ವಿಲ್ಲಾ ಇದ್ದರೆ ಭಯವಿಲ್ಲ ಸ್ಪೇನ್ ಗಾನಾ ಬಜಾನಾ
ಜೋಹಾನ್ಸ್ ಬರ್ಗ್, ಜು.4:ಸ್ಪೇನ್ ಹಾಗೂ ಪೆರುಗ್ವೆ ವಿರುದ್ಧ ನಡೆದ ಪಂದ್ಯ ವಿಶ್ವಕಪ್ ಕ್ವಾಟರ್ ಫೈನಲ್ ಗಳಲ್ಲಿ ಉತ್ತಮ ಪಂದ್ಯ ಎನ್ನಬಹುದು. ಪಂದ್ಯದಲ್ಲಿ ದಾಖಲಾಗಿದ್ದು ಒಂದೇ ಗೋಲಾದರೂ ಉತ್ತಮ ಗುಣಮಟ್ಟದ ಫುಟ್ಬಾಲ್ ಪ್ರದರ್ಶನವನ್ನು ಸ್ಪೇನ್ ಹಾಗೂ ಪೆರುಗ್ವೆ ಆಟಗಾರರು ನೀಡಿದರು. ಸ್ಪೇನ್ ತಂಡವನ್ನು ಎಂದಿನಂತೆ ಮುಂಪಡೆ ಆಟಗಾರ ವಿಲ್ಲಾ ಪಾರು ಮಾಡಿದರು.
ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ ಸಮಬಲದ ಹೋರಾಟ ಕಂಡು ಬಂದಿತು. 83 ನೇ ನಿಮಿಷದಲ್ಲಿ ಡೇವಿಡ್ ವಿಲ್ಲಾ ಹೊಡೆದ ಗೋಲು ಕೊನೆಗೆ ಸ್ಪೇನ್ ವಿಜಯಕ್ಕೆ ಕಾರಣವಾಯಿತು. ಈ ವಿಶ್ವಕಪ್ ನಲ್ಲಿ 5 ಗೋಲು ದಾಖಲಿಸಿರುವ ವಿಲ್ಲಾ, ಚಿನ್ನದ ಬೂಟಿನ ಮೇಲೆ ಕಣ್ಣಿಟ್ಟಿದ್ದಾರೆ.
ಉಳಿದಂತೆ ಸ್ಪೇನ್ ಪರ ಇನ್ನೆಸ್ಟಾ, ಚಾವಿ, ಗೋಲಿ ಕಾಸಿಲಾಸ್ ಅದ್ಭುತ ಪ್ರದರ್ಶನ ನೀಡಿದರು. ಸ್ಪೇನ್ ಜಯಕ್ಕೆ ಉತ್ತಮ ಪಾಸಿಂಗ್ ಕಾರಣವಾದರೆ, ಪೆರುಗ್ವೆ ಆಟದಲ್ಲಿ ಅದು ಮಾಯವಾಗಿತ್ತು.
ವಿಶ್ವಕಪ್ ವಿಡಿಯೋಗಳು:
ಇಂಗ್ಲೆಂಡ್ ಗೆ ಗರ್ವಭಂಗ, ಜರ್ಮನಿಗೆ ವಿಜಯೋತ್ಸವ
ಚಿಲಿಯನ್ನು ಹೊಸಕಿದ ಸಾಂಬಾ ಬಾಯ್ಸ್
ಲ್ಯಾಂಪರ್ಡ್ ಕ್ಷಮೆ ಕೋರಿದ ಫೀಫಾ
ಪೆರುಗ್ವೆ ಸೋಲಿಗೆ ಏನು ಕಾರಣ: 40ನೇ ನಿಮಿಷದಲ್ಲಿ ವಾಲ್ಡೇಜ್ , ಸ್ಪೇನ್ ಗೋಲಿ ಕಾಸಿಲೊಸ್ ರನ್ನು ವಂಚಿಸಿ ಗೋಲು ಗಳಿಸಿದರೂ ಆಫ್ ಸೈಡ್ ಎಂದು ಲೈನ್ ರೆಫ್ರಿ ಸೂಚಿಸಿದ್ದರಿಂದ ಗೋಲನ್ನು ಅನರ್ಹಗೊಳಿಸಲಾಯಿತು.
ದ್ವಿತೀಯಾರ್ಧದಲ್ಲಿ ಪೆರುಗ್ವೆಗೆ ಅಪೂರ್ವ ಅವಕಾಶ ಲಭಿಸಿತ್ತು. 58 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಗೋಲಾಗಿಸುವಲ್ಲಿ ಕರ್ಡಾಜೊ ವಿಫಲರಾದರು. ಕಾಸಿಲೊಸ್ ಅದ್ಭುತ್ ಸೇವ್ ಮಾಡಿ, ಸ್ಪೇನ್ ಆತ್ಮವಿಶ್ವಾಸ ಹೆಚ್ಚಿಸಿದರು. ವಾಲ್ಡೆಜ್ , ಬಾರಿಸ್ ,ಸಾಂತಾ ಕ್ರೂಜ್ ದಾಳಿಯನ್ನು ಸ್ಪೇನ್ ನ ಕೇಪ್ ಡಿವಿಲ್ಲಾ, ರಮೊಸ್ ಉಳ್ಳ ರಕ್ಷಣಾ ಪಡೆ ಸಮರ್ಥವಾಗಿ ಎದುರಿಸಿದರು.
ಅಭಿಮಾನಿಗಳಿಗೆ ನಿರಾಶೆ: ಪೆರುಗ್ವೆ ವಿಶ್ವಕಪ್ ಗೆದ್ದು, ಸೂಪರ್ ಮಾಡೆಲ್ ಲಾರಿಸ್ಸಾ ಬೆತ್ತಲೆ ಓಡುವುದನ್ನು ಕಲ್ಪಿಸಿಕೊಂಡು ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಅತ್ತ ಅರ್ಜೆಂಟೀನಾ ಹೊರದೂಡಲ್ಪಟ್ಟಿರುವುದರಿಂದ ಮರಡೋನಾ ಬೆತ್ತಲೆ ಓಟ ಕೂಡಾ ಇಲ್ಲದಂತಾಗಿದೆ.
50 ರ ದಶಕದಲ್ಲಿ ಸೆಮೀಸ್ ತಲುಪಿದ್ದ ಸ್ಪೇನ್ ಮತ್ತೊಮ್ಮೆ ಯಶಸ್ಸಿನ ಹಾದಿ ಹಿಡಿದು ಹೊರಟಿದೆ. ಆದರೆ, ಜೂ.7ರಂದು ಡರ್ಬನ್ ನಲ್ಲಿ ನಡೆಯಲಿರುವ ಉಪಾಂತ್ಯ ಪಂದ್ಯದಲ್ಲಿ ಯುವ ಜರ್ಮನ್ ಪಡೆಯನ್ನು ಎದುರಿಸಬೇಕಾಗಿದೆ.












Click it and Unblock the Notifications