ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧತ್ವವನ್ನು ಮೆಟ್ಟಿ ನಿಂತ ದರ್ಜಿ ರುದ್ರಾಚಾರಿ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Blind Tailor Rudrachari
ತನ್ನೆರಡು ಕಣ್ಣುಗಳನ್ನು ಕಳೆದುಕೊಂಡಿರುವುದರಿಂದ ಕಳೆದ ಇಪ್ಪತ್ತಾರು ವರ್ಷಗಳಿಂದ ಅವರಿಗೆ ಈ ಜಗತ್ತು ಕತ್ತಲೆಯಾಗಿಯೇ ಕಾಣುತ್ತಿದೆ. ಹಾಗೆಂದು ಅವರು ತನ್ನ ಬದುಕನ್ನು ಮಾತ್ರ ಕತ್ತಲೆ ಮಾಡಿಕೊಂಡಿಲ್ಲ.

ಕಣ್ಣು ಕುರುಡಾದರೂ ಇವತ್ತು ಇತರೆ ಟೈಲರ್‌ಗಳು ನಾಚುವಂತೆ ತನ್ನ ಕೈಚಳಕದಿಂದ ಬಟ್ಟೆ ಹೊಲಿಯುವುದರ ಮೂಲಕ ಬೇರೆಯವರಿಗೆ ಹೊರೆಯಾಗದೆ ತಮ್ಮ ಬದುಕಿನ ಬಂಡಿಯನ್ನು ತಾವೇ ಎಳೆಯುತ್ತಿದ್ದಾರೆ.

ಕೈ, ಕಾಲು, ಕಣ್ಣು ಎಲ್ಲವೂ ಚೆನ್ನಾಗಿದ್ದು, ದುಡಿಯದೆ ಸೋಮಾರಿಗಳಂತೆ ಅಲೆದಾಡುವ ಅದೆಷ್ಟೋ ಯುವಕರಿಗೆ ಇವರು ಮಾದರಿಯಾಗಿದ್ದಾರೆ. ಯಾರಪ್ಪ ಇವರು ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದಲ್ಲವೆ?

ಅವರ ಹೆಸರು ರುದ್ರಾಚಾರಿ. ಕೊಡಗಿನ ಸೋಮವಾರಪೇಟೆ ತಾಲೂಕಿನ ಹಾನ್‌ಗಲ್‌ಶೆಟ್ಟಳ್ಳಿಯವರು. ಈಗ ಅವರಿಗೆ 52 ವರ್ಷ. ಹುಟ್ಟುವಾಗ ಎಲ್ಲರಂತಿದ್ದ ಇವರು ಬೆಳೆದು ದೊಡ್ಡವರಾದಾಗ ಜೀವನೋಪಾಯಕ್ಕೆ ಟೈಲರಿಂಗ್ ವೃತ್ತಿಯನ್ನು ಆರಿಸಿಕೊಂಡರು.

ಸೋಮವಾರಪೇಟೆಯ ಅಲೆಕಟ್ಟೆ ರಸ್ತೆಯಲ್ಲಿ ಚಿಕ್ಕದಾದ ಟೈಲರ್ ಅಂಗಡಿಯನ್ನಿಟ್ಟುಕೊಂಡು ವೃತ್ತಿ ಜೀವನ ಆರಂಭಿಸಿದರು. ಸರಸ್ವತಿ ಎಂಬುವರನ್ನು ಕೈಹಿಡಿದು ಸುಖಸಂಸಾರ ಸಾಗಿಸುತ್ತಿದ್ದರು. ಆದರೆ ವಿಧಿ ಅವರ ಬದುಕಿನಲ್ಲಿ ಬೇರೆಯದ್ದೇ ಆಟ ಆಡಿತ್ತು. ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆಯೇ ಅವರ ಕಣ್ಣು ಮಂಜಾಯಿತು.

ಬೆಳಿಗ್ಗೆ ಎದ್ದು ನೋಡಿದರೆ ಏನೂ ಕಾಣದ ಸ್ಥಿತಿ. ಅವರ ಜಂಘಾಬಲವೇ ಕುಸಿದು ಹೋಯಿತು. ಎಲ್ಲೆಡೆ ತೋರಿಸಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜವಾಗದೆ ಪೂರ್ಣ ಪ್ರಮಾಣದ ಅಂಧರಾಗಿಯೇ ಉಳಿದು ಹೋದರು.

ತನ್ನ ಎರಡು ಕಣ್ಣು ಹೊರಟು ಹೋಯಿತಲ್ಲ ಇನ್ನು ಹೇಗಪ್ಪಾ ಬದುಕೋದು ಎಂದು ಯೋಚಿಸುತ್ತಾ ಕುಳಿತರೆ ಅದರಿಂದ ಪ್ರಯೋಜನವಿಲ್ಲ ಎಂಬುವುದು ಅವರಿಗೂ ಗೊತ್ತಿತ್ತು. ಹಾಗಾಗಿ ಅಂಧರಾದರೇನು ತಾನು ಕಲಿತ ವೃತ್ತಿಯನ್ನು ಹೇಗಾದರು ಮಾಡಿ ಮುಂದುವರಿಸಬೇಕೆಂದುಕೊಂಡರಲ್ಲದೆ ಇದನ್ನು ಸವಾಲಾಗಿ ಸ್ವೀಕರಿಸಿದರು.

