ಯಾರಿಗೆ ಯಾರುಂಟು ಎರವಿನ ರಾಜಕೀಯ

ಗುರುವಾರದಿಂದಲೇ ಗೋವಾದ ತಾಜ್ ಎಕ್ಸೋಟಿಕಾ ರೆಸಾರ್ಟಿನ 603ನೇ ಕೋಣೆಯಲ್ಲಿ ಠಿಕಾಣಿ ಹೂಡಿದ್ದ ಕುಮಾರಸ್ವಾಮಿ ಭಿನ್ನಮತೀಯ ಶಾಸಕರೊಂದಿಗೆ ಹಲವು ಸುತ್ತಿನ ಮಾತು ಕತೆ ನಡೆಸಿದ್ದರು. ಪಕ್ಕದ 609ನೇ ಕೋಣೆಯಲ್ಲಿ ಬಿಜೆಪಿಯ ಸಂಧಾನಕಾರ ಜನಾರ್ದನ ಸ್ವಾಮಿ ಎಲ್ಲ 14 ಶಾಸಕರನ್ನು ತಮ್ಮತ್ತ ಸೆಳೆಯಲು ಯತ್ನ ನಡೆಸಿದ್ದರು. ಹಗ್ಗ ಜಗ್ಗಾಟ ಶೀರ್ಷಿಕೆಯ ಈ ಕಮರ್ಷಿಯಲ್ ಸಿನಿಮಾದಲ್ಲಿ ಎಲ್ಲ ತಿರುವುಗಳು ಅಲ್ಲಿ ತಾನೇ ತಾನಾಗಿದ್ದವು. ಮೋಲು ನೋಟಕ್ಕೆ ಸಮಬಲರೊಡನೆ ಸೆಣಸಾಟ ಎಂದು ಕಂಡುಬಂದರೂ ವಿಜಯಲಕ್ಷ್ಮಿ ಯಾರ ಕೊರಳಿಗೆ ಮಾಲೆ ಹಾಕುತ್ತಾಳೆ ಎನ್ನುವುದು ಇನ್ನೂ ನಿಗೂಢ.
ಬೆಂಗಳೂರಿನಲ್ಲಿ ಏನೇ ಬೆಳವಣಿಗೆಗಳಾಗುತ್ತಿದ್ದರೂ ಎಲ್ಲರ ಕಣ್ಣು ಗೋವಾದತ್ತ ನೆಟ್ಟಿದ್ದವು. 8 ಅತೃಪ್ತ ಶಾಸಕರು ಎಚ್ಡಿಕೆ ಬಳಿಯಿದ್ದರೆ 6 ಜನ ರೆಡ್ಡಿ ಸಂಧಾನಕ್ಕೆ ತಲೆಬಾಗಿದ್ದಾರೆ ಎಂಬ ವರದಿಗಳು ಬಂದಿದ್ದವು. ಇಬ್ಬರೂ ರಾಜಕೀಯ ಉದ್ಯಮಿಗಳ ಜೊತೆ ಭಿನ್ನಮತೀಯರ ಸಾಕಷ್ಟು ವ್ಯಾಪಾರ ನಡೆದಿದ್ದರೂ ತಕ್ಕಡಿ ಯಾವ ಕಡೆ ತೂಗುತ್ತಿದೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಬಂದಿರಲಿಲ್ಲ. ಸಂಜೆ 6ರ ಬಳಿಕ ರೆಸಾರ್ಟಿನಿಂದ ಹೊರಬಂದ ಕುಮಾರಸ್ವಾಮಿ ಎಲ್ಲ ಊಹಾಪೋಹಗಳಿಗೂ ಅಲ್ಪವಿರಾಮ ನೀಡಿದರು.
