• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರೆತರೆ ಕ್ಷಮಿಸಿದಂತೆ ಆದೀತು,ಎಚ್ಚರ!

By * ಭರತ್ ಶಾಸ್ತ್ರೀ
|

ಈ ವರ್ಷದ ಗಣರಾಜ್ಯೋತ್ಸವಕ್ಕೆ ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಪೋಲಿಸರ ಸರ್ಪಕಾವಲಿನಲ್ಲಿ ಧ್ವಜಾರೋಹಣ ನಡೆಸಲಾಯಿತು, ಜತೆಗೆ ಶ್ರೀನಗರದ ಲಾಲ್ ಚೌಕ್ ದಲ್ಲಿ ಧ್ವಜ ಹಾರಿಸಲಿಲ್ಲ ಎಂಬ ಕಳವಳಕಾರಿ ಸುದ್ದಿಯೂ ಬಂತು. ಈ ಹಿನ್ನೆಲೆಯಲ್ಲಿ ಜನವರಿ 24, 2010 ರ "ದಿ ಪಯೊನೀರ್" ಪತ್ರಿಕೆಯಲ್ಲಿ ಖ್ಯಾತ ಅಂಕಣಕಾರ ಕಾಂಚನ್ ಗುಪ್ತಾ ಅವರ To forget would be to forgive ಎಂಬ ಮನಕಲಕುವ ಲೇಖನದ ಸಾರಾಂಶವನ್ನು "ದಟ್ಸ್ ಕನ್ನಡ" ದ ಓದುಗರಿಗೆ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ. 60 ವರ್ಷ ತುಂಬಿದ ನಮ್ಮ ಗಣರಾಜ್ಯದಲ್ಲಿ ಇಂತಹ ದೌರ್ಜನ್ಯ ನಮ್ಮ ಮಾಧ್ಯಮಗಳ ಕಣ್ಣಿಗೆ ಏಕೆ ಕಾಣುವುದಿಲ್ಲ ಎಂಬ ನನ್ನ ಹತಾಶೆಯನ್ನು ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.

"ಇದೇ ವಾರಕ್ಕೆ 20 ವರ್ಷಗಳ ಮೊದಲು, ಇಸ್ಲಾಮೀ ಮತಾಂಧರ ರಕ್ತ ದಾಹಕ್ಕೆ ಗುರಿಯಾಗಿ ಹಿಂದುಗಳು ತಮ್ಮ ಪೂರ್ವಜರ ನಾಡಾದ ಕಾಶ್ಮೀರವನ್ನು ತೊರೆದು ಪಲಾಯನ ಮಾಡಬೇಕಾಯಿತು. ಇದಕ್ಕೆ ಒಂದೇ ಒಂದು ಆಕ್ಷೇಪಣೆಯ ಸೊಲ್ಲು ಸರ್ಕಾರದ ಯಾವುದೇ ಅಂಗದಿಂದ ಬರಲಿಲ್ಲ. ನಮ್ಮ "ಸಭ್ಯ ಸಮಾಜ"ದ ಸಂಸ್ಥೆಗಳಿಂದ ರೋಷದ ಪ್ರತಿಭಟನೆಯೇ ಬರಲಿಲ್ಲ. ಈ ಇಪ್ಪತ್ತು ವರ್ಷಗಳಲ್ಲಿ ಇಂತಹುದೊಂದು ಘೋರ ದೌರ್ಜನ್ಯ, ನಮ್ಮ ರಾಷ್ಟ್ರದಲ್ಲಿ ನಡೆದುದ್ದನ್ನೇ ನಾವು ಮರೆತು ಬಿಟ್ಟಿದ್ದೇವೆ. ಎಷ್ಟರ ಮಟ್ಟಿಗೆ ಎಂದರೆ, ತಮ್ಮ ಮನೆ ಮಠಗಳನ್ನು ತೊರೆದು, ತಮ್ಮ ಅಸ್ಮಿತೆ ಯನ್ನು ಬಲಾತ್ಕಾರದಿಂದ ಕಳೆದು ಕೊಂಡು, ತಮ್ಮ ದೇಶದಲ್ಲೇ "ದೇಶ ಭ್ರಷ್ಟ"ರಾದ ಕಾಶ್ಮೀರಿ ಪಂಡಿತರ ಬಗ್ಗೆ ಯಾರೂ ಮಾತನಾಡುವುದೂ ಇಲ್ಲ.

