ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಲ್ ಮಹೂರ್ತ ಕೊಡಗಿನ ಆಯುಧ ಪೂಜೆ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Kail Muhurtham, Kodava Festival
ಮಡಿಕೇರಿ, ಸೆ.3: ಕೊಡಗಿನ ವಿಶಿಷ್ಟ ಹಬ್ಬ ಕೈಲ್ ಮುಹೂರ್ತವನ್ನು ಜಿಲ್ಲೆಯಾದ್ಯಂತ ಸಂತಸ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕೊಡವ ಭಾಷೆಯಲ್ಲಿ ಕೈಲ್ ಪೊಳ್ದ್ ಎಂದು ಕರೆಯಲಾಗುತ್ತದೆ. ಕೈಲ್ ಎಂದರೆ "ಆಯುಧ" ಪೊಳ್ದ್ ಎಂದರೆ "ಪೂಜೆ" ಹಾಗಾಗಿ ಕೊಡಗಿನವರ ಪಾಲಿಗೆ ಇದು ಆಯುಧಪೂಜೆ.

ಪ್ರತಿ ವರ್ಷ ಸೆಪ್ಟಂಬರ್ 3 ರಂದು ಕೈಲ್ ಮುಹೂರ್ತವನ್ನು ಆಚರಿಸಲಾಗುತ್ತದೆ. ಇಲ್ಲಿ ಆಚರಿಸಲ್ಪಡುವ ಹಬ್ಬಗಳು ಬೇರೆ ಕಡೆಗಳಲ್ಲಿ ಆಚರಿಸುವ ಹಬ್ಬಗಳಿಗೆ ಹೋಲಿಸಿದರೆ ವಿಶಿಷ್ಟವಾಗಿಯೂ, ವಿಭಿನ್ನವಾಗಿಯೂ ಇರುತ್ತದೆ. ಪ್ರತಿಯೊಂದು ಹಬ್ಬದ ಹಿಂದೆ ಶೂರತ್ವ ಬಿಂಬಿಸುತ್ತಿರುತ್ತದೆ. ಕ್ರೀಡೆಯ ಹಿನ್ನಲೆಯಿರುತ್ತದೆ. ಅಷ್ಟೇ ಅಲ್ಲ ಸಂಪ್ರದಾಯದ ಲೇಪನವೂ ಇರುತ್ತದೆ.

ಹಾಗೆನೋಡಿದರೆ ಕೈಲ್ ಮುಹೂರ್ತ ಹಬ್ಬದ ಆಚರಣೆಗೂ ರೋಮಾಂಚನಕಾರಿ ಹಿನ್ನಲೆಯಿದೆ. ಹಿಂದಿನ ಕಾಲದಲ್ಲಿ ಕೊಡಗು ಗುಡ್ಡಕಾಡಿನಿಂದ ಕೂಡಿತ್ತು. ಹೀಗಾಗಿ ಇಲ್ಲಿ ಕೃಷಿ ಮಾಡಿ ಬದುಕಬೇಕಾದರೆ ಕಾಡು ಪ್ರಾಣಿಗಳೊಂದಿಗೆ ಹೋರಾಡಬೇಕಿತ್ತು. ಆದುದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಕೋವಿಯನ್ನಿಟ್ಟುಕೊಂಡು ಕೃಷಿಯನ್ನು ಹಾಳು ಮಾಡಲು ಬರುವ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು.

ಸಾಮಾನ್ಯವಾಗಿ ಜೂನ್‌ನಿಂದ ಆಗಸ್ಟ್ ತನಕ ಭತ್ತದ ಕೃಷಿ ಕೆಲಸದಲ್ಲಿ ನಿರತರಾಗುತ್ತಿದ್ದುದರಿಂದ ಬೇಟೆಯಾಡುವುದು ಸಾಧ್ಯವಾಗುತ್ತಿರಲಿಲ್ಲ. ಈ ದಿನಗಳಲ್ಲಿ ಕೋವಿಯನ್ನು ನೆಲ್ಲಕ್ಕಿ ಬಾಡೆ (ದೇವರಕೋಣೆ) ಯಲ್ಲಿಡಲಾಗುತ್ತಿತ್ತು. ಆ ನಂತರ ಕೋವಿಯನ್ನು ತೆಗೆಯುತ್ತಿದ್ದದ್ದು ಗದ್ದೆಕೆಲಸ ಮುಗಿಸಿ ಕೈಲ್ ಮುಹೂರ್ತ ಹಬ್ಬದಂದು. ಈ ಹಬ್ಬದ ದಿನ ತಾವು ಉಪಯೋಗಿಸುವ ಕೋವಿ ಸೇರಿದಂತೆ ಆಯುಧಗಳನ್ನು ಹಾಗೂ ಹೆಗಲು ಕೊಟ್ಟು ದುಡಿದ ಎತ್ತುಗಳಿಗೂ ಪೂಜೆ ಮಾಡಿ ಬಳಿಕ ಕೋವಿಯೊಂದಿಗೆ ಕಾಡಿಗೆ ತೆರಳಿ ಬೇಟೆಯಾಡಿ ಮಾಂಸವನ್ನು ಹೊತ್ತು ತರುತ್ತಿದ್ದರು.

ಬಳಿಕ ಮದ್ಯ ಮಾಂಸ ಸೇವಿಸಿ, ಊರಿನ ಮಂದ್ (ಮೈದಾನ)ನಲ್ಲಿ ವಿವಿಧ ಕ್ರೀಡಾಕೂಟ ಏರ್ಪಡಿಸಿ ಸಂಭ್ರಮಿಸುತ್ತಿದ್ದರು. ಇವತ್ತಿನ ದಿನಗಳಲ್ಲಿ ಬೇಟೆಯಾಡುವುದು ನಿಷಿದ್ಧವಾದುದರಿಂದ ಗ್ರಾಮದ ಮೈದಾನಗಳಲ್ಲಿ ಕ್ರೀಡಾಕೂಟ ನಡೆಸಿ ಅಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವಂತಹ ಸ್ಪರ್ಧೆಯನ್ನು ಏರ್ಪಡಿಸಿ ತಮ್ಮ ಶೌರ್ಯ ಮೆರೆಯುತ್ತಾರೆ. ಇಲ್ಲಿ ಮಹಿಳೆಯರು ಕೂಡ ಕೋವಿ ಹಿಡಿದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕೈಲ್ ಮುಹೂರ್ತ ಹಬ್ಬದ ದಿನದಂದು ಕಾಣುವ ವಿಶೇಷವೆಂದರೆ ಕಿರಿಯರಿಂದ ಹಿಡಿದು ವೃದ್ದರವರೆಗೂ ಮದ್ಯ ಸೇವಿಸುತ್ತಾರೆ. ಹಿರಿಯರೇ ಕಿರಿಯರಿಗೆ ಮದ್ಯ ನೀಡುವ ಸಂಪ್ರದಾಯವೂ ಇಲ್ಲಿದೆ. ಪ್ರತಿ ಮನೆಯಲ್ಲಿಯೂ ಹಂದಿ ಮಾಂಸದ ಸಾರು (ಪಂದಿಕರಿ) ಕಡುಬು (ಕಡಂಬಿಟ್ಟು) ಈ ಹಬ್ಬದ ಸ್ಪೆಷಲ್ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X