• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತಾರಾಧಿಮಠದ ಯತಿಗಳ ಚಾತುರ್ಮಾಸ್ಯ

By * ಚಂದ್ರಶೇಖರ್, ಸವಣೂರು
|

ಸವಣೂರು,ಆ.4: ನಗರದಲ್ಲಿ ಶ್ರೀಮದ್ ಉತ್ತರಾಧೀಮಠದ ಯತಿಗಳಾದ ಶ್ರೀ ಸತ್ಯಾತ್ಮತೀರ್ಥರ 15ನೇ ಚಾತುರ್ಮಾಸ್ಯ ಹಾಗೂ ಉಡುಪಿ ಕಾಣಿಯೂರ ಮಠದ ಶ್ರೀ ವಿದ್ಯಾವಲ್ಲಭ ತೀರ್ಥರ 19 ನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಅಂತಿಮ ಹಂತದ ಎಲ್ಲ ಸಿದ್ದತೆಗಳನ್ನೂ ಭರದಿಂದ ಕೈಗೊಳ್ಳಲಾಗುತ್ತಿದೆ.

ಸುಕ್ಷೇತ್ರವಾದ ಸವಣೂರಿನ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಸತತ 51 ರಿನಗಳ ಕಾಲ ನೆರವೇರಲಿರುವ ಈ ಬೃಹತ್ ಧಾರ್ಮಿಕ ಕಾರ್ಯಕ್ರಮ ಹಲವಾರು ಐತಿಹಾಸಿಕ ಮಹತ್ವಗಳನ್ನೂ ಹೊಂದಿದ್ದು, ಶ್ರೀಮಠದ ಸಹಸ್ರಾರು ಭಕ್ತ ಸಮೂಹ ಶ್ರೀಗಳ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.

ಶ್ರೀ ಸತ್ಯಬೋಧ ತೀರ್ಥರ ಜನ್ಮ ತ್ರಿಶತಮಾನೋತ್ಸವ, ಶ್ರೀ ಸತ್ಯಧ್ಯಾನತೀರ್ಥರ ಪೀಠಾರೋಹಣದ ಶತಮಾನೋತ್ಸವ ವರ್ಷಾಚರಣೆಯೊಂದಿಗೆ ಉಭಯ ಶ್ರೀಗಳ ಸಾನಿಧ್ಯದ ಈ ಚಾತುರ್ಮಾಸ್ಯದ ಅವಧಿ, ಸಜ್ಜನರಿಗೆ ಒಂದು ಪವಿತ್ರಕಾಲ. ಜ್ಞಾನ ಗಂಗೆಯ ಸಾಕ್ಷಾತ್ಕಾರದೊಂದಿಗೆ ಸಾಧನೆಗೆ ಸದವಕಾಶ. ಪುಣ್ಯಗಳಿಸುವ ಮಹಾಪ್ರಸಂಗ. ಪ್ರತಿನಿತ್ಯ ಮೂಲರಾಮದೇವರ ದರ್ಶನ. ಪಾಠ ಪ್ರವಚನ, ಮುದ್ರಾಧಾರಣ, ಜನ್ಮಾಂತರಗಳ ಪುಣ್ಯದಿಂದ ಒದಗಿಬಂದಿರುವ ಪರ್ವಕಾಲ.

ಪ್ರತಿನಿತ್ಯದ ಪಾಠ ಪ್ರವಚನ, ಧನ್ವಂತರಿ ಹೋಮ, ಮಹಾಪೂಜೆಯೊಂದಿಗೆ ಸಂಜೆ ವಿದ್ವತ್‌ಸಭೆ, ಸಂಗೀತ ಕಾರ್ಯಕ್ರಮ, ಶ್ರೀಗಳಿಂದ ಅಮೃತೋಪದೇಶ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಶ್ರೀ ಸತ್ಯಬೋಧರ ವೃಂದಾವನಕ್ಕೆ ಸುವರ್ಣ ಕವಚ ಸಮರ್ಪಣೆ, ಧ್ವನಿಸುರಳಿಯ ಬಿಡುಗಡೆ, ಭಾಗವತಗೋಷ್ಟಿ, ದಾಸ ಸಾಹಿತ್ಯ ಸಮ್ಮೇಳನ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಬೃಹತಿ ಸಹಸ್ರಯಾಗ, ಪವಮಾನ ಹೋಮ, ಋಗ್ವೇದ ಸ್ವಾಹಾಕಾರ, ಪಾರಾಯಣ, ಅಷ್ಟೋತ್ತರ ಮೊದಲಾದ ಕಾರ್ಯಕ್ರಮಗಳೂ ವಿಶೇಷ ಸಂದರ್ಭದಲ್ಲಿ ನೆರವೇರಲಿದೆ.

