ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನ ಜನಸಾಮಾನ್ಯರನ್ನು ತಲುಪಬೇಕು: ಜೆ. ಸ್ವಾಮಿ

By Mahesh
|
Google Oneindia Kannada News

KRVP award function, BM Sri Kalabhavan, Bengaluru
ಬೆಂಗಳೂರು, ಅ.4: ಬೆಂಗಳೂರಿನ ಬಿ.ಎಂ.ಶ್ರೀ. ಕಲಾಭವನದಲ್ಲಿ ಕಿಕ್ಕಿರಿದು ನೆರೆದಿದ್ದ ವಿಜ್ಞಾನಾಸಕ್ತರ ಸಮ್ಮುಖದಲ್ಲಿ ಪ್ರೊ.ಜಿ.ವೆಂಕಟ ಸುಬ್ಬಯ್ಯ, ಪ್ರೊ. ಹಲ್ದೊಡ್ಡೇರಿ ಸುಧೀಂದ್ರ ಹಾಗೂ ಪ್ರೊ ಸಿ.ಎಸ್ ಯೋಗಾನಂದ ಅವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಯುವ ಸಂಸತ್ ಸದಸ್ಯ, ಸ್ವತಃ ಕಂಪ್ಯೂಟರ್ ವಿಜ್ಞಾನಿ ಜನಾರ್ದನ ಸ್ವಾಮಿ ವಹಿಸಿದ್ದರು.

ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಹಂಬಲದಿಂದ 1976ರಲ್ಲಿ ಸ್ಥಾಪನೆಯಾದ ಪ್ರಾತಿನಿಧಿಕ ಸಂಸ್ಥೆ 'ಕನ್ನಡ ವಿಜ್ಞಾನ ಪರಿಷತ್ತು'. ಡಾ.ಶಿವರಾಮ ಕಾರಂತ, ಜಿ.ಟಿ.ನಾರಾಯಣರಾವ್, ಡಾ.ಬಿ.ಜಿ.ಎಲ್.ಸ್ವಾಮಿ, ಡಾ.ಎಂ.ಶಿವರಾಂ. ಡಾ.ಸಿ.ಆರ್.ಚಂದ್ರಶೇಖರ್, ಡಾ.ಬಿ.ಪಿ.ರಾಧಾಕೃಷ್ಣರಂಥ ವಿಜ್ಞಾನಿಗಳು, ವಿಜ್ಞಾನಬರಹಗಾರರಿಂದ ಮೌಲಿಕ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದ ಹೆಗ್ಗಳಿಕೆಯನ್ನು ಕ.ವಿ.ಪ ಹೊಂದಿದೆ.

ವಿಜ್ಞಾನವನ್ನು ಮಾತೃ ಭಾಷೆಯಲ್ಲಿ ತಿಳಿಹೇಳುವುದರ ಮಹತ್ವವನ್ನು ವಿವರಿಸಿದರು. ಚಿತ್ರದುರ್ಗ ಸಮೀಪದ ಸಣ್ಣ ಹಳ್ಳಿಯಲ್ಲಿ ಕನ್ನಡ ಮಾಧ್ಯ್ಮಮದಲ್ಲೇ ಶಾಲೆ ಕಲಿತು, ನಂತರ ಮಾಧ್ಯಮದ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಉನ್ನತ ಶ್ರೇಣಿಯಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ ಪಡೆದ ತಮ್ಮ ಉದಾಹರಣೆಯ ಮೂಲಕ ಮಾತುಗಳನ್ನು ಆರಂಭಿಸಿದ ಜನಾರ್ದನ ಸ್ವಾಮಿಯವರು ದೇಶ ಕಟ್ಟುವ ಕೆಲಸಕ್ಕೆ ವಿದ್ಯಾವಂತ ಯುವಕರು ಸಜ್ಜಾಗಬೇಕು.

