಸ್ವೀಕರಿಸಿರುವ ವಿಶ್ವನಾಥ್ ಎಂಬ ಬಾಲಕನ ಭೇಟಿಗೆಂದು ಬಂದಾಗ ಮನೆಮನೆಯೆದಿರು ತಳಿರು ತೋರಣಗಳು ನಲಿದಾಡುತ್ತಿದ್ದವು. ಥಳಿ ರಂಗೋಲಿಯಿಂದಾಗಿ ಕೊಳೆಗೇರಿಯ ರಸ್ತೆಗಳು ಕಳೆಯೇರಿದ್ದವು. ಬಾಪೂಜಿನಗರದ ಸರಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ವಿಶ್ವನಾಥ್ ಮನೆಗೆ ತೆರಳಿ ಯಡಿಯೂರಪ್ಪನವರು ಇಂದು ಬೆಳಿಗ್ಗೆ ಆಯುಧ ಪೂಜೆ ಸಲ್ಲಿಸಿದರು.

ಕೊಳೆಗೇರಿಯ ಬೀದಿಯುದ್ದಕ್ಕೂ ಬರಿಗಾಲಲ್ಲಿ ನಡೆಯುತ್ತಿದ್ದ ವಿಶ್ವನಾಥನ ಕೈಯನ್ನು ಹಿಡಿದೇ ಸಾಗಿದ ಯಡಿಯೂರಪ್ಪ ಆತನ ತಂದೆ ತಾಯಿಯನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ತಲೆಯೆತ್ತಿದರೆ ತಾಗುವ ಮನೆಗಳ ತಾರಸಿ, ಜೋಲಿ ತಪ್ಪಿದರೆ ಮೈಗಂಟುವ ಗೋಡೆಗಳ ನಡುವೆ ಶುಭ್ರ ಬಿಳುಪಿನ ವಸ್ತ್ರಧಾರಿ ಸಿಎಂ ಹಸನ್ಮುಖಿಯಾಗಿಯೇ ಸಾಗಿದರು. [ಚಿತ್ರಪಟ ನೋಡಿರಿ]

ಎರಡನೇ ಬಾರಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ನಂತರ ಗಾಳಿ ಆಂಜನೇಯ ಸ್ವಾಮಿಗೆ ಮತ್ತೆ ಪೂಜೆ ಸಲ್ಲಿಸಿದ ನಂತರ ಹತ್ತಿರದಲ್ಲೇ ಇದ್ದ ವಿಶ್ವನಾಥನ ಮನೆಗೆ ಯಡಿಯೂರಪ್ಪ ತೆರಳಿ ಮನೆಮಂದಿಯನ್ನು ಭೇಟಿ ಮಾಡಿದರು. ಬಹುಮತ ಸಾಬೀತು ಪಡಿಸುವ ಮುನ್ನ ಅ.14ರಂದು ಅವರನ್ನು ಭೇಟಿಯಾಗಬೇಕೆಂದು ಅಳುತ್ತಿದ್ದ ಬಾಲಕನನ್ನು ಸಿಎಂ ಭೇಟಿಯಾಗಿದ್ದರು. ಆತನನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸದ ಹೊಣೆಯನ್ನೂ ಹೊತ್ತಿದ್ದರು. ಈಗ ಆತನ ಹೆಸರಿನಲ್ಲಿ ವಿದ್ಯಾಬ್ಯಾಸಕ್ಕಾಗಿ 1 ಲಕ್ಷ ರು. ಠೇವಣಿ ಇಡಲಾಗಿದೆ.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಭಜನೆಗಳನ್ನು ಏರ್ಪಡಿಸಲಾಗಿತ್ತು. ಭಜನೆಯಲ್ಲಿ ಪಾಲ್ಗೊಂಡ ಯಡಿಯೂರಪ್ಪ ನಂತರ ವಿಶ್ವನಾಥನ ಮನೆಗೆ ತೆರಳಿದರು. ಮಧ್ಯಾಹ್ನದ ಮೇಲೆ ಮೈಸೂರಿನ ದಸರಾ ಸಂಭ್ರಮದಲ್ಲಿ ಭಾಗವಹಿಸಲು ಯಡಿಯೂರಪ್ಪನವರು ಮೈಸೂರಿಗೆ ತೆರಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X