ಭವ್ಯ ಶೋಭಾಯಾತ್ರೆ : ಬುಧವಾರ ಆ.4 ರಂದು ಸಂಜೆ ಸವಣೂರಿಗೆ ಆಗಮಿಸಲಿರುವ ಉಭಯ ಶ್ರೀಗಳನ್ನು ಭವ್ಯ ಶೋಭಾಯಾತ್ರೆಯ ಮೂಲಕ ಸ್ವಾಗತಿಸಿಕೊಳ್ಳಲಾಗುತ್ತದೆ. ಅತ್ಯಂತ ಆಕರ್ಷಣೀಯವಾದ ರಥಯಾತ್ರೆಯೊಂದಿಗೆ ಆನೆ ಅಂಬಾರಿಗಳ ಮೂಲಕ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬರಲಿದೆ. ನಾಡಿನ ಹಲವಾರು ಸ್ಥಳಗಳಿಂದ ಭಜನಾ ತಂಡಗಳು, ವಿವಿಧ ವಾದ್ಯ ವೈಭವ ರೂಪಕಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.

ಚಾತುರ್ಮಾಸ್ಯ ವೃತ ಆಚರಣೆಯ ಹಿನ್ನಲೆ ಹಾಗೂ ಮಹತ್ವ

ಸನಾತನವಾದ ವೇದ ಪ್ರಪಂಚದಲ್ಲಿ ಸೂಚಿತವಾದ ಜೀವನ ಕ್ರಮದ ಅನ್ವಯ, ಸನ್ಯಾಸಾಶ್ರಮ ಸ್ವೀಕರಿಸಿದ ಯತಿಗಳಿಗೆ ಪ್ರತ್ಯೇಕವಾದ ವೃತ ನಿಯಮಗಳಿದ್ದು, ಅದರಲ್ಲಿ ಚಾತುರ್ಮಾಸ್ಯವೂ ಅತ್ಯಂತ ಪ್ರಮುಖವಾಗಿದೆ.

ಸನ್ಯಾಸಾಶ್ರಮ ಸ್ವೀಕರಿಸುವ ಯತಿಗಳು ಸಂಸಾರದ ಎಲ್ಲ ಬಂಧನಗಳಿಂದ ಮುಕ್ತರಾಗಿದ್ದು, ನಿಶ್ಚಿತವಾದ ನೆಲೆ ಹಾಗೂ ವಾಸಸ್ಥಾನ (ನಿವಾಸ) ಹೊಂದಿರುವದಿಲ್ಲ. ನಿತ್ಯ ಸಂಚಾರವೇ ಮುಖ್ಯ ಧರ್ಮವಾಗಿರುವ ಯತಿಗಳು, ಸಂಚಾರದೊಂದಿಗೆ ಪ್ರತಿನಿತ್ಯದ ಧರ್ಮ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಾರೆ. ಇಂತಹ ಯತಿಗಳಿಗೂ ವರ್ಷದ ಕೆಲವು ಕಾಲ ಸಂಚಾರವನ್ನು ತೊರೆದು, ಒಂದೇ ಸ್ಥಳದಲ್ಲಿ ವಾಸ್ತವ್ಯ ಮಾಡಬೇಕು ಎಂಬ ನಿಯಮಗಳನ್ನು ವೇದ ಪ್ರಪಂಚ ಜಾರಿಗೆ ತಂದಿದೆ.

ಧಾರ್ಮಿಕ ಕಾರಣಗಳು : ಆಶಾಢ ಮಾಸ ಮಳೆಗಾಲದ ಅವಧಿಯಾಗಿದ್ದು, ಕ್ರಿಮಿಕೀಟಗಳ ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಯತಿಗಳಲ್ಲಿ ಇರುವ ಭೂತದಯೆ (ಹಿಂಸಾ ವಿರೋಧಿ) ಮನೋಭಾವದ ಅಡಿ, ಯತಿಗಳ ಸಂಚಾರದಿಂದ ಯಾವದೇ ಕ್ರಿಮಿ ಕೀಟಾದಿಗಳಿಗೂ ತೊಂದರೆ, ಪ್ರಾಣ ಹಾನಿಯಾಗಬಾರದು. ಯಾವದೇ ಸಂದರ್ಭದಲ್ಲಿಯೂ ಯತಿಗಳು ವಾಸ್ತವ್ಯದ ಸ್ಥಳದಿಂದ ಹೊರಗೆ ಬರಬಾರದು ಎಂಬ ನಿಯಮಾವಳಿಗಳಿವೆ. ಚಾತುರ್ಮಾಸ್ಯದ ಅವಧಿಯ ಪೂರ್ಣ ಅಗತ್ಯವಾದ ಎಲ್ಲ ದಿನಬಳಕೆಯ ವಸ್ತುಗಳನ್ನೂ ಮುಂಚಿತವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಸಂಪ್ರದಾಯವೂ ಆಚರಣೆಯಲ್ಲಿದೆ.

