ಹಾಲೆಂಡ್ ಗೆ ಉರುಗ್ವೆ ವಿರುದ್ಧ ಭರ್ಜರಿ ಜಯ

12 ವರ್ಷದ ಬಳಿಕ ಸೆಮೀಸ್ ತಲುಪಿದ್ದ ಡಚ್ಚರು ಪ್ರಪ್ರಥಮ ಬಾರಿಗೆ ವಿಶ್ವಕಪ್ ಎತ್ತುವ ತವಕದಲ್ಲಿದ್ದಾರೆ. ಇಂದು ಮಧ್ಯರಾತ್ರಿ ನಡೆಯುವ ಎರಡನೇ ಸೆಮಿಸ್ ನಲ್ಲಿ ಜರ್ಮನಿ ಹಾಗೂ ಸ್ಪೇನ್ ಸೆಣಸಲಿದ್ದು, ಗೆದ್ದ ತಂಡ ಹಾಲೆಂಡ್ ಜೊತೆಗೆ ಅಂತಿಮ ಹಣಾಹಣಿಯಲ್ಲಿ ಸೆಣಸಲಿದೆ.
ಡಿಫೆಂಡರ್ ಫುಸಿಲ್ ಹಾಗೂ 'ಹ್ಯಾಂಡ್ ಆಫ್ ಗಾಡ್' ಖ್ಯಾತಿಯ ಮುಂಪಡೆ ಆಟಗಾರ ಸವಾರೇಜ್ ಸೆಮಿಸ್ ಗೆ ಅಲಭ್ಯರಾಗಿದ್ದು, ಉರುಗ್ವೆಗೆ ಮುಳುವಾಯಿತು. ಆದರೂ, ಡಿಯಾಗೋ ಫೊರ್ಲಾನ್ ನಾಯಕತ್ವದಲ್ಲಿ ಸಮರ್ಥವಾಗಿ ಆಡಿ, ಮೆಚ್ಚುಗೆ ಗಳಿಸಿತು.
ಗೋಲುಗಳು: ಮೊದಲಾರ್ಧದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. ಆದರೆ, ದ್ವಿತೀಯಾರ್ಧದಲ್ಲಿ ರೊಬೆನ್, ಸ್ನೈಡರ್, ವಾನ್ ಪರ್ಸಿ ದಾಳಿಗೆ ಉರುಗ್ವೆ ತತ್ತರಿಸಿಬಿಟ್ಟಿತು. ಹಾಲೆಂಡ್ ಪರ ಮೊದಲ ಗೋಲನ್ನು ಸುಮಾರು 35 ಯಾರ್ಡ್ ದೂರದಿಂದ ನಾಯಕ ವಾನ್ ಬ್ರೊಖೊರ್ಸ್ಟ್ ಅದ್ಬುತವಾಗಿ ಹೊಡೆದರು.
ಉರುಗ್ವೆ ಪರ ನಾಯಕ ಡಿಯಾಗೋ ಫೊರ್ಲಾನ್ ಕೂಡಾ ಸುಮಾರು 30 ಯಾರ್ಡ್ ಮೂಲಕ ಅದ್ಭುತ ಕಿಕ್ ಮೂಲಕ ಗೋಲು ಹೊಡೆದದ್ದು ವಿಶೇಷ.
ಮಧ್ಯಂತರದ ನಂತರ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಡಚ್ಚರು, ಉರುಗ್ವೆ ರಕ್ಷಣಾ ವ್ಯೂಹವನ್ನು ಛೇಧಿಸಿ ಮುನ್ನುಗ್ಗಿದರು. 70ನೇ ನಿಮಿಷದ ನಂತರ ಮೂರು ನಿಮಿಷದಲ್ಲಿ ವೆಸ್ಲೆ ಸ್ನೈಡರ್ ,ರೊಬೆನ್ ತಲಾ ಒಂದೊಂದು ಗೋಲು ಗಳಿಸಿ, ಉರುಗ್ವೆ ಆಸೆಗೆ ತಣ್ಣೀರೆರಚಿದರು.
ಪಂದ್ಯ ಮುಕ್ತಾಯಕ್ಕೆ ಇನ್ನು 60 ಸೆಕೆಂಡುಗಳಿದ್ದಾಗ, ಉರುಗ್ವೆಯ ಪೆರೆರಾ ಗೋಲು ಗಳಿಸಿ, ಡಚ್ಚರಿಗೆ ಆತಂಕ ತಂದೊಡ್ಡಿದರು. ಆದರೆ, ಅಂತಿಮವಾಗಿ ಡಚ್ಚರ ಆಕ್ರಮಣಕಾರಿ ದಾಳಿಗೆ ಉರುಗ್ವೆಯ ರಕ್ಷಣಾ ವ್ಯೂಹ ಶರಣಾಗಿದ್ದ್ದು ಹಾಲೆಂಡ್ ಜಯಕ್ಕೆ ಕಾರಣವಾಯಿತು. ಕಿತ್ತಳೆ ಬಣ್ಣತೊಟ್ಟ ಡಚ್ ಅಭಿಮಾನಿಗಳು ವಿಶ್ವಕಪ್ ಪ್ರತಿಕೃತಿ ಹಿಡಿದು ಮುತ್ತಿಡಲಾರಂಭಿಸಿದರು.












Click it and Unblock the Notifications