ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಮತಹಾಕಲಾಗಲಿಲ್ಲ, ಏಕೆಂದರೆ

By Shami
|
Google Oneindia Kannada News

BBMP polling officials denied my family voting rights
ಸಂಪಾದಕರ ಸಮಕ್ಷಮಕ್ಕೆ,

ನಿನ್ನೆ ಭಾನುವಾರ ಜರುಗಿದ ಬಿಬಿಎಂಪಿ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬೇಕೆಂದು ನಾನು ಮತ್ತು ನನ್ನ ಕುಟುಂಬದ ಸದಸ್ಯರು ತೀವ್ರ ಉತ್ಸುಕರಾಗಿದ್ದೆವು. ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಇದೇ ಮೊದಲಬಾರಿಗೆ ಮತದಾನ ಮಾಡುವ ಹಕ್ಕು ದೊರೆತಿದ್ದರಿಂದ ಅವರು ಸಹಜವಾಗಿಯೇ ನಾನು ಮತ್ತು ನನ್ನ ಹೆಂಡತಿಗಿಂತ ಹೆಚ್ಚು ಕುತೂಹಲಿಗಳಾಗಿದ್ದರು.

ಊಟ ಮಾಡಿ ಬಿಸಿಲು ಸ್ವಲ್ಪ ತಗ್ಗಿದ ನಂತರ ಮಧ್ಯಾನ್ಹ 3 ರ ನಂತರ ನಾವು ಸಂಭ್ರಮದಿಂದ ಜಯನಗರ 7 ನೇ ಬ್ಲಾಕಿನಲ್ಲಿರುವ ಎನ್ ಎಸ್ ವಿಕೆ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದ ಮತಗಟ್ಟೆಗೆ ತೆರಳಿದೆವು. ಸರತಿ ಸಾಲಿನಲ್ಲಿ ನಿಂತು ನಮ್ಮ ಸರದಿ ಬಂದಾಗ ಚುನಾವಣಾ ಆಯೋಗದಿಂದ ನಾವು ಪಡೆದುಕೊಂಡಿದ್ದ ಗುರುತಿನ ಚೀಟಿ ತೋರಿಸಿ ಮತಹಾಕಲು ಆಸೆಪಟ್ಟೆವು.

ಆದರೆ, ಅಲ್ಲಿ ಕರ್ತವ್ಯ ನಿರತರಾಗಿದ್ದ ಮತಗಟ್ಟೆ ಅಧಿಕಾರಿಗಳು ನಾವು ಮತ ಹಾಕದಿರುವುದಕ್ಕೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದರು. ಅಲ್ಲಿ ಹೋಗಿ ಕಾರ್ಪೋರೇಷನ್ ನಂಬರ್ ಬರೆಸಿಕೊಂಡು ಬನ್ನಿ ಎಂದು ಒಬ್ಬಾತ ಹೇಳಿದರೆ, ಇನ್ನೊಬ್ಬಾತ ನಿಮ್ಮ ಹೆಸರೇ ಇಲ್ಲ ಎಂದು ಪಟ್ಟಿಯನ್ನೇ ನೋಡದೆ ಭವಿಷ್ಯವಾಣಿ ನುಡಿದ. ಅವರ ಅಸಡ್ಡೆ ಕಂಡು ನಮಗೆ ತುಂಬಾ ಬೇಜಾರಾಯಿತು.

ನಮ್ಮ ಬಳಿ ಭಾವಚಿತ್ರ ಸಮೇತ ಅಧಿಕೃತ ಮತ ಚೀಟಿಗಳು ಇದ್ದವು. ಅದನ್ನು ನೋಡಿ ಪಟ್ಟಿಯನ್ನು ಒಮ್ಮೆ ತಿರುವಿ ಹಾಕಿದರೆ ನಮ್ಮ ಹೆಸರು, ಮನೆ ಸಂಖ್ಯೆ, ಕ್ರಾಸು, ಮೇನ್ ಮುಂತಾದ ಎಲ್ಲ ವಿವರಗಳು ಸಿಗುತ್ತಿದ್ದವು. ಒಂದು ಮತಗಟ್ಟೆಯಲ್ಲಿ 2000 ಹೆಸರುಗಳಿರುತ್ತವೆ. ಆದರೆ, ಸಮಾಧಾನದಿಂದ ಮತದಾರರ ವಿವರ ಹುಡುಕಿ ಮತದಾನಕ್ಕೆ ನೆರವಾಗುವ ಶ್ರದ್ಧೆ ಅಲ್ಲಿನ ಅಧಿಕಾರಿಗಳಿಗೆ ಇರಲಿಲ್ಲ.

