ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪಿ ಕಸಬ್ ಗೆ ಗಲ್ಲು ಶಿಕ್ಷೆ ಸರಿ : ಉಜ್ವಲ್ ನಿಕಂ

By Mrutyunjaya Kalmat
|
Google Oneindia Kannada News

Ujjwal Nikam
ಮುಂಬೈ, ಮೇ. 4 : ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದನೆ ಪ್ರಕರಣದಲ್ಲಿ ದೋಷಿಯಾಗಿರುವ ಪಾಕಿಸ್ತಾನಿ ಮೂಲದ ಉಗ್ರ ಮೊಹ್ಮದ್ ಅಜ್ಮಲ್ ಅಮೀರ್ ಕಸಬ್ ನಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಬಲವಾಗಿ ಪ್ರತಿಪಾದಿಸಿದ್ದಾರೆ. ಉಭಯ ವಕೀಲರ ವಾದ ವಿವಾದವನ್ನು ಆಲಿಸಿದ ಮುಂಬೈ ವಿಶೇಷ ನ್ಯಾಯಾಲಯ ಉಗ್ರ ಕಸಬ್ ನ ಶಿಕ್ಷೆ ಪ್ರಮಾಣವನ್ನು ನಾಳೆ ಘೋಷಣೆ ಮಾಡುವ ಸಾಧ್ಯತೆ ಇದೆ.

ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಭಾರತೀಯ ಮೂಲದ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ಧೀನ್ ಅವರನ್ನು ಸೂಕ್ತ ಸಾಕ್ಷ್ಯ ಸಿಗದ ಕಾರಣ ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರುವುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ತಿಳಿಸಿದ್ದಾರೆ.

ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ವಿಜಯ್ ಸಲಸ್ಕರ್, ಅಶೋಕ್ ಕಾಮ್ಟೆ ಹಾಗೂ ತುಕಾರಾಂ ಒಂಬ್ಳೆ ಸೇರಿ ಅನೇಕ ಯೋಧರನ್ನು ಹಾಗೂ ದಕ್ಷ ಅಧಿಕಾರಿಗಳನ್ನು ಕಸಬ್ ಕೊಂದಿರುವುದನ್ನು ಸ್ವತಃ ಅವನೇ ಒಪ್ಪಿಕೊಂಡಿದ್ದ. ಆದರೆ, ಲಷ್ಕರ್ ನಂಟು ಹಾಗೂ ಮುಂಬೈ ಭಯೋತ್ಪಾದನೆಯಲ್ಲಿ ಕೈವಾಡವಿದೆ ಎಂಬ ಆರೋಪದ ಮೇಲೆ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ಧೀನ್ ಅವರನ್ನು ಬಂಧಿಸಲಾಗಿತ್ತು. ಸುದೀರ್ಘ ವಿಚಾರಣೆ ನಂತರ ಸೂಕ್ತ ಸಾಕ್ಷ್ಯ ದೊರೆಯದ ಕಾರಣ ಅವರಿಗೆ ನ್ಯಾಯಾಲಯ ಕ್ಲಿನ್ ಚಿಟ್ ನೀಡಿದೆ. ಈ ಸಂದರ್ಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ, ಕಸಬ್ ಪರ ವಕೀಲ ಕೆ ಪಿ ಪವಾರ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಕಸಬ್ ವಿರುದ್ಧ 11 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಕಸಬ್ ಸೇರಿ ಲಷ್ಕರ್ ಇ ತೊಯ್ಬಾ ಸಂಘಟನೆಯಲ್ಲಿ ತರಬೇತಿ ಹೊಂದಿದ 10 ಮಂದಿ ಉಗ್ರರು ಸಮುದ್ರದ ಮೂಲಕ ಮುಂಬೈ ಪ್ರವೇಶಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿ ತಾಜ್, ಟ್ರೈಡೆಂಟ್ ಹೋಟೆಲ್ ಮತ್ತು ನಾರಿಮನ್ ಹೌಸ್ ನಲ್ಲಿ ಅಡಗಿ ಕುಳಿತಿದ್ದರು. ಅಲ್ಲಿರುವ ಜನರನ್ನು ಒತ್ತೆಯಾಳಾಗಿಸಿ ಅಮಾಯಕರನ್ನು ಹತ್ಯೆಗೈದಿದ್ದರು. ಘಟನೆಯಲ್ಲಿ ಸುಮಾರು 166 ಮಂದಿ ಸಾವನ್ನಪ್ಪಿದ್ದರು. 400 ಕ್ಕೂ ಮಂದಿ ಗಾಯಗೊಂಡಿದ್ದರು. ಭಾರತದ ಆರ್ಥಿಕತೆ ಬೀರಿದ ಈ ಘಟನೆ ಬೊಕ್ಕಸಕ್ಕೆ 4000 ಕೋಟಿ ರುಪಾಯಿ ನಷ್ಟವನ್ನುಂಟು ಮಾಡಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X