ಶ್ರೀಮಠದಲ್ಲಿರುವ ಶಿಷ್ಯರ ಮೇಲೆ ಅನುಗ್ರಹ ಮುಖಿಗಳಾಗಿರುವ ಯತಿಗಳು, ಈ ಚಾತುಮಾಸ್ಯದ ಅವಧಿಯಲ್ಲಿ ಪಾಠ-ಪ್ರವಚನದ ಬಗ್ಗೆ ವಿಶೇಷ ಆಧ್ಯತೆ ನೀಡಬೇಕು. ಶಿಷ್ಯರ ಉನ್ನತಿಗಾಗಿ ವಿಶೇಷ ಕಾಳಜಿ ತೋರಬೇಕು. ನಿತ್ಯ ಸಂಚಾರವೂ ಇಲ್ಲದ ಕಾರಣ ಪಾಠ ಪ್ರವಚನಗಳು ಸಂಪೂರ್ಣಗೊಳ್ಳಬೇಕು ಎಂಬ ಉದ್ದೇಶವೂ ಈ ಆಚರಣೆಯ ಹಿನ್ನಲೆಯಲ್ಲಿದೆ.

ಪ್ರಾಚೀನ ಪರಂಪರೆಯಲ್ಲಿ ಶ್ರೀಮದ್ ಉತ್ತರಾಧಿಮಠದಲ್ಲಿ ನೀಡಲಾಗುವ ತಪ್ತ ಮುದ್ರಾಧಾರಣೆ ಕಾರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಭಗವಂತನ ಚಿನ್ನೆಗಳನ್ನು ದೇಹದ ಮೇಲೆ ಮೂಡಿಸಿಕೊಂಡು, ಶರೀರದ ಮೇಲಿನ ವ್ಯಾಮೋಹವನ್ನು ತೊರೆಯಬೇಕು. ಈ ನಶ್ವರವಾದ ದೇಹವನ್ನು ದೇವರ ಸೇವೆಗೆ ಮೀಸಲಾಗಿರಿಸಬೇಕು ಎಂಬ ಚಿಂತನೆಗಳಿವೆ.

ಚಾತುರ್ಮಾಸ್ಯದ ಅವಧಿಯಲ್ಲಿ ವಿಶೇಷವಾದ ತಪಃ ಶಕ್ತಿಯನ್ನು ಹೊಂದಿರುವ ಯತಿಗಳಿಂದ ತಪ್ತ ಮುದ್ರಾಧಾರಣೆಯನ್ನು ಶ್ರೀಮಠದ ಪರಂಪರೆಯ ಭಕ್ತರು ಪಡೆಯಲೇಬೇಕು ಎಂಬ ಸೂಚನೆ ಇದೆ. ಯತಿಗಳ ಶಿಷ್ಯರಿಗೆ ಈ ತಪ್ತ ಮುದ್ರಾ ಧಾರಣೆಯನ್ನು ಖಡ್ಡಾಯಗೊಳಿಸಲಾಗಿರುತ್ತದೆ. ಯತಿಗಳ ವಾಸ್ತವ್ಯದ ಸ್ಥಳಕ್ಕೆ ಬರುವ ಶ್ರೀಮಠದ ಎಲ್ಲ ಶಿಷ್ಯ ವರ್ಗ ಯತಿಗಳಿಂದ ತಪ್ತ ಮುದ್ರಾ ಧಾರಣೆಹೊಂದಲು ಈ ಆಚರಣೆ ಸಹಾಯಕವಾಗಿದೆ.

