ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಮಾನದ ಸಂತನಿಗೆ ನಮನ

By Mrutyunjaya Kalmat
|
Google Oneindia Kannada News

Siddaganga Seer with Governor
ತುಮಕೂರು, ಏ. 11 : ಕಣ್ಣು ಹಾಯಿಸಿದಷ್ಟು ದೂರ ಭಕ್ತ ಜನಸಾಗರ. ಖಾವಿಧಾರಿಗಳ ಮಂತ್ರಿ ಪಠಣ, ಕಲ್ಲು ಕಲ್ಲಿನಲ್ಲಿ ಓಂಕಾರದ ಧ್ವನಿಯ ನಡುವೆ ನಡೆದಾಡುವ ದೇವರು, ಯುಗದ ಸಂತನಿಗೆ ಅದ್ಧೂರಿ ಮತ್ತು ಅಭಿಮಾನದ ಗುರುವಂದನೆ ಕಾರ್ಯಕ್ರಮ ನೇರವೇರಿತು. ಶತಮಾನ ದಾಟಿ ನಿಂತಿರುವ ಸಿದ್ದಗಂಗೆಯ ಸಿದ್ದಪುರುಷ ತ್ರಿವಿಧಿ ದಾಸೋಹ ಮೂರ್ತಿ ಶಿವಕುಮಾರ ಸ್ವಾಮೀಜಿಗಳ 103ನೇ ಹುಟ್ಟಹಬ್ಬದ ಅಂಗವಾಗಿ ಏರ್ಪಡಿಸಿದ್ದ ಗುರುವಂದನೆ ಸಮಾವೇಶದ ಅಪೂರ್ವ ಕ್ಷಣಗಳಿವು.

ಜಗತ್ತೇ ಜಂಗಮನೆಂದು ಪೂಜಿಸುವ ಸಿದ್ಧಗಂಗಾ ಶ್ರೀಗಳಿಗೆ 103 ತುಂಬಿರುವುದು ಭಕ್ತ ಸಮೂಹದಲ್ಲಿ ಹೊಸ ಚೈತನ್ಯ ಮೂಡಿಸಿತ್ತು. ತುಮಕೂರು ನಗರದಿಂದ ಕೂಗಳತೆ ದೂರದಲ್ಲಿರುವ ಸಿದ್ಧಗಂಗೆ ಸುಕ್ಷೇತ್ರದ ಸಿದ್ಧೇಶ್ವರ ವೇದಿಕೆಯಲ್ಲಿ ತ್ರಿವಿಧ ದಾಸೋಹಿಗೆ ಭಕ್ತ ಸಮೂಹ ನಮನ ಸಲ್ಲಿಸಿ ಕೃತಾರ್ಥವಾಯಿತು. ತುಮಕೂರು ಜಿಲ್ಲಾಧಿಕಾರಿ ಸಿ ಸೋಮಶೇಖರ್ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಮಾವೇಶಕ್ಕೆ ಆಗಮಿಸಿದ್ದ ಅತಿಥಿಗಳೆಲ್ಲರೂ ಶ್ರೀಗಳ ಗುಣಗಾನದಲ್ಲಿ ತಲ್ಲೀನರಾಗಿದ್ದರು.

ಶ್ರೀಗಳ ಗುರುವಂದನೆಗೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ತುಮಕೂರಿನಿಂದ ಶ್ರೀಕ್ಷೇತ್ರಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾಸೋಹಕ್ಕೆ ಹೆಸರಾಗಿರುವ ಸಿದ್ಧಗಂಗೆ ಮಠಕ್ಕೆ ಹರಿದು ಬಂದ ಭಕ್ತರ ಜನಸಾಗರಕ್ಕೆ ಹಸಿವು ನೀಗಿಸಲು ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಎಂಟು ಕಡೆ ಒಮ್ಮೆಗೆ ಸುಮಾರು 20-25 ಸಾವಿರ ಮಂದಿ ಕುಳಿತು ಭೋಜನ ಮಾಡುವಂತಹ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳ ಹಬ್ಬಕ್ಕೆ ಆಗಮಿಸಿದ ಭಕ್ತರು ತಮ್ಮ ಕೈಲಾದ ಸೇವೆ ಮಾಡುವ ಮೂಲಕ ಕೃತಾರ್ಥಕ್ಕೆ ಪಾತ್ರರಾದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಪಾಲ ಎಚ್ಆರ್ ಭಾರದ್ವಾಜ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ ವೀರಪ್ಪ ಮೊಯ್ಲಿ, ಕೆ ಎಚ್ ಮುನಿಯಪ್ಪ, ಸಂಸದರಾದ ಜಿ ಎಸ್ ಬಸವರಾಜು, ಜನಾರ್ದನಸ್ವಾಮಿ, ಸಚಿವರಾದ ಸುರೇಶ್ ಕುಮಾರ್, ಬಚ್ಚೇಗೌಡ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಂದಿನಿಂದ ಆರಂಭವಾಗಿರುವ ಗುರುವಂದನಾ ಕಾರ್ಯಕ್ರಮ ಸೋಮವಾರ ಸಂಜೆವರೆಗೂ ನಡೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X