ರೆಡ್ಡಿಗಳಿಗೆ ಗೇಟ್ ಪಾಸ್ ನೀಡಲು ತಾಲೀಮು

ಆದಾಯಕ್ಕಿಂತ ಹೆಚ್ಚಿನ ವರಮಾನ ಹೊಂದಿರುವ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರ ಸದಸ್ಯತ್ವ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಕ್ಷ ರಾಜ್ಯಪಾಲರನ್ನು ಭೇಟಿ ಮನವಿ ಮಾಡಿಕೊಂಡಿದೆ. ಇಂದು ಅಗತ್ಯ ದಾಖಲೆಗಳೊಂದಿಗೆ ಕೊಂಡಯ್ಯ ಹಾಗೂ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಮತ್ತೆ ರಾಜ್ಯಪಾಲರನ್ನ ಭೇಟಿ ಮಾಡಿ ಚರ್ಚೆ ನಡೆಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಅಗತ್ಯ ಬಿದ್ದರೆ ಜನಾರ್ದನರೆಡ್ಡಿ ಅವರನ್ನು ನಾನೇ ರಾಜ್ಯಪಾಲರ ಬಳಿ ಕರೆದುಕೊಂಡು ಬರುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ, ರೆಡ್ಡಿ ಮಾತ್ಪ ರಾಜ್ಯಪಾಲರ ಬಳಿ ಬಂದು ವಿವರಣೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸಾಧ್ಯವಾದರೆ ಕಾನೂನು ಹೋರಾಟ ನಡೆಸಲು ಸಿದ್ಧನಿದ್ದೇನೆ. ನನ್ನ ವಿರುದ್ದ ಕರ್ನಾಟಕ ಮತ್ತು ಆಂಧ್ರ ಸರಕಾರಗಳು ಸುಪ್ರೀಂಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದವು. ನಾವು ನಡೆಸುತ್ತಿರುವ ಗಣಿಗಾರಿಕೆ ಕಾನೂನುಬದ್ಧ ಎಂದು ಸುಪ್ರಿಂಕೋರ್ಟ್ ಆದೇಶ ನೀಡಿದೆ. ಇಂತಹ ಕಾನೂನು ಸಮರವನ್ನೇ ಗೆದ್ದಿರುವಾಗ ರಾಜ್ಯಪಾಲರ ನೀಡಿರುವ ನೋಟಿಸ್ ಗೆ ವಿವರಣೆ ಅಗತ್ಯವಿಲ್ಲ ಎನ್ನುವುದು ರೆಡ್ಡಿ ವಾದ.
ಕಾನೂನು ಮೂಲಕವೇ ಹೋರಾಟ ನಡೆಸಲು ಸಿದ್ಧನಿದ್ದೇನೆ. ನನ್ನ ವಕೀಲರ ಮೂಲಕಸ ರಾಜ್ಯಪಾಲರ ನೋಟಿಸ್ ಉತ್ತರ ನೀಡಲಾಗುವುದು. ನಾನು ಯಾವುದೇ ಕಾರಣಕ್ಕೂ ರಾಜ್ಯಪಾಲರ ಬಳಿ ಬರುವುದಿಲ್ಲ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ರೆಡ್ಡಿಯ ಈ ಹಠಮಾರಿತನಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಜ್ಯಪಾಲರು, ಸದಸ್ಯತ್ವ ರದ್ದುಪಡಿಸುವಂತೆ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.












Click it and Unblock the Notifications