ಪ್ರಾಚೀನ ಪರಂಪರೆಯಲ್ಲಿ ಯತಿಗಳ ಸೇವೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಅತ್ಯಂತ ನಿಷ್ಟೆ ಹಾಗೂ ಭಕ್ತಿಯಿಂದ ಯತಿಗಳ ಸೇವೆಯನ್ನು ನಿರಂತರವಾಗಿ ಮಾಡಿದಲ್ಲಿ ಉತ್ತಮ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯತಿಗಳ ಸಾಂಗತ್ಯ, ಮಂತ್ರೋಪದೇಶ ಹಾಗೂ ಜಪ ಧ್ಯಾನಗಳು ಅನಂತ ಫಲಗಳೊಂದಿಗೆ ಉತ್ತಮ ಸದ್ಗತಿಗೆ ಕಾರಣವಾಗುತ್ತದೆ ಎಂಬ ಚಿಂತನೆ ಈ ಆಚರಣೆಯ ಹಿಂದೆ ಇದೆ.

ಚಾತುರ್ಮಾಸ್ಯದ ಅವಧಿಯಲ್ಲಿ ದಿನನಿತ್ಯದ ಆಹಾರ ಕ್ರಮದಲ್ಲಿಯೂ ಅಮೂಲಾಗ್ರವಾದ ಬದಲಾವಣೆ ಕಾಣಬಹುದಾಗಿದೆ. ಆಷಾಢ ಮಾಸದಲ್ಲಿ ತರಕಾರಿಗಳ ಬಳಕೆಯನ್ನು ವರ್ಜಿಸಲಾಗಿದ್ದು, ಕೇವಲ ಒಣಗಿದ ಬೇಳೆ ಕಾಳು, ಧಾನ್ಯಗಳನ್ನು ಮಾತ್ರ ಬಳಸಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ತರಕಾರಿಗಳಲ್ಲಿಯೂ ಸೂಕ್ಷ್ಮಾಣು ಜೀವಿಗಳು, ಹುಳ ಹುಪ್ಪಡಿಗಳು ಇರುವ ಕಾರಣದಿಂದ ಈ ಆಚರಣೆ ಜಾರಿಗೆ ಬಂದಿದೆ.

ಶ್ರಾವಣದಲ್ಲಿ ಮೊಸರು ಹಾಗೂ ಭಾದ್ರಪದ ಮಾಸದಲ್ಲಿ ಹಾಲಿನ ಬಳಕೆಯನ್ನು ತ್ಯಜಿಸಲಾಗುತ್ತದೆ. ಹಾಲು-ಮೊಸರು ಸಮೃದ್ದಿಯ ಸಂಕೇತವಾಗಿದ್ದು, ಇದನ್ನೂ ತ್ಯಜಿಸುವ ತನ್ಮೂಲಕವೂ ದೇಹ ಪೋಷಣೆಗೆ ಪ್ರಾಧಾನ್ಯತೆ ಕಡಿಮೆಯಾಗಲಿ ಎಂಬ ಚಿಂತನೆ ಈ ಆಚರಣೆಯಲ್ಲಿದೆ. ಆಶ್ವೀಜ ಮಾಸದಲ್ಲಿ ದ್ವಿದಳ ಧಾನ್ಯಗಳ ಬಳಕೆಯನ್ನು ಶಾಸ್ತ್ರಗಳು ನಿರಾಕರಿಸಿದೆ. ಕೇವಲ ಕಂದ ಮೂಲ (ಗಡ್ಡೆ ಗೆಣಸುಗಳನ್ನು ಆಹಾರದ ರೂಪದಲ್ಲಿ ಬಳಸಲಾಗುತ್ತದೆ)

ಶ್ರಾವಣ ಮಾಸದಲ್ಲಿ ಮೊಸರಿನ ಬಳಕೆ ದೇಹದ ಪ್ರಕೃತಿಗೂ ಅಪಥ್ಯವಾಗಿದ್ದು, ಮೊಸರು ಹಾಲು ಕಫಕಾರಕ. ಆದ್ದರಿಂದ ಅದನ್ನು ತ್ಯಜಿಸಬೇಕು. ವಾತ, ಪಿತ್ತ, ಕಫ ಪ್ರಕೃತಿಯನ್ನು ತಡೆಗಟ್ಟಲೂ ಈ ಆಹಾರ ಕ್ರಮ ಅತ್ಯಂತ ವೈeನಿಕವಾಗಿದೆ. ಈ ಅವಧಿಯಲ್ಲಿ ಜೀರಿಗೆ, ಮೆಣಸಿನ ಕಾಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವದು ವಾತಾವರಣದ ಅನ್ವಯವೂ ಆರೋಗ್ಯದಾಯಕ ಎಂಬ ಅಭಿಪ್ರಾಯ ಆಯುರ್ವೆದ ವೈಧ್ಯರದ್ದಾಗಿದೆ.

ಈ ಚಾತುಮಾಸ್ಯ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ : 08378-241748 ಅಥವಾ 9902258158, 9448119158 ಸಂಪರ್ಕಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more