ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಅಜ್ಜಿ ನೀರು ಕುಡಿದಿಲ್ಲ, ಕುಡಿಯೋಲ್ಲ

By Mahesh
|
Google Oneindia Kannada News

Narasamma ,source:Mid Day
ಬೆಂಗಳೂರು, ಆ.26: ನಗರದ 92 ವರ್ಷದ ವೃದ್ಧೆ ಕಳೆದ 78 ವರ್ಷಗಳಿಂದ ಒಂದು ಹನಿ ನೀರನ್ನು ಕುಡಿದಿಲ್ಲ. ಇದೇನು ಪವಾಡವೋ, ವಿಸ್ಮಯವೋ ವೈದ್ಯಕೀಯ ವಿಜ್ಞಾನಕ್ಕಂತೂ ವಿಶಿಷ್ಟವಾದ ಪ್ರಕರಣವಾಗಿದೆ.

ಮಿಡ್ ಡೇ ಪತ್ರಿಕೆ ವರದಿಯಂತೆ "ನನ್ನ ಚಿಕ್ಕಂದಿನಿಂದ ನಾನು ನೀರು ಕುಡಿದಿಲ್ಲ. ಈಗಲೂ ನನಗೆ ಕುಡಿಯಬೇಕೆನಿಸುವುದಿಲ್ಲ ಹಾಗೂ ನನಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ದಿನಕ್ಕೆರಡು ಬಾರಿ ಕಾಫಿ ಕುಡಿಯುತ್ತೇನೆ ಅಷ್ಟೇ ಎನ್ನುತ್ತಾರೆ 92 ವರ್ಷದ ನರಸಮ್ಮ.

ಇಷ್ಟೇ ಅಲ್ಲ ಕಳೆದ 78 ವರ್ಷಗಳಿಂದ ನರಸಮ್ಮ ಯಾವುದೇ ಚಿಕಿತ್ಸೆಗಾಗಿ ಡಾಕ್ಟರ್ ಮೊರೆ ಹೊಕ್ಕಿಲ್ಲ. ಅಕಸ್ಮಾತ್ ಖಾಯಿಲೆ ಬಿದ್ದರೆ ಆಯುರ್ವೇದ ಔಷಧಿಗಳನ್ನು ಮಾತ್ರ ಬಳಸುತ್ತಾ ಬಂದಿದ್ದಾರೆ. ತಿಂಗಳಿಗೆ ಕಡ್ಡಾಯವಾಗಿ 10 ದಿನ ಉಪವಾಸ ಮಾಡುತ್ತಾರೆ.

ಕಳೆದ 78 ವರ್ಷಗಳಿಂದ ನೀರು ಕುಡಿಯದ ಸ್ಟ್ರಾಂಗ್ ಅಜ್ಜಿ
"ಜನರಿಗೆ ಇದು ನಂಬಲು ಅಸಾಧ್ಯ ಆದರೆ, ನನ್ನ ಜೀವನ ಹೀಗೆ ಸಾಗಿದೆ. ಇದುವರೆವಿಗೂ ನನ್ನ ಕುಟುಂಬದವರಿಗೆ ಮಾತ್ರ ಗೊತ್ತಿತ್ತು. ನಾನು ಯಾರಿಗೂ ಈ ಬಗ್ಗೆ ಹೇಳೋಕೆ ಹೋಗಿರಲಿಲ್ಲ. ಹೇಳಿದರೆ ಡಾಕ್ಟರ್ ಗಳು, ಸಂಶೋಧಕರುಗಳು ನನ್ನ ವಿಚಾರಣೆಗೆ ಒಳಪಡಿಸುತ್ತಾರೆ. ಅದು ನನಗೆ ಇಷ್ಟವಿಲ್ಲ" ಎನ್ನುತ್ತಾರೆ ಜಲವಿರೋಧಿ ಅಜ್ಜಿ.

ಇದಕ್ಕೆ ಏನು ಹಿನ್ನೆಲೆ? :1932 ರ ವೇಳೆಗೆ 14 ವರ್ಷದ ನರಸಮ್ಮನಿಗೆ ಒಂದು ವಿಚಿತ್ರಕಾಯಿಲೆ ಬಾಧಿಸತೊಡಗಿತು. ಆಕೆಯ ಗಂಟಲು ಅಗಾಗ ಒಣಗತೊಡಗಿತು. ನೀರಿನ ದಾಹ ಇಂಗಿಸಿಕೊಳ್ಳಲು ನರಸಮ್ಮ ಕೆಲವೊಮ್ಮೆ ಏನಿಲ್ಲವೆಂದರೂ 10 ಲೀ.ಗೂ ಹೆಚ್ಚು ನೀರು ಕುಡಿದಿದ್ದು ಇದೆ. ಹೀಗೆ ಎರಡು ತಿಂಗಳು ಸಾಗಿತು.

ಅತಿಯಾಗಿ ನೀರು ಸೇವನೆಯಿಂದ ದೇಹದಲ್ಲಿ ನೋವು, ಕೈಕಾಲು ಸೆಳೆತ ಶುರುವಾಯಿತು. ಆ ಸಮಯದಲ್ಲಿ ನರಸಮ್ಮನಿಗೆ ತನ್ನ ಕಾಲು ಕಳೆದುಕೊಳ್ಳುವಷ್ಟು ನೋವುಂಟಾಗಿತ್ತು. ಆಗ ಆಕೆಯ ಪೋಷಕರು ಆಯುರ್ವೇದ ವೈದ್ಯರ ಬಳಿಗೆ ಆಕೆಯನ್ನು ಕರೆ ತಂದರು.