ಮುಸ್ಲಿಮ್ ಪ್ರತ್ಯೇಕತಾವಾದಿಗಳ ಮೃಗೀಯ ವರ್ತನೆಯನ್ನು ಓಲೈಸುವ, ಮುಸ್ಲಿಮರ ಪ್ರತಿ ನೋವಿನ ಕರೆಗೆ ಸ್ಪಂದಿಸುವ, ಕಾಶ್ಮೀರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಭಯತರುವ ಮುಲ್ಲಾ ಗಳ "ಕಾಶ್ಮೀರಿ ಸ್ವಾಯತ್ತತೆ"ಯ ವಾದಕ್ಕೆ ಪುಷ್ಟಿ ಕೊಡುವ ನಮ್ಮ"ಜಾತ್ಯತೀತ" ಮಾಧ್ಯಮಗಳು, 20 ವರ್ಷಗಳ ಹಿಂದಿನ ಈ ಆಧುನಿಕ ಕಾಲದ ವಲಸೆಯನ್ನು ಗಮನಿಸಲು ಯೋಗ್ಯವಾದ ವಿಷಯದಂತೆ ಪರಿಗಣಿಸಿಯೇ ಇಲ್ಲ. ಇನ್ನು ಮುಸ್ಲಿಮ್ ಮತಗಳಿಗೆ ಜೊಲ್ಲು ಸುರಿಸುವ, ಅವರನ್ನು ಓಲೈಸಲು ಯಾವ ಮಟ್ಟಕ್ಕೂ ಹೋಗಲು ಸಿದ್ಧವಿರುವ ನಮ್ಮ ರಾಜಕಾರಣಿಗಳನ್ನು ಬಿಡಿ. ನಮ್ಮ ಘನ ಪ್ರಧಾನ ಮಂತ್ರಿಗಳೇ ಹೇಳುತ್ತಾರೆ, "ಈ ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಆದ್ಯತೆ" ಎಂದು. ಇವರಂತೂ ಇಂತಹ ಘಟನೆ ಘಟಿಸಿಯೇ ಇಲ್ಲ ಎಂಬಂತೆ ನಟಿಸುತ್ತಿದ್ದಾರೆ.

ಗುಜರಾತದಲ್ಲಿ ಭಯೋತ್ಪಾದಕರು ಮತ್ತವರ ಏಜೆಂಟರು ಕೊಲ್ಲಲ್ಪಟ್ಟರೆ, ಅಂತ್ಯವಿಲ್ಲದಂತೆ ನೋವನ್ನು ನಮ್ಮ ನ್ಯಾಯಾಂಗ ವ್ಯಕ್ತಪಡಿಸುತ್ತದೆ. ಆದರೆ ಕಾಶ್ಮೀರದ ಈ ಕರ್ಮಕಾಂಡಕ್ಕೆ ಯಾರು ಕಾರಣರಾದರೋ ಅಂತಹವರನ್ನು ಗುರುತಿಸಲು, ಮತ್ತು ಅವರನ್ನು ನ್ಯಾಯ ಪ್ರಕ್ರಿಯೆಗೆ ಒಳಪಡಿಸಲು "ವಿಶೇಷ ತನಿಖಾ ತಂಡ"ವನ್ನು ಕಳಿಸುವ ಯೋಚನೆಯನ್ನು ಮಾಡುವುದಿಲ್ಲ. ಹಿಂದುಗಳ ಆತ್ಮಾಭಿಮಾನ, ಹಿಂದುಗಳ ಘನತೆ ಮತ್ತು ಹಿಂದುಗಳ ಜೀವಕ್ಕೆ ಯಾವುದೇ ಔಚಿತ್ಯ ನಮ್ಮ ಈ ಅದ್ಭುತ ದೇಶದಲ್ಲಿ ಇಲ್ಲವೆಂದು ಕಾಣುತ್ತದೆ.

