• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾನಯೋಗಿ ನಿಧನಕ್ಕೆ 3ಜಿಲ್ಲೆಗೆ ಮಾತ್ರ ರಜೆ?

By Mrutyunjaya Kalmat
|

ಬೆಂಗಳೂರು, ಸೆ. 17 : ಸಾವಿರಾರು ಅಂಧ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ದೈವೀ ಸ್ವರೂಪಿ ಪದ್ಮಭೂಷಣ ಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಲಿಂಗೈಕ್ಯರಾದ ನಿಮಿತ್ತ ಅವಿಭಜಿತ ಧಾರವಾಡ ಜಿಲ್ಲೆಗೆ(ಗದಗ, ಧಾರವಾಡ ಮತ್ತು ಹಾವೇರಿ) ಸರಕಾರ ಎರಡು ದಿನಗಳ ರಜೆ ಘೋಷಿಸಿದೆ.

ವಿಶ್ವಮಾನ್ಯರಾಗಿ ಆದರ್ಶ ಜೀವನ ನಡೆಸಿದ ಗಾನಯೋಗಿಗೆ ಸಲ್ಲಬೇಕಾದ ಸೂಕ್ತ ಗೌರವವನ್ನು ಸರಕಾರ ನೀಡಲಿಲ್ಲ ಎನ್ನುವುದು ಕೋಟ್ಯಂತರ ಅಭಿಮಾನಿಗಳ ನೋವಿನ ಸಂಗತಿಯಾಗಿದೆ. ಶ್ರೀಗಳ ನಿಧನದ ನಿಮಿತ್ತ ಎರಡು ದಿನ ರಾಜ್ಯಾದ್ಯಂತ ರಜೆ ಘೋಷಣೆ ಮಾಡಬೇಕಾಗಿತ್ತು ಎನ್ನುವುದು ಭಕ್ತರ ಅಭಿಲಾಷೆಯಾಗಿತ್ತು.

ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ನಾಡಿನ ಸಾವಿರಾರು ಅಂಧರ ಬೆಳಕಾಗಿದ್ದ ದೀಪವೊಂದು ಆರಿದ್ದು ತೀವ್ರ ನೋವನ್ನುಂಟು ಮಾಡಿದೆ. ಪುಟ್ಟರಾಜ ಗವಾಯಿಗಳು ಬರೀ ವ್ಯಕ್ತಿಯಲ್ಲ ಅವರೊಂದು ದೊಡ್ಡ ಶಕ್ತಿ. ಸಮಾಜದ ಏಳಿಗೆಗಾಗಿ ಅವರ ಮಾಡಿದ ಕೈಂಕರ್ಯಗಳು ಎಲ್ಲರಿಗೂ ಆದರ್ಶ. ಅವರ ನಿಧನ ರಾಜ್ಯಕ್ಕೆ ಭಾರಿ ನಷ್ಟವನ್ನುಂಟು ಮಾಡಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಪುಟ್ಟರಾಜ ಗವಾಯಿಗಳು ಭಾರತರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಈ ನಿಟ್ಟಿನಲ್ಲಿ ಮರಣೋತ್ತರ ಪ್ರಶಸ್ತಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸಲಾಗುವುದು. ರಾಜ್ಯ ಸರಕಾರ ಶ್ರೀಗಳಿಗೆ ಏನು ಮಾಡಬೇಕು ಎನ್ನುವುದನ್ನು ಚರ್ಚಿಸಲಾಗುವುದು ಎಂದು ಸಚಿವರಾದ ವಿ ಎಸ್ ಆಚಾರ್ಯ, ಬಸವರಾಜ ಬೊಮ್ಮಾಯಿ ಮತ್ತು ಸಿ ಎಂ ಉದಾಸಿ ಹೇಳಿದ್ದಾರೆ.

ಕರ್ನಾಟಕ ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದೆ. ಜಾತಿ ಬೇಧ ಎಣಿಸದೆ ಎಲ್ಲ ಅಂಧ ಮಕ್ಕಳಿಗೆ ಸಂಗೀತ ಜ್ಞಾನ ನೀಡಿ ದಾರಿದೀಪ ಅಗಿದ್ದು ಹೆಮ್ಮೆ ಪಡುವ ವಿಷಯ. ಇಂತಹ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದು ದುಖಃ ತಂದಿದೆ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ಶನಿವಾರ ಅಂತ್ಯಕ್ರಿಯೆ

ಪುಟ್ಟರಾಜ ಗವಾಯಿಗಳ ಪಾರ್ಥೀವ ಶರೀರವನ್ನು ಭಕ್ತರ ದರ್ಶನಕ್ಕೆ ನಗರದ ಕ್ರೀಡಾಂಗಣದಲ್ಲಿ ಇಡಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಆಚಾರ್ಯ ಹೇಳಿದ್ದಾರೆ. ನಾಳೆ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಗದಗಿಗೆ ಆಗಮಿಸಲಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X