ನರಸಮ್ಮನನ್ನು ಪರೀಕ್ಷಿಸಿದ ವೈದ್ಯರು ಈಕೆ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಷರಾ ಬರೆದುಬಿಟ್ಟರು. ಆದರೆ, ಪೋಷಕರು ಹಠಬಿದ್ದು ಯಾವುದೇ ಚಿಕಿತ್ಸೆಗೂ ಸಿದ್ಧ ಎಂದ ಮೇಲೆ, 48 ದಿನಗಳ ಹಬೆ ಚಿಕಿತ್ಸೆಗೆ ಒಳಪಡಿಸಲಾಯಿತು. ಔಷಧಿಯ ಸಸ್ಯಗಳು ಹಾಗು ಖನಿಜಯುಕ್ತ ಬಿಸಿ ನೀರಿನ ಮುಂದೆ ಕೂತು ಬಲವಂತ ಕೂತ ನರಸಮ್ಮ ಸಾಕಷ್ಟು ಬೆವರು ಸುರಿಸಬೇಕಾಯಿತು. ಕೊನೆಗೂ ಒಂದು ನಿರ್ಧಾರಕ್ಕೆ ಬಂದ ನರಸಮ್ಮ ಇನ್ಮುಂದೆ ನೀರು ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿಬಿಟ್ಟರು.

ಖಾಯಿಲೆ ಬಿದ್ದರೆ ಬರೀ ಅಯುರ್ವೇದ ಔಷಧಿಗಳು ಮಾತ್ರ ಸೇವಿಸತೊಡಗಿದರು. ಅಲೋಪತಿ ಔಷಧ ಸೇವಿಸಿದರೆ ಹೆಚ್ಚು ನೀರು ಕುಡಿಯಬೇಕಾಗುತ್ತದೆ ಎಂದು ಅಲೋಪತಿಗೆ ಗುಡ್ ಬೈ ಹೇಳಿದರು. ಕಡು ಬೇಸಿಗೆಯಲ್ಲಿ ಒದ್ದೆ ಬಟ್ಟೆ ಉಟ್ಟು ನೀರಿನ ದಾಹ ಇಂಗಿಸಿಕೊಂಡಿದ್ದಾರೆ ಈ ಅದ್ಭುತ ಅಜ್ಜಿ

ದೈನಂದಿನ ಆಹಾರದಲ್ಲಿ ಒಣದ್ರಾಕ್ಷಿ, ಹಣ್ಣು ಹಂಪಲು, ಗೆಡ್ಡೆ ಗೆಣಸು ಖಾಯಂ, ತಾನೇ ಅಡುಗೆ ಮಾಡಿಕೊಂಡು ಉಣ್ಣುವುದು ಈಕೆಗೆ ಇಷ್ಟ. ತನ್ನ ಬಟ್ಟೆಗಳನ್ನು ತಾನೇ ಒಗೆದು ಮಡಿ ಹರಿವಿಹಾಕುವ ಅಜ್ಜಿ ಕನಿಷ್ಠವೆಂದರೂ ಸುಮಾರು 5 ಗಂಟೆಗಳ ಕಾಲ ಪೂಜೆ ಪುನಸ್ಕಾರಕ್ಕೆ ಮೀಸಲಿಡುತ್ತಾರೆ.

ಇಷ್ಟೆ ಅಲ್ಲ ಈ ಪವಾಡ ಸದೃಶ ಜೀವನ ನಡೆಸುತ್ತಿರುವ ಅಜ್ಜಿ 2000ನೇ ಇಸವಿಯಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಪ್ರವಾಸ ಮಾಡಿ ಬಂದಿದ್ದಾರೆ. ಪ್ರವಾಸ ಸಮಯದಲ್ಲಿ ಮೂರು ಕಪ್ ಕಾಫಿ ಮಾತ್ರ ಆಕೆಯ ಆಹಾರವಾಗಿತ್ತು ಎಂಬುದು ಅಚ್ಚರಿಯಾದರೂ ಸತ್ಯ.

ನರಸಮ್ಮ ಸದ್ಯಕ್ಕೆ ತಮ್ಮ ಮೊಮ್ಮಕ್ಕಳು ನೋಡಲು ಸಿಂಗಪುರ ಪ್ರವಾಸಕ್ಕೆ ಹೋಗಲು ರೆಡಿಯಾಗಿದ್ದಾರೆ. ನರಸಮ್ಮಜ್ಜಿಯ ಕಿರಿಯ ಮೊಮ್ಮಗಳಾದ ಟಿಸಿಎಸ್ ಉದ್ಯೋಗಿ ಅರುಣಾ ಹೀಗೆ ಹೇಳುತ್ತಾರೆ" ಅಜ್ಜಿ ನೀರು ಕುಡಿಯುವುದನ್ನು ನಾನು ನೋಡೇ ಇಲ್ಲ. ತಂಪು ಪಾನೀಯ, ಪಾನಕ, ನೀರು ಮಜ್ಜಿಗೆಯನ್ನು ಕುಡಿಯುವುದಿಲ್ಲ. ಆದರೂ ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯ". ಹೌದು ಇದು ವಿಚಿತ್ರ, ವಿಶಿಷ್ಟ, ವಿಸ್ಮಯ. ನರಸಮ್ಮಜ್ಜಿಗೆ ದೇವರ ಕೃಪೆ ಹೀಗೆ ಇರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X