ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸರ್ಕಾರಿ ಶಾಲೆ ಬಾಡಿಗೆ ವರ್ಷಕ್ಕೆ ರು.675

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Chamarajanagar govt school
ಚಾಮರಾಜನಗರ, ಆ.5: ತುಕ್ಕು ಹಿಡಿದ ನಮ್ಮ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಚಾಮರಾಜನಗರದ ಬಣಜಿಗರ ಕೇರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.ವಾರ್ಷಿಕವಾಗಿ ಇಂತಿಷ್ಟು ಬಾಡಿಗೆ ಕಟ್ಟುವ ಮೂಲಕ ಸ್ವಂತ ಕಟ್ಟಡವಿಲ್ಲದ ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಸೇರಿದೆ.

ಈ ಶಾಲೆ ಹೇಗಿದೆ ಎಂದರೆ ವಾಸ ಮಾಡಲು ಕೂಡ ಯೋಗ್ಯವಾಗಿಲ್ಲದೆ, ದನದ ದೊಡ್ಡಿಯಂತಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ ಅಷ್ಟೇ ಅಲ್ಲ ಇವತ್ತೋ ನಾಳೆಯೋ ಬೀಳುವಂತಹ ಹಳೆಯ ನಾಡ ಹೆಂಚಿನ ಮನೆ ಇದಾಗಿದೆ. ಆದರೆ ದುರಂತವೆಂದರೆ ಈ ಕಟ್ಟಡ ಸ್ವಂತದಾಗಿರದೆ ಬಾಡಿಗೆಯದ್ದಾಗಿದೆ.

ಶಿಥಿಲಾವಸ್ಥೆಯಲ್ಲಿರುವ ಶಾಲೆ ನಗರದ ಮಧ್ಯೆ ಇದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಲೀ ಇದರತ್ತ ಗಮನಹರಿಸದಿರುವುದು ಶಿಕ್ಷಣದ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುವುದನ್ನು ತೋರಿಸುತ್ತಿದೆ. ಹಾಗೆನೋಡಿದರೆ ಈ ಶಾಲೆಗೂ ಶತಮಾನಗಳ ಇತಿಹಾಸವಿದೆ.

ಸ್ವಂತ ಸೂರಿಲ್ಲದ ಶಾಲೆ: ಮಾರು125 ವರ್ಷಗಳ ಹಿಂದೆ ಬಣಜಿಗರ ಸಮುದಾಯಕ್ಕೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದು ಶಾಲೆ ಆರಂಭಿಸಲಾಗಿದ್ದು ಅಲ್ಲಿಂದ ಇಲ್ಲಿತನಕವೂ ಹೇಗಿದೆಯೋ ಹಾಗೆಯೇ ಇದೆ. ಪ್ರಸ್ತುತ ವರ್ಷಕ್ಕೆ ಕಟ್ಟಡದ ಬಾಡಿಗೆ 675 ರೂಪಾಯಿಯನ್ನು ಪಾವತಿಸಲಾಗುತ್ತಿದೆ ಎನ್ನಲಾಗಿದೆ.

ಈ ಶಾಲೆಯಲ್ಲಿ 1 ರಿಂದ 7 ರವರೆಗೆ ತರಗತಿಗಳು ನಡೆಯುತ್ತಿದ್ದು, ಸುಮಾರು 80ಮಕ್ಕಳು ಓದುತ್ತಿದ್ದಾರೆ. ಒಂದನೇ ತರಗತಿಯಲ್ಲಿ 4, ಎರಡು ಮತ್ತು ಮೂರರಲ್ಲಿ ತಲಾ 5, ನಾಲ್ಕರಲ್ಲಿ 10, ಐದರಲ್ಲಿ 8, ಆರರಲ್ಲಿ 18, ಏಳರಲ್ಲಿ 30 ಮಕ್ಕಳು ಇದ್ದಾರೆ. ಕೊಠಡಿಗಳ ಕೊರತೆಯಿಂದಾಗಿ 1, 2 ಮತ್ತು 3ನೇ ತರಗತಿ ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ, 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳನ್ನು ಮತ್ತೊಂದು ಕೊಠಡಿಯಲ್ಲಿ ಕೂರಿಸಿ ಪಾಠ ಹೇಳಿಕೊಡಲಾಗುತ್ತಿದೆ. ಆದರೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರತ್ಯೇಕ ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದೆ.