ದುರಂತವೆಂದರೆ ಹಿಂದುಗಳು ಚರಿತ್ರೆಯ ಪ್ರಾಮುಖ್ಯತೆಯನ್ನು ಮರೆತಿದ್ದಾರೆ: ಈ ಇಪ್ಪತ್ತು ವರ್ಷಗಳಲ್ಲಿ ಬೆಳೆದ ಪೀಳಿಗೆಗೆ, ಕಾಶ್ಮೀರ ಕಣಿವೆಯಲ್ಲಿ ಹಿಂದುಗಳ ಸಂಖ್ಯೆಯನ್ನು ಈ ಆಧುನಿಕ ಕಾಲದಲ್ಲಿಯೂ, ಹೇಗೆ ವ್ಯವಸ್ಥಿತವಾಗಿ ಕೊಲೆ ಮತ್ತು ಬಲಾತ್ಕಾರದ ಹೊರದೂಡುವಿಕೆಯಿಂದ ಕಡಿಮೆ ಮಾಡಲಾಯಿತು ಎನ್ನುವುದರ ಅರಿವಿಲ್ಲ. "ಮರೆಯುವುದೆಂದರೆ, ಕ್ಷಮಿಸಿದಂತೆ" ಎಂದು ಹೇಳಲಾಗುತ್ತದೆ. ಆದರೆ, ಇಂತಹ ಘೋರ ಅಪರಾಧಗಳನ್ನು ಎಸಗಿದವರಿಗೆ ಕ್ಷಮೆಯ ಅರ್ಹತೆಯಿದೆಯೇ? ಭಾರತ ಸರ್ಕಾರ ಈ ಕಾಶ್ಮೀರಿ ಪಂಡಿತರನ್ನು ಹೇಗೆ ನಡುನೀರಲ್ಲಿ ಕೈ ಬಿಟ್ಟಿತೆಂಬುದನ್ನು ಮರೆಯಬೇಕೆ? ಜಮ್ಮು ಮತ್ತು ಕಾಶ್ಮೀರದ ಸರ್ಕಾರ ಈ ಅಭಾಗ್ಯರನ್ನು ನಡೆಸಿಕೊಳ್ಳುವ ಯಾವುದೇ ಅಳುಕೂ ಇಲ್ಲದ ವರ್ತನೆಗೆ "ಅದು ಸಮಂಜಸ" ಎನ್ನಬೇಕೆ?

ಶ್ರೀನಗರ, ಜನವರಿ 4, 1990 : ಜಮಾತ್ ಎ ಇಸ್ಲಾಮಿ ಯ ಅಂಗಸಂಸ್ಥೆಯಾದ ಹಿಜಬ್ ಉಲ್ ಮುಜಾಹಿದೀನ್, ಹೊರಡಿಸಿದ ಪತ್ರಿಕಾ ಹೇಳಿಕೆಯೊಂದನ್ನು "ಅಫ್ತಾಬ್" ಹೆಸರಿನ ಶ್ರೀನಗರದ ಸ್ಥಳೀಯ ಉರ್ದು ಪತ್ರಿಕೆಯೊಂದು ಪ್ರಕಟ ಪಡಿಸುತ್ತದೆ. ಉದ್ದೇಶ: ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ, ಪಾಕಿಸ್ತಾನದ ಜತೆ ಸೇರಿಸುವ ಸಲುವಾಗಿ "ಜಿಹಾದ್" ಗೆ ಕರೆ. ಮೊದಲ ಹೆಜ್ಜೆಯಾಗಿ, ಕಾಶ್ಮೀರದ ಹಿಂದುಗಳಿಗೆ ಆದೇಶ, ಹಿಂದುಗಳೇ, ಕಾಶ್ಮೀರವನ್ನು ಬಿಟ್ಟು ಗಂಟು ಮೂಟೆ ಕಟ್ಟಿಕೊಂಡು ಹೊರಡಿ. ಮತ್ತೊಂದು ಸ್ಥಳೀಯ ಪತ್ರಿಕೆ, "ಅಲ್ ಸಫಾ" ಈ ಹೊರದಬ್ಬುವ ಆದೇಶವನ್ನು ಪುನರುಚ್ಚರಿಸುತ್ತದೆ.