ಗ್ಯಾಲರಿ:
ಕೆಲಸ ನಿರತ ಅಂಧ ಟೈಲರ್ ರುದ್ರಾಚಾರಿ

ಆಗ ಅವರ ನೆರವಿಗೆ ಬಂದದ್ದು ಮಡಿಕೇರಿಯ ರೋಟರಿ ಸಂಸ್ಥೆ. ರೋಟರಿ ಸಂಸ್ಥೆಯವರು ಅಂಗವಿಕಲರಿಗೆ ವಿವಿಧ ತರಬೇತಿ ನೀಡಿ ಅವರನ್ನು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುತ್ತಾರೆ ಎಂಬ ವಿಚಾರ ತಿಳಿದ ರುದ್ರಾಚಾರಿಯವರಿಗೆ ಬಾಳಲ್ಲಿ ಆಶಾಕಿರಣವೊಂದು ಮೂಡಿತು.

ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ತರಬೇತಿ ಪಡೆಯಲು ಮುಂದಾದರು. ಇವರ ಕೋರಿಕೆಗೆ ಸ್ಪಂದಿಸಿದ ರೋಟರಿ ಮಂಗಳೂರಿನ ಅತ್ತಾವರದಲ್ಲಿ ಸುಮಾರು 40 ದಿನಗಳ ಕಾಲ ಟೈಲರಿಂಗ್ ತರಬೇತಿ ಪಡೆದರು. ಮೊದಲೇ ಟೈಲರಿಂಗ್ ಬರುತ್ತಿದ್ದರಿಂದ ಅವರಿಗೆ ಕಷ್ಟವಾಗಲಿಲ್ಲ.

ಶ್ರದ್ಧೆಯಿಂದ ತರಬೇತಿಯನ್ನು ಮುಗಿಸಿದ ಅವರು ಊರಿಗೆ ಮರಳಿದ ಅವರು ತಮ್ಮ ಕಾಯಕವನ್ನು ಮುಂದುವರೆಸಿದರು. ಇವರಿಗೆ ಟೈಲರಿಂಗ್‌ಗೆ ಬೇಕಾದ ವಿಶೇಷವಾದ ಅಳತೆಪಟ್ಟಿ, ಹೊಲಿಗೆ ಯಂತ್ರ, ಟೇಬಲ್ ನೀಡಿದ್ದು ಇದನ್ನು ಸದುಪಯೋಗಪಡಿಸಿಕೊಂಡ ರುದ್ರಾಚಾರಿಯವರು ತಮ್ಮ ಬಾಳ ಬಂಡಿಯನ್ನು ಬಟ್ಟೆಹೊಲಿಯುತ್ತಾ ಮುಂದೂಡತೊಡಗಿದರು.

ಇವರಿಗೆ ಪತ್ನಿ ಸರಸ್ವತಿ ಕೂಡ ಸಾಥ್ ನೀಡಿದರು. ಇವತ್ತು ಇವರಿಂದ ತಾಯಿ ಗಂಗಮ್ಮ, ಪತ್ನಿ, ಇಬ್ಬರು ಪುತ್ರರನ್ನೊಳಗೊಂಡ ಕುಟುಂಬ ಜೀವನ ಸಾಗಿಸುತ್ತಿದೆ. ಜೀವನೋಪಾಯಕ್ಕೆ ಪುತ್ರರಿಬ್ಬರು ತಮ್ಮದೇ ಆದ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲಾ ರೀತಿಯ ಬಟ್ಟೆಗಳನ್ನು ಹೊಲಿಯಲು ರುದ್ರಾಚಾರಿಯವರು ತಯಾರಿದ್ದರೂ ಗ್ರಾಹಕರ ಕೊರತೆ ಇವರನ್ನು ಕಾಡುತ್ತಿದೆ.

ಆದರೂ ದಿನಕ್ಕೆ 100 ರಿಂದ 150 ರೂಪಾಯಿಯಷ್ಟು ಸಂಪಾದಿಸುವುದಾಗಿ ಹೇಳುತ್ತಾರೆ.
ಭವಿಷ್ಯದಲ್ಲಿ ಸಿದ್ದ ಉಡುಪು ತಯಾರಿಸಿ ಮಾರಾಟ ಮಾಡುವ ಯೋಜನೆ ಅವರಲ್ಲಿದೆ. ಆದರೆ ಅಷ್ಟೊಂದು ಹಣ ಅವರಲ್ಲಿಲ್ಲ.

ಬ್ಯಾಂಕ್‌ನಿಂದ ಸಾಲ ಪಡೆಯೋಣವೆಂದರೆ ಅಂಧರಾಗಿರುವುದರಿಂದ ನಿಮ್ಮಿಂದ ಕಟ್ಟಲು ಸಾಧ್ಯನಾ? ಎಂಬ ಸಂಶಯದ ನೋಟ ಬೀರುವ ಮೂಲಕ ನಮ್ಮಿಂದ ಯಾವ ಸಾಲವೂ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಇದು ಅವರಿಗೆ ನೋವು ತಂದಿದೆ.

ನನಗೆ ಸಾಲ ನೀಡಿದರೆ ಅದನ್ನು ಹೇಗಾದರು ದುಡಿದು ತೀರಿಸುತ್ತೇನೆ ಎಂಬ ಆತ್ಮವಿಶ್ವಾಸ ಅವರಲ್ಲಿದೆ. ಅದು ಏನೇ ಇರಲಿ ಅಂಧನಾಗಿದ್ದರೂ ತಾನು ಯಾರಿಗೂ ಭಾರವಾಗದೆ ದುಡಿದು ಬದುಕುವ ಛಲ ಹೊಂದಿರುವ ರುದ್ರಾಚಾರಿಯವರ ಮುಂದೆ ನಾವು ಕುಬ್ಜರಾಗಿ ಬಿಡುತ್ತೇವೆ. ಅವರಿಗೊಂದು ಹ್ಯಾಟ್ಸಪ್ ಹೇಳಬೇಕೆಂದರೆ 08276-319768ಗೆ ಕರೆ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X