For Daily Alerts
ಮಾವೋವಾದಿಗಳೊಂದಿಗೆ ಮಾತುಕತೆಗೆ ಸಿದ್ಧ : ಮಮತಾ
ನವದೆಹಲಿ, ಆ. 19 : ಮಾವೋವಾದಿಗಳನ್ನು ಬೆಂಬಲಿಸುತ್ತಿದ್ದಾರೆಂಬ ಆರೋಪದ ನಡುವೆಯೇ ಕೇಂದ್ರದ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿ ಮಾವೋವಾದಿಗಳ ಜೊತೆಗಿನ ಮಾತುಕತೆ ಮಧ್ಯೆಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದಾರೆ. ಮಾವೋವಾದಿಗಳಿಗೆ ಬೆಂಬಲಿಸಿದ್ದನ್ನು ಖಂಡಿಸಿ ವಿರೋಧಿ ಪಕ್ಷಗಳು ಲೋಕಸಭೆಯಲ್ಲಿ ತೀವ್ರ ಪ್ರತಿಭಟನೆ ಆರಂಭಿಸಿವೆ.
ಮಾವೋವಾದಿಗಳ ನಾಯಕ ಕಿಶನ್ ಜೀ ಮುಂದಿಟ್ಟಿರುವ ಕದನ ವಿರಾಮ ಪ್ರಸ್ತಾವವನ್ನು ಸ್ವಾಗತಿಸಿರುವ ಮಮತಾ, ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಬೇಕು. ಅಂತಿಮ ನಿರ್ಧಾರ ಮಾತ್ರ ಕೇಂದ್ರ ಸರಕಾರಕ್ಕೆ ಸೇರಿದ್ದು. ಇದಕ್ಕೆಂದೆ ಪ್ರತ್ಯೇಕ ಸಚಿವಾಲಯ ಇರುವುದರಿಂದ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ. ಆದರೆ, ಸರಕಾರ ಮತ್ತು ಮಾವೋವಾದಿಗಳ ಮಧ್ಯಸ್ಥಿಕೆ ಸಿದ್ಧವಿರುವುದಾಗಿ ಸೂಚ್ಯವಾಗಿ ತಿಳಿಸಿದ್ದಾರೆ.
ಮಾವೋವಾದಿಗಳ ನಾಯಕ ಅಜಾದ್ ಕುರಿತಾಗಿ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ಲಾಲ್ ಗಢ್ ದಲ್ಲಿ ಏರ್ಪಡಿಸಲಾಗಿದ್ದ ತೃಣಮೂಲ ಕಾಂಗ್ರೆಸ್ ಸಮಾವೇಶದಲ್ಲಿ ಮಾವೋವಾದಿಗಳ ನಾಯಕ ಅಜಾದ್ ಅವರ ಹತ್ಯೆ ಮಾಡಿದ್ದು ಸರಿಯಲ್ಲ ಎಂದು ಮಮತಾ ಹೇಳಿಕೆ ನೀಡಿದ್ದರು. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತ ಸ್ವಾತಂತ್ರವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.