ಇಲ್ಲಿ ಪಾಠ ಕಲಿಯುವ ವಿದ್ಯಾರ್ಥಿಗಳು ಬೆಂಚು ಡೆಸ್ಕ್ ಮುಂತಾದ ಪೀಠೋಪಕರಣಗಳ ಮುಖವನ್ನೇ ನೋಡಿಲ್ಲ. ಕಿತ್ತು ಹೋದ ನೆಲದಲ್ಲಿಯೇ ಕುಳಿತು ಪಾಠ ಕೇಳುತ್ತಾರೆ, ಬಗ್ಗಿ ಕುಳಿತು ಬರೆಯುತ್ತಾರೆ.

ಊಟವುಂಟು, ಆಟವಿಲ್ಲ: ಪ್ರತ್ಯೇಕ ಅಡುಗೆ ಕೊಠಡಿ ಇಲ್ಲದಿದ್ದರೂ ಹೇಗೋ ಇದ್ದುದರಲ್ಲಿಯೇ ಬಿಸಿಯೂಟ ನಡೆಯುತ್ತಿದೆ. ಆದರೆ ಊಟ ಮಾಡಲು ಮಕ್ಕಳ ಪರದಾಡುವ ರೀತಿ ಮಾತ್ರ ಭಯಂಕರವಾಗಿದೆ. ಶೌಚಾಲಯ, ಆಟದ ಮೈದಾನ ಈ ಶಾಲೆ ವಿದ್ಯಾರ್ಥಿ ಗಳಿಗೆ ಗಗನಕುಸುಮವಾಗಿದೆ.

ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ಮೂವರು ಸಹಶಿಕ್ಷಕರನ್ನೊಳಗೊಂಡ ಶಿಕ್ಷಕ ವೃಂದವಿದೆ ಆದರೆ ಮೂಲ ಸೌಲಭ್ಯವೇ ಇಲ್ಲಿ ಇಲ್ಲದ ಮೇಲೆ ಅವರು ತಾನೆ ಏನು ಮಾಡಿಯಾರು? ಇರುವುದರಲ್ಲಿ ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. ತಮ್ಮ ಶಾಲೆ ಮಕ್ಕಳು ಯಾವುದರಲ್ಲಿಯೂ ಕಡಿಮೆಯಾಗಬಾರದೆಂದು ಯೋಗ, ಧ್ಯಾನ, ಸಂಸ್ಕೃತ ಪಾಠ ಕಲಿಸುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ. ಶಾಲೆ ಹಿಂದುಳಿದಿರಬಹುದು ಆದರೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳದೆ ಕಲಿಯುತ್ತಿದ್ದಾರೆ.

ಕ್ಯಾರೇ ಎನ್ನದ ಇಲಾಖೆ: ಶಾಲೆಗೊಂದು ಸ್ವಂತ ಕಟ್ಟಡ ಕಟ್ಟಿ ಕೊಡಿ, ಎಲ್ಲಾ ಶಾಲೆಗಳಿಗಿರುವಂತೆ ಇಲ್ಲಿಯೂ ಮೈದಾನ, ಶೌಚಾಲಯ ನಿರ್ಮಿಸಿ ಎಂಬ ಮನವಿಯನ್ನು ಹಿಡಿದು ಜಿಲ್ಲಾ ಉಸ್ತು ವಾರಿ ಸಚಿವರು. ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರು ಹೀಗೆ ಎಲ್ಲರಿಗೂ ಮನವಿ ನೀಡಿದ್ದಾರೆ. ನೀಡುತ್ತಲೇ ಇದ್ದಾರೆ ಇಲ್ಲಿನ ಮುಖ್ಯ ಶಿಕ್ಷಕರಾದ ರಂಗಸ್ವಾಮಿ.

ಆದರೆ ಯಾರೂ ಕೂಡ ಕ್ಯಾರೇ ಎನ್ನದಿರುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಣ ಕ್ಷೇತ್ರಕ್ಕೆ ಕೋಟ್ಯಾಂತರ ಅನುದಾನ ನೀಡಿದ್ದೇವೆ. ಸರ್ಕಾರಿ ಶಾಲೆಗಳೆಲ್ಲಾ ಉದ್ದಾರ ಆಗಿ ಹೋಗಿವೆ ಎಂದು ಭೋಂಗು ಬಿಡುವ ಶಿಕ್ಷಣ ಸಚಿವರು ಈ ಶಾಲೆಗೆ ಒಮ್ಮೆ ಭೇಟಿ ನೀಡಿದರೆ ಸಾಕು ನಿಮ್ಮ ಸಾಧನೆಯ ಅನಾವರಣವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X