ನಾವು ಎಷ್ಟೇ ವಿವರಿಸಿದರೂ ಜಪ್ಪಯ್ಯ ಎನ್ನದೆ ಅಧಿಕಾರಿಗಳು ನಮ್ಮ ತಾಳ್ಮೆ ಪರೀಕ್ಷಿಸಿದರು. ಕೊನೆಗೆ ನಾವೆಲ್ಲ ರೋಸಿಹೋಗಿ ಮತ ಚೀಟಿಗಳನ್ನು ಹರಿದು ಹಾಕಿ ವ್ಯವಸ್ಥೆಗೆ ಹಿಡಿಶಾಪ ಹಾಕಿ ಮತದಾನ ಮಾಡದೆ ಹಿಂತಿರುಗಿದೆವು. ಇವತ್ತು ಬಹುತೇಕ ಎಲ್ಲ ಪತ್ರಿಕೆಗಳಲ್ಲಿ 'ಎಚ್ಚೆತ್ತುಕೊಳ್ಳದ ಮತದಾರ', 'ಮತದಾರರ ನಿರ್ಲಕ್ಷ್ಯ' ಮುಂತಾದ ದಪ್ಪ ಅಕ್ಷರಗಳ ಸುದ್ದಿಗಳನ್ನು ಓದಿ ವಿಷಾದದ ನಗೆ ಬೀರಿದೆವು.

ಮತದಾರರಿಗೆ ಆಮಿಷ ಒಡ್ಡಿ ಮತಕೀಳುವ ಅನೇಕ ವರದಿಗಳನ್ನು ನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೆ. ಆದರೆ ಸ್ವಪ್ರೇರಣೆಯಿಂದ ಮತದಾನವನ್ನು ಒಂದು ಸಂಭ್ರಮದ ಕೆಲಸ ಎಂದು ಭಾವಿಸಿ ಮಾಡಲು ಹೋದ ನಮಗೆ ನಿರಾಸೆ ಆಯಿತು.

ಚುನಾವಣಾ ಆಯೋಗದವರು ಮತಗಟ್ಟೆ ಅಧಿಕಾರಿಗಳಿಗೆ ಚೆನ್ನಾಗಿ ತರಬೇತಿ ನೀಡಬೇಕು. ಬೋಗಸ್ ಮತದಾರರು ಯಾರು, ಪ್ರಾಮಾಣಿಕವಾಗಿ ತಮ್ಮ ನಾಗರೀಕ ಹಕ್ಕು ಚಲಾಯಿಸಲು ಮತಗಟ್ಟೆಗಳಿಗೆ ಬರುವವರು ಯಾರು ಎಂಬುದನ್ನು ಅರಿಯುವಂಥ ಜಾಣ್ಮೆ ಮತ್ತು ತಾಳ್ಮೆಯನ್ನು ಸಿಬ್ಬಂದಿಗಳಿಗೆ ಹೇಳಿಕೊಡದಿದ್ದರೆ ಬೆಂಗಳೂರಿನಲ್ಲಿ ಶೇಖಡಾವಾರು ಮತದಾನ ಮುಂದಿನ ಚುನಾವಣೆ ವೇಳೆಗೆ ಪ್ರತಿಶತ 10 ಕ್ಕೆ ಕುಗ್ಗಿದರೆ ಆಶ್ಚರ್ಯವಿಲ್ಲ.

ನೊಂದ ಕುಟುಂಬದವರು, ಜಯನಗರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X