ಮುಂಬರುವ ಕೆಲವೇ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ಧ ಸ್ಥಿತಿಗೆ ತಲುಪಿದೆ, ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಮತ್ತವರ ರಾಷ್ಟ್ರೀಯ ಕಾನ್ಫರೆನ್ಸ್ ತನ್ನೆಲ್ಲ ಜವಾಬ್ದಾರಿಯನ್ನು ಕೊಡವಿಕೊಂಡಿದೆ. ಮುಖವಾಡಧಾರಿ ಮನುಷ್ಯರು ಎಲ್ಲೆಲ್ಲಿಯೂ ತಮ್ಮ "ಕೆಲ್ಯಾಶ್ನಿಕೋವ್" ಗಳನ್ನು ತೋರಿಸಿಕೊಂಡು ಭಾರತವಿರೋಧಿ ಘೋಷಣೆಗಳನ್ನು ಕೂಗುತ್ತ ಓಡಾಡುತ್ತಿದ್ದಾರೆ.

ಕಾಶ್ಮೀರಿ ಪಂಡಿತರ ಹತ್ಯೆಯ ಸುದ್ದಿಗಳು ಒಂದೊಂದಾಗಿ ಬರುತ್ತಿವೆ; ಅಲ್ಲಿಲ್ಲಿ ಸ್ಫೋಟಗಳಾಗುತ್ತಿವೆ; ಯಾವ ಧ್ವನಿವರ್ಧಕಗಳು ದೇವರನ್ನು ನಂಬುವ ಮುಸಲ್ಮಾನರನ್ನು ಪ್ರಾರ್ಥನೆಗೆ ಕರೆಯುತ್ತಿದ್ದವೋ ಅದೇ ಮಸೀದಿಗಳಿಂದ ಉದ್ರೇಕಕಾರಿ ಭಾಷಣಗಳು ಕೇಳಿ ಬರುತ್ತವೆ. ಒಂದು ಅನೂಹ್ಯ ಭಯದ ವಾತಾವರಣ ಕಾಶ್ಮೀರಿ ಪಂಡಿತರಲ್ಲಿ ಮನೆಮಾಡಿದೆ.

ಎಲ್ಲ ಕಾಶ್ಮೀರಿಗಳಿಗೆ ಇಸ್ಲಾಮೀ ವೇಷಭೂಷಣಗಳನ್ನು ಧರಿಸುವ, ಮಾದಕ ಪಾನೀಯಗಳನ್ನು ಮಾರುವುದನ್ನು ಮತ್ತು ಬಳಸುವುದನ್ನು ನಿರ್ಬಂಧಿಸುವ, ವಿಡಿಯೋ ಮತ್ತು ಸಿನೆಮಾ ಪ್ರದರ್ಶವನ್ನು ನಿಲ್ಲಿಸುವ ಕರೆ ಹೊತ್ತ ಭಿತ್ತಿಪತ್ರಗಳು ಹಂಚಲ್ಪಡುತ್ತಿವೆ. ಮತ್ತದೇ ಮುಖವಾಡಧಾರಿ ಮನುಷ್ಯರು, ಜನರನ್ನು ತಮ್ಮ ಕೈಗಡಿಯಾರದ ಸಮಯವನ್ನು ಅರ್ಧ ಗಂಟೆ ಮುಂದೆ ಹಾಕುವಂತೆ (ಪಾಕಿಸ್ತಾನದ ರಾಷ್ಟ್ರೀಯ ಸಮಯ) ಒತ್ತಾಯಿಸುತ್ತಿದ್ದಾರೆ.

