ನಿತ್ಯಾನಂದನಿಗೆ ರಾಮನಗರದಲ್ಲಿ ಚಪ್ಪಲಿ ಸೇವೆ!
ರಾಮನಗರ, ಏ. 23 : ಹಸನ್ಮುಖಿಯಾಗಿಯೇ ಶೀಮ್ಲಾದಿಂದ ವಿಮಾನದಲ್ಲಿ ಸಿಐಡಿ ಪೊಲೀಸ್ ಅಧಿಕಾರಿಗಳೊಂದಿಗೆ ಆಗಮಿಸಿದ ಸ್ವಾಮಿ ನಿತ್ಯಾನಂದನಿಗೆ ರಾಮನಗರದ ಶಿಕ್ಷಕರೊಬ್ಬರು ವಾಚಾಮಗೋಚರವಾಗಿ ಆಂಗ್ಲ ಭಾಷೆಯಲ್ಲಿ ಬೈದು ಚಪ್ಪಲಿ ಎಸೆದ ಘಟನೆ ಗುರುವಾರ ರಾತ್ರಿ ನಡೆದಿದೆ.
ದೇವನಹಳ್ಳಿ ವಿಮಾನ ನಿಲ್ದಾಣದಿಂದ ರಾಮನಗರಕ್ಕೆ ನಿತ್ಯಾನಂದ ಆಗಮಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಖಾಕಿ ಬೆಂಗಾವಲನ್ನು ಹಾಕಲಾಗಿತ್ತು. ಖಾಕಿ ಬೆಂಗಾವಲಿನ ನಡುವೆ ಸ್ವಾಮಿ ನಿತ್ಯಾನಂದನಿಗೆ ಶ್ರೀನಿವಾಸ್ ಎಂಬ ಶಿಕ್ಷಕ ಚಪ್ಪಲಿ ಎಸೆದು 'ಬ್ಲ... ಬಾ...' ಮುಂತಾದ ಬೈಗುಳಗಳ ಸುರಿಮಳೆ ಮಾಡಿ ಹಲ್ಲೆಗೆ ಯತ್ನಿಸಿದ. ನೂರಾರು ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಚಪ್ಪಲಿ ಎಸೆತದ ಘಟನೆ ನಡೆದಿದ್ದರಿಂದ ಕೆಲಕಾಲ ಅಧಿಕಾರಿಗಳು ಅವಕ್ಕಾದರು.
ಹಸನ್ಮುಖಿಯಾಗಿಯೇ ಇದ್ದ ಸಂದರ್ಭದಲ್ಲಿ ಚಪ್ಪಲಿ ಏಟು ತಿಂದ ನಿತ್ಯಾನಂದನ ಮುಖ ತಕ್ಷಣವೇ ಕಮರಿದಂತಾಯಿತು. ನಿತ್ಯಾನಂದನ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿ ಬೆಂಗಳೂರಿನ ಬಿನ್ನಿಪೇಟೆಯ ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು ಚನ್ನಪಟ್ಟಣದ ಕೆರೆಮೇಗಲುದೊಡ್ಡಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕನೆಂದು ತಿಳಿದು ಬಂದಿದೆ. ಈತ ರಾಮನಗರದ ಮಂಜುನಾಥನಗರ ನಿವಾಸಿಯೆಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರಣೆಗೆ ಪೊಲೀಸ್ ವಶಕ್ಕೆ : ಪಲ್ಲಂಗದ ಮೇಲೆ ರಂಜಿತಾಳೊಂದಿಗೆ ಕಾಮದಾಟವಾಡಿದ ಸ್ವಾಮಿ ನಿತ್ಯಾನಂದ ಶಿಮ್ಲಾದಲ್ಲಿ ಸೆರೆಸಿಕ್ಕ ನಂತರ ಗುರುವಾರ ರಾತ್ರಿ ರಾಮನಗರ ಪ್ರಧಾನ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಧೀಶೆ ಪುಷ್ಪಾವತಿರವರ ಮುಂದೆ ಹಾಜರು ಪಡಿಸಲಾಯಿತು. ನಿತ್ಯಾನಂದನ ಕಾಮದಾಟ ಬೆತ್ತಲಾದ ನಂತರ ಒಂದೂವರೆ ತಿಂಗಳಿನಿಂದ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಾ ಆಟವಾಡಿಸುತ್ತಿದ್ದ.
