ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿ ನಿಧನಕ್ಕೆ ಸಂತಾಪಗಳ ಸುರಿಮಳೆ

By Shami
|
Google Oneindia Kannada News

Late Shikaripura Harihareshwara
ಬೆಂಗಳೂರು, ಜುಲೈ 27 : ವಿಶ್ವಕನ್ನಡಿಗ ಶಿಕಾರಿಪುರ ಹರಿಹರೇಶ್ವರ ಅವರ ನಿಧನಕ್ಕೆ ಪಂಡಿತರು, ಪಾಮರರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. ನಾನಾ ಕನ್ನಡ ಸಂಘ ಸಂಸ್ಥೆಗಳು ಹರಿ ಅವರ ಕನ್ನಡ ಸೇವೆಯನ್ನು ನೆನೆಸಿಕೊಂಡಿವೆ. ಜಗತ್ತಿನ ಮೂಲೆಮೂಲೆಗಳಿಂದ ಸಂತಾಪ ಸೂಚಕ ಸಂದೇಶಗಳು ದಟ್ಸ್ ಕನ್ನಡ ಪತ್ರಿಕಾ ಕಚೇರಿ ತಲುಪುತ್ತಿವೆ.

ಸಾಹಿತಿ, ಪತ್ರಕರ್ತ ಮತ್ತು ಕನ್ನಡ ನುಡಿ ಸೇವಕರಾಗಿದ್ದ ಹರಿಹರೇಶ್ವರ ಅವರು ಜುಲೈ 22ರಂದು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅಮೆರಿಕಾ ಸರಕಾರದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಅವರು ಸೇವೆಯಿಂದ ನಿವೃತ್ತಿ ಪಡೆದ ನಂತರ ಭಾರತಕ್ಕೆ ಹಿಂದಿರುಗಿ ಮೈಸೂರಿನಲ್ಲಿ ವಾಸಿಸುತ್ತಿದ್ದರು.

"ಲೇಖಕ ಮತ್ತು ಅಮೆರಿಕನ್ನಡಿಗರ ಆಪ್ತಮಿತ್ರ ಹರಿಹರೇಶ್ವರ ಅವರ ಅಗಲಿಕೆಯಿಂದ ಅಮೆರಿಕದಲ್ಲಿ ಕನ್ನಡ ಬಡವಾಯಿತು. ಅವರ ನಿರ್ಗಮನ ನಮಗೆಲ್ಲ ತುಂಬಲಾರದ ನಷ್ಟ" ಎಂದು ಅಕ್ಕ ಸಂಸ್ಥೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ಶೋಕ ವ್ಯಕ್ತಪಡಿಸಿದೆ.

"ಶಿಕಾರಿಪುರ ಹರಿಹರೇಶ್ವರರು ದೇಹಾಂತರಾದ ಸುದ್ದಿ ನಮ್ಮೆಲ್ಲರನ್ನೂ ದಿಗ್ಭ್ರಮೆ ಉಂಟುಮಾಡಿದೆ. ಅವರು ನಮ್ಮ ಹಿರಿಯಣ್ಣನಂತೆ "ನಾವಿಕ" ಸಂಸ್ಥೆಗೆ ಮಾರ್ಗದರ್ಶಕರಾಗಿದ್ದರು. ಅಮೇರಿಕನ್ನಡದ ಮೂಲಕ ಅಮೇರಿಕಾದ ಎಲ್ಲ ಕನ್ನಡಿಗರಿಗೂ ಅತ್ಯಂತ ಪರಿಚಿತರಾಗಿದ್ದರು. ಅವರು ಒಬ್ಬ ಒಳ್ಳೆಯ ಸಾಹಿತಿಯೂ ಅಲ್ಲದೆ ಓರ್ವ ಸಭ್ಯ ನಾಗರಿಕನೂ ಆಗಿದ್ದರು" ಎಂದು ನಾವಿಕ ಪ್ರಕಟಣೆ ತಿಳಿಸಿದೆ.

ಮೈಸೂರು, ಬೆಂಗಳೂರು, ಶಿವಮೊಗ್ಗ, ಹಾಸನ, ತಮಿಳುನಾಡು, ತುಮಕೂರು ಹಾಗೂ ಅಮೆರಿಕಾದ ಮೂಲೆಮೂಲೆಗಳಲ್ಲಿರುವ ಕನ್ನಡಿಗರು ಹರಿ ಅಗಲಿಕೆಗೆ ಕಂಬನಿ ಮಿಡಿದ್ದಾರೆ. ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಸೂಚಿಸುವ ಸಂದೇಶಗಳನ್ನು ದಟ್ಸ್ ಕನ್ನಡ ಮೂಲಕ ರವಾನಿಸುತ್ತಿದ್ದಾರೆ.

ಶ್ರದ್ಧಾಂಜಲಿ ಸಭೆ : ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಹರಿಹರೇಶ್ವರ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಇದೇ ಜುಲೈ 30ರಂದು ಶುಕ್ರವಾರ ಏರ್ಪಡಿಸಲಾಗಿದೆ. ಸನ್ನಿವೇಲ್ ನಲ್ಲಿರುವ ಸನಾತನ ಧರ್ಮ ಕೇಂದ್ರದಲ್ಲಿ [ಕೈಫರ್ ರಸ್ತೆ] ನಡೆಯುವ ಈ ಸಭೆಯಲ್ಲಿ ಹರಿ ಅಭಿಮಾನಿಗಳು ಭಾಗವಹಿಸಬಹುದೆಂದು ಕೋರಲಾಗಿದೆ. ಸಮಯ ಸಂಜೆ 6ರಿಂದ 7.30. ಸಭೆಯಲ್ಲಿ ಹರಿ ಅವರನ್ನು ಕುರಿತು ಮಾತನಾಡಲು ಬಯಸುವವರು ಅಲಮೇಲು ಅಯ್ಯಂಗಾರ್ ಅವರಿಗೆ ಮುಂಚಿತವಾಗಿ ತಿಳಿಸಬೇಕೆಂದೂ ಕೋರಲಾಗಿದೆ. E-mail : [email protected] 408-252-2699

ಸಂತಾಪ ಸಂದೇಶಗಳನ್ನು ಇಲ್ಲಿ ಓದಿರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X