5000 ವರ್ಷಗಳಿಂದ ಕಾಶ್ಮೀರದ ಸಾಂಸ್ಕೃತಿಕ ಮತ್ತು ನಾಗರಿಕ ಚರಿತ್ರೆಯಲ್ಲಿ ದಾಖಲೆಯಾಗಿರುವ ಮೂಲನಿವಾಸಿಗಳಾಗಿದ್ದ ಕಾಶ್ಮೀರಿ ಪಂಡಿತರ ಮನೆ, ಅಂಗಡಿ, ವಠಾರಗಳು ಗುರುತು ಮಾಡಲ್ಪಟ್ಟಿವೆ; ಅವುಗಳ ದ್ವಾರಗಳಿಗೆ ಸೂಚನಾಪತ್ರಗಳನ್ನು ಹಚ್ಚಲಾಗಿದೆ; "24 ಗಂಟೆಗಳಲ್ಲಿ ಕಾಶ್ಮೀರ ಬಿಟ್ಟು ತೊಲಗಿ, ಇಲ್ಲವೇ ಸಾಯಲು ಸಿದ್ಧರಾಗಿ". ಕೆಲವು ಸೂಚನಾ ಪತ್ರಗಳು ಮತ್ತಷ್ಟು ನಿಚ್ಚಳ ಸಂದೇಶ ಕೊಡುತ್ತವೆ "ನಮ್ಮ ಜತೆ ಸೇರಿ, ಅಥವಾ, ಇಲ್ಲಿಂದ ತೊಲಗಿ, ಇಲ್ಲವೇ ಸಾಯಿರಿ".

ಶ್ರೀನಗರ, ಜನವರಿ 19, 1990: ಜಗಮೋಹನ್ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲು ಆಗಮಿಸುತ್ತಾರೆ, ಅಸ್ತಿತ್ವದಲ್ಲೇ ಇಲ್ಲದ ಸರ್ಕಾರದ ನಾಯಕರಾದ ಫಾರುಖ್ ಅಬ್ದುಲ್ಲಾ ರಾಜೀನಾಮೆ ಕೊಟ್ಟು ಖಿನ್ನರಾಗಿ ಮೌನವಹಿಸುತ್ತಾರೆ. ಮೊಟ್ಟ ಮೊದಲನೆಯ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹತೋಟಿಗೆ ತರಲು ಕರ್ ಫ್ಯೂ ವಿಧಿಸಲಾಗುತ್ತದೆ. ಆದರೆ ಅದಕ್ಕೆ ಅಪರಾಧಗಳನ್ನು ತಡೆಯುವ ಶಕ್ತಿಯೇ ಇಲ್ಲವಾಗಿದೆ.

ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಾಂಟ್, ಮತ್ತು ಹಿಜ್ ಬ್ ಉಲ್ ಮುಜಾಹಿದೀನ್ ನ ಭಯೋತ್ಪಾದಕರು ದಿನವಿಡೀ ಮಸೀದಿಗಳ ಧ್ವನಿವರ್ಧಕಗಳನ್ನು ಬಳಸಿ ಜನರನ್ನು ಕರ್ ಫ್ಯೂ ಧಿಕ್ಕರಿಸಿ, ಮನೆಗಳಿಂದ ಹೊರಬರಲು, ರಸ್ತೆಗಳಲ್ಲಿ ಗುಂಪುಗೂಡಲು ಪ್ರಚೋದಿಸುತ್ತಾರೆ. ಮುಖವಾಡಧಾರಿ ಮನುಷ್ಯರು ತಮ್ಮ "ಕೆಲ್ಯಾಶ್ನಿಕೋವ್" ಗಳಿಂದ ಗಾಳಿಯಲ್ಲಿ ಗುಂಡುಹಾರಿಸಿ, ಕಾಶ್ಮೀರಿ ಪಂಡಿತರನ್ನು ಬೆದರಿಸಿ ಮನೆಗಳ ಒಳಗೇ ಇರುವಂತೆ ಒತ್ತಡ ತರುತ್ತಾರೆ.