ರಾಜಕೀಯದಿಂದ ದೂರವುಳಿದು ರಾಜಕೀಯದ ಅವ್ಯವಸ್ಥೆಗಳ ಬಗ್ಗೆ ಟೀಕೆ ಮಾಡುವುದರ ಬದಲು, ನೇರವಾಗಿ ರಂಗ ಪ್ರವೇಶಿಸಿ ಉತ್ತಮ ಆಡಳಿತ ಕೊಡುವ ಸಂಕಲ್ಪ ತೊಡಬೇಕು ಎಂದರು. ಪ್ರಶಸ್ತಿ ಪುರಸ್ಕೃತರಾದ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಗಣಿತ ಹಾಗೂ ಮಾಹಿತಿ ತಂತ್ರಜ್ಞಾನ ಪರಿಣತ ಪ್ರೊ.ಸಿ.ಎಸ್.ಯೋಗಾನಂದ ಹಾಗೂ ವಿಜ್ಞಾನಿ-ವಿಜ್ಞಾನ ಬರಹಗಾರ ಪ್ರೊ.ಹಾಲ್ದೊಡ್ಡೇರಿ ಸುಧೀಂದ್ರ ಅವರು ವಿಜ್ಞಾನ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಮಹೇಶ್ ಜೋಶಿ: ಬೆಂಗಳೂರು ದೂರದರ್ಶನ ಕೇಂದ್ರದ ಉಪಮಹಾ ನಿರ್ದೇಶಕರು ಮಾತನಾಡಿ, ವಿಜ್ಞಾನ ಹಾಗೂ ಆಧ್ಯಾತ್ಮ ನಡುವಣ ಸಂಬಂಧ ಇಂದಿಗೂ ಕುತೂಹಲ ಹುಟ್ಟಿಸುವಂಥದ್ದು. ಒಂದನ್ನೊಂದು ದೂರೀಕರಿಸಿ ಚಿಂತನೆ ನಡೆಸಲು ಸಾಧ್ಯವಿಲ್ಲ. ವಿಜ್ಞಾನದ ಕೊನೆಯೊಂದಿಗೆ ಆಧ್ಯಾತ್ಮ ಆರಂಭವಾಗುತ್ತದೆ. ವಿಜ್ಞಾನವನ್ನು ಅಚ್ಚ ಕನ್ನಡದಲ್ಲಿ ಜನಸಾಮಾನ್ಯರನ್ನು ಮುಟ್ಟಿಸುತ್ತಿರುವ ಈ ಮಹನೀಯರ ಸಾಧನೆ ನಾವೆಲ್ಲರೂ ಹೆಮ್ಮೆ ಪಡುವಂಥ ವಿಷಯ. ವಿಜ್ಞಾನ ಪರಿಷತ್ತು ಇಂಥದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ತುತಾರ್ಹ ಎಂದರು.

ಪ್ರೊ.ಜಿ.ವಿ ಭಾಷಣ: ಕನ್ನಡದಲ್ಲಿ ವಿಜ್ಞಾನ ಪ್ರಸರಣೆಯ ಇತಿಹಾಸ ಮೆಲಕು ಹಾಕುತ್ತಾ, ಪಾರಿಭಾಷಿಕ ಪದಗಳ ಕೊರತೆಯಿಂದ ವಿಜ್ಞಾನ ಸಾಹಿತ್ಯ ಆರಂಭದಲ್ಲಿ ಅಷ್ಟು ಬೆಳೆಯಲಿಲ್ಲ. ಕಾಲಕ್ರಮೇಣ ವಿಜ್ಞಾನಿಗಳು ಕನ್ನಡದಲ್ಲಿ ಬರೆಯುವ ಉತ್ಸಾಹ ತೋರಿದ ಕಾರಣ, ಇಂದು ಕನ್ನಡದಲ್ಲಿ ಅತ್ಯುತ್ತಮ ವಿಜ್ಞಾನ ಪುಸ್ತಕಗಳು ಪ್ರಕಟವಾಗುತ್ತಿವೆ ಎಂದರು.

ಪ್ರೊ.ಯೋಗಾನಂದ ಉವಾಚ: ಸತ್ಯೇಂದ್ರನಾಥ ಬೋಸ್ ಅವರ ಉಲ್ಲೇಖವನ್ನು ಪ್ರಸ್ತಾಪಿಸಿ ವಿಜ್ಞಾನಿಯೊಬ್ಬ ತನ್ನ ಮಾತೃಭಾಷೆಯಲ್ಲಿ ವಿಜ್ಞಾನವನ್ನು ಪ್ರಸ್ತುತ ಮಾಡಲು ಅಸಮರ್ಥನೆಂದರೆ ಆತನಿಗೆ ಆ ಭಾಷೆಯ ಜ್ಞಾನವಿಲ್ಲವೆಂದು ಅರ್ಥವಲ್ಲ. ಆತನಿಗೆ ವಿಜ್ಞಾನ ಅರ್ಥವಾಗಿಲ್ಲದಿರುವುದೇ ಮುಖ್ಯ ಕಾರಣ ಎಂದರು.

ಕೊನೆಯಲ್ಲಿ ಮಾತನಾಡಿದ ಪ್ರೊ.ಸುಧೀಂದ್ರ ತಮ್ಮ ಬರಹಗಳಿಗೆ ತಂತ್ರಜ್ಞಾನದ ಆವಿಷ್ಕಾರಗಳು ಅದರಲ್ಲೂ ಕಂಪ್ಯೂಟರ್ -ಇಂಟರ್‌ನೆಟ್ ಹಾಗೂ ಮಾಧ್ಯಮಗಳ ಪ್ರೋತ್ಸಾಹವೇ ಕಾರಣ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X