ಪೊಲೀಸರ ದಾಳಿ; ಹೊಳೆಗೆ ಹಾರಿ ನಾಲ್ವರ ಸಾವು

ಮೃತಪಟ್ಟವರನ್ನು ತೀರ್ಥಹಳ್ಳಿಯ ಗಂಗಾಧರ್, ಭದ್ರಾವತಿ ಸಮೀಪದ ದೊಡ್ಡಗೊಪ್ಪೇನಹಳ್ಳಿಯ ದಿನೇಶ್, ಜಿಂಕ್‌ಲೈನ್‌ನ ಯೋಗೀಶ್, ಹಿರಿಯೂರಿನ ರಜನಿ ಎಂದು ಗುರುತಿಸಲಾಗಿದೆ. ಇದರಲ್ಲಿ ಯೋಗೀಶ್ ಎಂಬುವವರ ಶವ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಉಳಿದ ಮೂರು ಜನರ ಶವವನ್ನು ಹೊರತೆಗೆಯಲಾಗಿದೆ.
ಘಟನೆಯ ವಿವರ : ಸಂಜೆ ಸುಮಾರು 5.30ರ ಸುಮಾರಿಗೆ ಬಿ.ಆರ್.ಪಿಯಲ್ಲಿರುವ ಹೊಳೆದಂಡೆಯಲ್ಲಿ ಸುಮಾರು 40 ಜನರು ಇಸ್ಪೀಟ್ ಜೂಜಾಟದಲ್ಲಿ ತಲ್ಲೀನರಾಗಿದ್ದರು. ಇದ್ದಕ್ಕಿದ್ದಂತೆ ಪೊಲೀಸರು ರೈಡ್ ಮಾಡಲು ಬಂದರೆಂದು ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲರೂ ಮೈಮೇಲೆ ಪರಿಜ್ಞಾನವಿಲ್ಲದೆ ಸಿಕ್ಕಸಿಕ್ಕ ಕಡೆ ಓಡಿಹೋದರು. ಓಡಿಹೋಗುವ ಭರದಿಂದ ದಿಕ್ಕು ಕಾಣದೆ ಮೇಲ್ಕಂಡ ನಾಲ್ಕು ಮಂದಿ ಹೊಳೆಗೆ ಹಾರಿ ಮೃತಪಟ್ಟಿದ್ದಾರೆ.
ಮೃತ ಗಂಗಾಧರ ಅಲಿಯಾಸ್ ಗಂಗಣ್ಣ ಎಂಬಾತ ಬಿ.ಆರ್.ಪಿಗೆ ಬಂದಿದ್ದು, ತೋಟದ ಮನೆಯಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ. ಖಚಿತ ಮಾಹಿತಿಯ ಮೇರೆಗೆ ಡಿಸಿಐಬಿ ಸಿಪಿಐ ಎನ್.ನಿತ್ಯಾನಂದ ಮತ್ತು ಅವರ ತಂಡ ಕಾರ್ಯಾಚರಣೆಗೆ ತೆರಳಿದರು. ಈ ಸಂಬಂಧ ಭದ್ರಾವತಿಯ ವಸಂತಕುಮಾರ(34), ಗ್ಯಾರೇಜ್ ಕ್ಯಾಂಪಿನ ಸೋಮಶೇಖರ್(19), ತರೀಕೆರೆಯ ಶ್ರೀನಿವಾಸ್ (21) ರಂಗೇನಹಳ್ಳಿಯ ನಾಗರಾಜ್ (50), ಭದ್ರಾವತಿಯವರೇ ಆದ ಬಸವರಾಜ್(21), ಪ್ರಶಾಂತ(21) ಇವರೆಲ್ಲರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಕೆಎ18,5135, ಕೆಎ01,ಎ7324 ಕ್ರಮಸಂಖ್ಯೆಯ ಎರಡು ಕಾರುಗಳನ್ನು, 3,200ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಲಕ್ಕವಳ್ಳಿ ನಾಗೇಶ್ ಎಂಬಾತ ನಾಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ. ಪ್ರಕರಣ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದು, ತನಿಖೆ ಮುಂದುವರೆದಿದೆ.
ಈ ನಡುವೆ ಮೃತಪಟ್ಟವರು ನಿಜವಾಗಿ ಭಯಗೊಂಡು ಹೊಳೆಗೆ ಹಾರಿದರೋ! ಅಥವಾ ಆಟದ ಮಧ್ಯೆ, ಈಜಲು ಬಂದು ಮೃತಪಟ್ಟಿರೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.












Click it and Unblock the Notifications