ಸಿಐಡಿ ಪೊಲೀಸರು ಬೀಸಿದ ಬಲೆಗೆ ಸಿಲುಕಿಕೊಂಡು ಶಿಮ್ಲಾದಿಂದ ವಿಮಾನದಲ್ಲಿ ಬಂದಿಳಿದ ನಂತರ ನೇರವಾಗಿ ರಾಮನಗರ ಸರ್ಕಾರಿ ಆಸ್ಪತ್ರೆಗೆ ನಿತ್ಯಾನಂದನನ್ನು ಕರೆತಂದ ಸಿಐಡಿ ಪೊಲೀಸರು ತಪಾಸಣೆ ನಡೆಸಿದ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 1 ಗಂಟೆಗಳ ಕಾಲ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ವಿಶೇಷ ಅನುಮತಿ ಪಡೆದು ನ್ಯಾಯಾಲಯದಲ್ಲಿ ಹಾಜರುಪಡಿಸಬಹುದೆಂದು ಊಹಿಸಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ನ್ಯಾಯಾಧೀಶರ ಮನೆಗೇ ನೇರವಾಗಿ ಕರೆತಂದು ನಿತ್ಯಾನಂದನನ್ನು ಹಾಜರುಪಡಿಸಲಾಯಿತು. ಸುಮಾರು ಅರ್ಧ ಗಂಟೆಕಾಲ ವಿಚಾರಣೆಯ ನಂತರ ನ್ಯಾಯಾಧೀಶೆ ತನಿಖೆಗೆ ಅನುಕೂಲವಾಗುವ ಉದ್ದೇಶದಿಂದ ನಿತ್ಯಾನಂದನನ್ನ ಸಿಐಡಿ ಪೊಲೀಸರ ವಶಕ್ಕೆ ನಾಲ್ಕುದಿನಗಳ ಕಾಲ ಒಪ್ಪಿಸಲಾಗಿದೆ ಎಂದು ಸರ್ಕಾರಿ ವಕೀಲ ಎಂ.ಎನ್.ವಾರದ್ ತಿಳಿಸಿದರು.
ನ್ಯಾಯಾಧೀಶರ ಮುಂದೆ ಉತ್ತರಿಸುವ ಸಂದರ್ಭದಲ್ಲಿ ನಿತ್ಯಾನಂದ ಸದಾ ಹಸನ್ಮುಖಿಯಾಗಿಯೇ ಏನು ಮಾಡೇ ಇಲ್ಲವೆನ್ನುವ ರೀತಿಯಲ್ಲಿ ವರ್ತಿಸುತ್ತಿದ್ದ. ಸಾರ್ವಜನಿಕವಾಗಿಯೂ ಕೂಡ ನಿತ್ಯಾನಂದ ಕೈಮುಗಿಯುತ್ತಲೇ ನೆರೆದಿದ್ದ ಜನರನ್ನ ನಂಬಿಸುವ ರೀತಿಯಲ್ಲಿ ರೀತಿಯಲ್ಲಿ ವರ್ತಿಸುತ್ತಿದ್ದ. ನಿತ್ಯಾನಂದನ ಕೆಲವು ಪರಮಾಪ್ತರು ನಿತ್ಯಾನಂದ ನ್ಯಾಯಾಧೀಶರ ಮುಂದೆ ಹಾಜರಾಗುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿತ್ಯಾನಂದನನ್ನು ಕನಿಷ್ಠ 15 ದಿನಗಳಾದರೂ ಹೆಚ್ಚಿನ ತನಿಖೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಬೇಕೆಂದು ಸಿ.ಐ.ಡಿ ಪೊಲೀಸರು ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ನ್ಯಾಯಾಧೀಶರು 4 ದಿನಗಳ ಕಾಲ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಬೇಕೆಂದು ಆದೇಶಿಸಿದರು. ನಿತ್ಯಾನಂದನ ಪರ ವಕೀಲರು ಚಂದ್ರಶೇಖರ್ ಅವರು ಶುಕ್ರವಾರ ರಾಮನಗರ ನ್ಯಾಯಾಲಯದಲ್ಲಿ ಜಾಮೀನುಕೋರಿ ಅರ್ಜಿ ಹಾಕಲಾಗುವುದೆಂದು ತಿಳಿಸಿದರು.












Click it and Unblock the Notifications