ಸಾಯಂಕಾಲವಾಗುತ್ತಿದ್ದಂತೆ ಧ್ವನಿವರ್ಧಕಗಳಿಂದ ಹೊರಡುವ ಘೋಷಣೆಗಳು ಜೋರಾಗುತ್ತವೆ. ಟೇಪ್ ಮಾಡಿದ ಮೂರು ಘೋಷಣೆಗಳು ಪದೇ ಪದೇ ಬಿತ್ತರಿಸಲ್ಪಡುತ್ತವೆ. "ಕಾಶ್ಮೀರ್ ಮೇ ಅಗರ್ ರಹನಾ ಹೈ, ಅಲ್ಲಾ ಹೋ ಅಕ್ಬರ್ ಕಹನಾ ಹೈ"(ಕಾಶ್ಮೀರದಲ್ಲಿ ವಾಸಿಸಬೇಕಿದ್ದರೆ ಅಲ್ಲಾ ಹೋ ಅಕ್ಬರ್ ಹೇಳಲೇ ಬೇಕು), "ಯಹಾ ಕ್ಯಾ ಚಲೇಗಾ, ನಿಜಾಮ್ ಎ ಮುಸ್ತಾಫಾ.." (ಇಲ್ಲಿ ನಡೆಯುವುದೊಂದೇ ಕಾನೂನು, ದೇವರ ಕಾನೂನು), "ಅಸಿ ಗಚ್ಚಿ ಪಾಕಿಸ್ತಾನ್, ಬತಾವ್ ರೋಸ್ ಬತನೇ ಸಾರಿ" (ನಮಗೆ ಹಿಂದು ಸ್ತ್ರೀಯರು, ಪಾಕಿಸ್ತಾನ ಬೇಕು, ಹಿಂದು ಪುರುಷರು ಅಲ್ಲ!).

ಕಾಶ್ಮೀರಿ ಪಂಡಿತರು ಹೆದರಲು ಕಾರಣಗಳೂ ಇವೆ. ಜೆ ಕೆ ಎಲ್ ಎಫ್ ನಿಂದ ಸೆಪ್ಟಂಬರ್ 14, 1989 ರಂದು ಖ್ಯಾತ ವಕೀಲ ಪಂಡಿತ್ ಟೀಕಾಲಾಲ್ ಟಪ್ಲೂ ಅವರ ಬರ್ಬರ ಹತ್ಯೆಯಿಂದ ಮೊದಲುಗೊಂಡು, ಕಳೆದ ಕೆಲವು ತಿಂಗಳುಗಳಲ್ಲಿ, 300 ಹಿಂದುಗಳು, ಸ್ತ್ರೀಯರು ಹಾಗೂ ಪುರುಷರು ಬೇರೆ ಬೇರೆ ಸಂದರ್ಭಗಳಲ್ಲಿ, ಮತ್ತು ಸ್ಥಳಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಮೊದಲ ಹತ್ಯೆಯ ನಂತರದಲ್ಲೇ, ಹೈಕೋರ್ಟ್ ನ್ಯಾಯಾಧೀಶ ಎನ್ ಕೆ ಗಂಜೂ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 80 ವರ್ಷದ ವಯೋವೃದ್ಧ ಕವಿ ಪಂಡಿತ್ ಸರ್ವಾನಂದ ಪ್ರೇಮಿ, ಮತ್ತವರ ಮಗನನ್ನು ಕದ್ದೊಯ್ದು, ಹಿಂಸಿಸಿ, ಅವರ ಕಣ್ಣುಗುಡ್ಡೆಗಳನ್ನು ಕಿತ್ತು, ನಂತರ ನೇಣು ಹಾಕಲಾಗಿದೆ. ಶ್ರೀನಗರದ ಸೌರಾ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತ ನರ್ಸ್ ಒಬ್ಬಳನ್ನು ಗುಂಪಾಗಿ ಬಲಾತ್ಕರಿಸಿ, ನಂತರ ಹೊಡೆದು ಕೊಲ್ಲಲಾಗಿದೆ. ಮತ್ತೋರ್ವ ಸ್ತ್ರೀಯನ್ನು ಕದ್ದೊಯ್ದು, ಬಲಾತ್ಕರಿಸಿ, ನಂತರ ಸಾ ಮಿಲ್ ವೊಂದರಲ್ಲಿ ಗುರುತು ಸಿಕ್ಕದಂತೆ ಕೊಚ್ಚಿ ಹಾಕಲಾಗಿದೆ.