ಸಂಜೆ ಎಲ್ಲ 14 ಶಾಸಕರೊಡನೆ ಬೆಂಗಳೂರಿಗೆ ವಿಮಾನ ಹತ್ತುವುದಾಗಿ ಜಮೀರ್ ಅಹಮದ್ ಮುಖಾಂತರ ಹೇಳಿಸಿದ್ದ ಕುಮಾರಸ್ವಾಮಿ ಕೊನೆಗೆ ತಾವೊಬ್ಬರೇ ಬೆಂಗಳೂರಿನ ವಿಮಾನವೇರಿದ್ದಾರೆ. ಗೋವಾ ಹೋಟೆಲಿನಿಂದ ಹೊರಬಂದನಂತರ ಮಾಧ್ಯಮದವರಿಂದ ತೂರಿಬರುತ್ತಿದ್ದ ಪ್ರಶ್ನೆ ಬಾಣಗಳಿಂದ ನುಣುಚಿಕೊಳ್ಳಲು ಕೂಡ ಅವರು ಯತ್ನಿಸಿದರು. ಪಟ್ಟುಬಿಡದ ಪತ್ರಕರ್ತರಿಗೆ ಉತ್ತರಿಸಿದ ಕುಮಾರಣ್ಣ, "ಸದ್ಯಕ್ಕೆ ಯಾವುದೇ ಊಹಾಪೋಹಗಳಿಗೆ ಉತ್ತರಿಸುವುದಿಲ್ಲ, 11ರಂದು ವಿಶ್ವಾಸಮತದ ವಿರುದ್ಧ ಮತ ಹಾಕುವುದು ಗ್ಯಾರಂಟಿ, ಫಲಿತಾಂಶ ನನ್ನ ಪರವಾಗಿಯೇ ಆಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರೆಡ್ಡಿಯ ಮೌನ : ಈ ನಡುವೆ, ಅಲ್ಲಿಯೇ ಇದ್ದ ಜನಾರ್ದನ ರೆಡ್ಡಿಯವರಿಂದ ಯಾವುದೇ ಹೇಳಿಕೆ ಬಂದಿಲ್ಲ. ದಿಲ್ಲಿಯ ವರಿಷ್ಠರು ಬಂದು ಮಾತುಕತೆ ನಡೆಸಿದ ನಂತರ ರೆಡ್ಡಿಯಿಂದ ಹೇಳಿಕೆ ಹೊರಬೀಳುವ ನಿರೀಕ್ಷೆಯಿದೆ. ಸದ್ಯಕ್ಕೆ ಸಂಧಾನ, ಬಿಜೆಪಿಗೆ ನೀಡಿದ್ದ ಬೆಂಬಲ ಹಿಂತೆಗೆತಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಕಾಂಗ್ರೆಸ್ ಈ ರಾಜಕೀಯ ನಾಟಕದಲ್ಲಿ ಯಾವುದೇ ಪಾತ್ರವಹಿಸಿಲ್ಲವೆಂದು ಯಡಿಯೂರಪ್ಪ ಹೇಳಿರುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪೂರಕವಾಗಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆ ಮುಗಿದ ನಂತರ ಮಾತನಾಡಿದ ಎಚ್ ಡಿ ರೇವಣ್ಣ, ಯಡಿಯೂರಪ್ಪ ಸರಕಾರದ ವಿರುದ್ಧ ಮತ ಚಲಾಯಿಸುವುದಾಗಿ ಪುನರುಚ್ಚರಿಸಿದ್ದಾರೆ.
ಕಾಂಗ್ರೆಸ್ ರಕ್ಷಣಾತ್ಮಕ ಆಟ : ಜೆಡಿಎಸ್ ಮತ್ತು ಬಿಜೆಪಿ ಜಟಾಪಟಿಯನ್ನು ತನಗೆ ಏನೂ ಗೊತ್ತೇ ಇಲ್ಲವೇನೋ ಎಂಬಂತೆ ಗಮನಿಸುತ್ತಿರುವ ಕಾಂಗ್ರೆಸ್, ತಮ್ಮ ಶಾಸಕರು ಬಿಜೆಪಿಯ ಕುದುರೆ ವ್ಯಾಪಾರಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ಕ್ರಮತೆಗೆದುಕೊಳ್ಳುವತ್ತ ಗಮನ ಹರಿಸಿದೆ. ಸರಕಾರವನ್ನು ಕೆಡವುವುದು ನಮ್ಮ ಉದ್ದೇಶವಲ್ಲ, ನಮ್ಮ ಶಾಸಕರನ್ನು ಕಾಪಾಡುವುದೇ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ರಕ್ಷಣಾತ್ಮಕ ಆಟವಾಡಿದ್ದಾರೆ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ, ರಾಜಕೀಯವೆಂದರೇ ಜನ ಅಸಹ್ಯದಿಂದ ನೋಡುತ್ತಾರೆ, ಅಂಥದರಲ್ಲಿ ಬಿಜೆಪಿಯ ರಾಜಕೀಯದಾಟದಿಂದ ಇಡೀ ನಾಡೇ ತಲೆತಗ್ಗಿಸುವಂತಾಗಿದೆ ಎಂದು ತುಂಬ ಜವಾಬ್ದಾರಿಯುತ ರಾಜಕೀಯ ಮುತ್ಸದ್ದಿಯ ಶೈಲಿಯಲ್ಲಿ ಹೇಳಿಕೆ ನೀಡಿದ್ದಾರೆ.
ಈ ಎಲ್ಲ ಕಪಟ ನಾಟಕಗಳನ್ನು ಗಮನಿಸುತ್ತಿರುವ ಕರ್ನಾಟಕದ ಪ್ರಜೆಗಳು ರೋಸಿಹೋಗಿದ್ದಾರೆ. ಯಾರನ್ನಾದರೂ ಪ್ರಶ್ನಿಸಿ ಅಸಹ್ಯ, ಜಿಗುಪ್ಸೆ ವ್ಯಕ್ತಪಡಿಸುತ್ತಿದ್ದಾರೆ. Our state has stooped to all time low ಎಂದು ನಿವೃತ್ತ ಇಂಜಿನಿಯರ್ ಜಿಕೆ ರಾಮಶೇಷನ್ ಒಂದೇ ಮಾತಿನಲ್ಲಿ ತಮ್ಮ ಬೇಸರವನ್ನು ನಮ್ಮ ಸಂಪಾದಕೀಯ ಸಿಬ್ಬಂದಿಗೆ ಮಾತನಾಡುತ್ತಾ ತಿಳಿಸಿದರು.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications