ಐಐಟಿಯಲ್ಲಿ ಸೀಟು ಗಿಟ್ಟಿಸಿದ ದಲಿತ ಯುವಕ
ಪಾಟ್ನಾ, ಮೇ.27: ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳು ಈ ಯುವಕನ ಕನಸುಗಳನ್ನು ಭಗ್ನಗೊಳಿಸಲಿಲ್ಲ. ಇವನ್ನೇ ಮೆಟ್ಟಿಲಾಗಿ ಬಳಸಿಕೊಂಡ ಈತ ಕಡೆಗೂ ದಿಗ್ವಿಜಯ ಸಾಧಿಸಿದ್ದಾನೆ. ನಾವಡ ಜಿಲ್ಲೆಯ ತೀರಾ ಹಿಂದುಳಿದ ಮಹಾ ದಲಿತ ಸಮುದಾಯ ಗರ್ವದಿಂದ ತಲೆಯೆತ್ತಿ ತಿರುಗುವಂತೆ ಈ ಯುವಕ ಸಾಧನೆ ಮಾಡಿದ್ದಾನೆ. ಸಂಕಷ್ಟಗಳ ಸರಮಾಲೆ ವಿಜಯ ಮಾಲೆಯಾದಾಗ...
ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಪ್ರವೇಶಕ್ಕಾಗಿ ಪ್ರತಿ ವರ್ಷ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಡೆಸಲಾಗುತ್ತದೆ. ಐಐಟಿಗಳೆಂಬ ಆಧುನಿಕ ನಳಂದ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಕೇವಲ ಪ್ರತಿಭೆಯೊಂದೆ ಮಾನದಂಡ. ಇಂತಹ ವಿಶಿಷ್ಟ ಶಿಕ್ಷಣ ಸಂಸ್ಥೆಯಲ್ಲಿ ಹಗಲಿರುಳು ಶ್ರಮಿಸಿ ಕಿಶೋರ್ ಎಂಬ ದಲಿತ ವಿದ್ಯಾರ್ಥಿ ಸೀಟು ಗಿಟ್ಟಿಸಿದ್ದಾನೆ.
ಹದಿನೆಂಟು ವರ್ಷದ ಕಿಶೋರ್ ಗೆ ಸಹಾಯ ಮಾಡಿದವರು ಗಣಿತಶಾಸ್ತ್ರದ ಮಾಂತ್ರಿಕ ಎಂದೇ ಖ್ಯಾತರಾದ 'ಸೂಪರ್ 30'ಎಂಬ ತರಬೇತಿ ಸಂಸ್ಥೆಯ ಆನಂದ್ ಕುಮಾರ್. ಐಐಟಿ ಜೆಇಇಯಲ್ಲಿ ಕಿಶೋರ್ 1190 ರ‌್ಯಾಂಕ್ ಗಳಿಸುವ ಮೂಲಕ ಗುರುವಿಗೆ ತಕ್ಕ ಶಿಷ್ಯ ಎನ್ನಿಸಿಕೊಂಡಿದ್ದಾರೆ. ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಪಸಿ ಸಮುದಾಯಕ್ಕೆ ಸೇರಿದ ಈ ಯುವಕನ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು.
ಮೂಲ ಸೌಭ್ಯಗಳೇ ಇಲ್ಲದಂತಹ ನಾವಡದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿವರೆಗೂ ಓದಿರುವ ಕಿಶೋರ್ ಹೇಳುವುದೇನೆಂದರೆ, ಏಕಾಗ್ರತೆ ಹಾಗೂ ಶಿಸ್ತುಬದ್ಧ ಅಧ್ಯಯನವೇ ನನ್ನ ಗೆಲುವಿಗೆ ಕಾರಣ ಎನ್ನುತ್ತಾರೆ. ಕಿಶೋರ್ ತಂದೆ ತಾಳೆ ಮರದಿಂದ ಹೆಂಡ ಇಳಿಸುವ ಕಾಯಕ ಮಾಡುತ್ತಾರೆ. ಕಿಶೋರನ ಈ ಸಾಧನೆಯಿಂದ ತಂದೆತಾಯಿ ಮೂಕವಿಸ್ಮಿತರಾಗಿದ್ದಾರೆ.












Click it and Unblock the Notifications