ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆ ಮೊದಲೇ ಅಮಾನತಿನ ಉಡುಗೊರೆ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Sub-inspector Mamata
ಶಿವಮೊಗ್ಗ, ಜು. 7 : ತನ್ನ ಮೇಲೆ ದೌರ್ಜನ್ಯವೆಸಗಿದ ಗಂಡನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದ ಮಹಿಳೆಯ ಬಳಿಯಲ್ಲಿ ಸ್ಥಳಕ್ಕೆ ಹೋಗಿಬರಲು ಬಾಡಿಗೆ ಕಾರು ಕೇಳಿದ ಆರೋಪದ ಮೇಲೆ ಮಹಿಳಾ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಮತಾರವರನ್ನು ಜಿಲ್ಲಾ ರಕ್ಷಣಾಧಿಕಾರಿ ಮುರುಗನ್ ಅಮಾನತು ಮಾಡಿದ್ದಾರೆ. ಆಗಸ್ಟ್ 20ರಂದು ಮದುವೆಯಾಗುತ್ತಿರುವ ಮಮತಾಗೆ ಅಮಾನತಿನ ಉಡುಗೊರೆ ದಕ್ಕಿದಂತಾಗಿದೆ.

ಒಂದು ವರ್ಷದ ಹಿಂದೆ ಹುಬ್ಬಳ್ಳಿಯ ಮಾರುತಿ ಎಂಬಾತನಿಗೆ ರಾಗಿಗುಡ್ಡ ನಿವಾಸಿ ಪುಷ್ಪಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆರಂಭದಿಂದಲೇ ಪುಷ್ಪಳ ಗಂಡ ಮಾರುತಿ ದೌರ್ಜನ್ಯವೆಸಗುತ್ತಿದ್ದ. ಆರಂಭದ ಮೂರು ತಿಂಗಳು ಗುಡಿಸಲೊಂದರಲ್ಲಿ ಕೂಡಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಹೇಗೋ ತಪ್ಪಿಸಿಕೊಂಡು ಬಂದ ಪುಷ್ಪ ಹಾಗೂ ಆಕೆಯ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಲು ಹೋದರು.

ಆದರೆ, ಮಹಿಳಾ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಮತಾ ದೂರನ್ನು ಸ್ವೀಕರಿಸದೇ, ಇದು ಹುಬ್ಬಳ್ಳಿ ಠಾಣೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿಗೆ ಹೋಗಿ ದೂರು ನೀಡಿ. ಇಲ್ಲಿ ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ತಾಕೀತು ಮಾಡಿದ್ದರು. ಆಗ ಪುಷ್ಪ ಮತ್ತು ಆಕೆಯ ಪೋಷಕರು ನೇರವಾಗಿ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ತೆರಳಿ, ದೂರು ಪಡೆಯದ ಸಬ್‌ಇನ್ಸ್ ಪೆಕ್ಟರ್ ಮಮತಾ ವಿರುದ್ಧ ಮೌಖಿಕ ದೂರು ನೀಡಿದ್ದರು. ಆಗ ಜಿಲ್ಲಾ ರಕ್ಷಣಾಧಿಕಾರಿ ಮುರುಗನ್ ಕೂಡಲೇ ಮಮತಾರಿಗೆ ಫೋನ್ ಮಾಡಿ ದೂರು ಪಡೆಯುವಂತೆ ತಾಕೀತು ಮಾಡಿದ್ದರು.

ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ದೂರು ಪಡೆದ ಸಬ್‌ಇನ್ಸ್‌ಪೆಕ್ಟರ್ ಮಮತಾ, ಆ ದೂರನ್ನು ಗಂಭೀರವಾಗಿ ತೆಗೆದುಕೊಳ್ಳದೇ ಕಾಟಾಚಾರಕ್ಕೆ ಕ್ರಮ ಕೈಗೊಳ್ಳುತ್ತಿರುವ ನಾಟಕವಾಡತೊಡಗಿದಳು. ದೂರು ದಾಖಲಾಗಿ ಎರಡು ತಿಂಗಳಾಗುತ್ತಾ ಬಂದರೂ ಸಹ ಆರೋಪಿ ಹುಬ್ಬಳ್ಳಿಯ ಮಾರುತಿಯನ್ನು ವಿಚಾರಣೆಗೆ ಹಾಜರುಪಡಿಸಿರಲಿಲ್ಲ. ಪದೇ ಪದೇ ದೌರ್ಜನ್ಯಕ್ಕೊಳಗಾದ ಪುಷ್ಪ ಸಬ್‌ಇನ್ಸ್‌ಪೆಕ್ಟರ್ ಮಮತಾರವರಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿದರೂ ಸಹ ಏನೂ ಪ್ರಯೋಜನವಾಗಲಿಲ್ಲ. ಅಲ್ಲದೇ, ಹುಬ್ಬಳ್ಳಿಗೆ ಹೋಗಿ ಆರೋಪಿಯನ್ನು ಕರೆತರಲು ಸಮಯವಿಲ್ಲ. ಅಲ್ಲಿಗೆ ಹೋಗಿ ಬರಲು ಖಾಸಗಿ ಕಾರಿನ ವ್ಯವಸ್ಥೆ ಮಾಡಿಕೊಡು ಎಂಬಂತೆಲ್ಲಾ ಮಾತನಾಡಿದ್ದಾಳೆ. ಮಹಿಳಾ ಹೋರಾಟಗಾರ್ತಿ ಭುವನೇಶ್ವರಿ ಎಂಬುವವರ ಸಹಕಾರ ಪಡೆದ ಪುಷ್ಪ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಈ ಬಗ್ಗೆ ದೂರು ನೀಡಿದರು. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಮಮತಾರವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದರು.

ಇಡೀ ಪ್ರಕರಣವನ್ನು ಕೂಡಲೇ ಗಂಭೀರವಾಗಿ ತೆಗೆದುಕೊಳ್ಳಬೇಕು. ಆರೋಪಿ ಹುಬ್ಬಳ್ಳಿಯ ಮಾರುತಿಯನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಮುರುಗನ್ ಆದೇಶಿಸಿದ್ದು, ಈ ಪ್ರಕರಣವನ್ನು ಕೋಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್‌ಕುಮಾರ್‌ರವರಿಗೆ ವರ್ಗಾಯಿಸಿದ್ದಾರೆ.

ಮದುವೆಯ ಉಡುಗೊರೆ : ಮೂಲತಃ ಮಂಡ್ಯದವರಾದ ಮಮತಾ ಶಿವಮೊಗ್ಗದ ಮಹಿಳಾ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಂಡ್ಯದ ಖಡಕ್ ಭಾಷೆಯಲ್ಲಿಯೇ ನೊಂದುಬಂದ ಮಹಿಳೆಯರ ಜೊತೆ ಮಾತನಾಡುತ್ತಿದ್ದರು ಎಂಬ ಆರೋಪಗಳಿವೆ. ಮಮತಾ ಆಗಸ್ಟ್ 20ರಂದು ವಿವಾಹವಾಗಲಿದ್ದಾಳೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X