ಹಳ್ಳಿ, ಪಟ್ಟಣ ಭೇದವಿಲ್ಲದೆ, "ಹಿಟ್ ಲಿಸ್ಟ್" ಗಳು ಹರಿದಾಡುತ್ತಿವೆ, ಅವುಗಳಲ್ಲಿರುವ ಎಲ್ಲ ಹೆಸರುಗಳೂ ಕಾಶ್ಮೀರಿ ಪಂಡಿತರದ್ದು. ಹೇಳಿಕೊಳ್ಳುವ ಯಾವುದೇ ಸರ್ಕಾರ ಅಂತ ಇಲ್ಲದೇ ಆಡಳಿತವೆನ್ನುವುದು ಕುಸಿದು ಬಿದ್ದಿದೆ. ಕಾತರವೆನ್ನುವುದು ಮಡುಗಟ್ಟಿ ಜನವರಿ 19, 1990 ರ ಹೊತ್ತಿಗೆ ಹತಾಶೆಗೆ ಎಡೆಮಾಡಿಕೊಟ್ಟಿದೆ.

ಸಹಸ್ರ ಸಹಸ್ರ ಸಂಖ್ಯೆಯಲ್ಲಿ, ಕಾಶ್ಮೀರ ಕಣಿವೆಯ ಉದ್ದಗಲಕ್ಕೆ ಪಂಡಿತರು, ಜೀವ ಉಳಿಸಿಕೊಳ್ಳಲು ಪಲಾಯನ ಮಾಡುವ ಅತ್ಯಂತ ನೋವಿನ ನಿರ್ಣಯಕ್ಕೆ ಬರುತ್ತಾರೆ. 20 ನೇ ಶತಮಾನದ ಒಂದು ದುಷ್ಟ, ಅತ್ಯಾಚಾರ ಪ್ರೇರಿತ ವಲಸೆ ಪ್ರಾರಂಭವಾಗುತ್ತದೆ.

---

ದ್ವಿತೀಯ ಮಹಾಯುದ್ಧದ ಯಹೂದ್ಯರ ಸರ್ವನಾಶದ ನಂತರ, ಯಹೂದ್ಯರು ತಮ್ಮನ್ನು ನಿರಂತರವಾಗಿ ಭಯದಲ್ಲಿಟ್ಟ ಪರಿಸ್ಥಿತಿಗಳನ್ನು ಕುರಿತು "ಇದು ಮತ್ತೊಮ್ಮೆ ಆಗಬಾರದೆ"ನ್ನುವ ನಿರ್ಣಯಕ್ಕೆ ಬಂದರು. ಜೆರುಸಲೇಮ್ ನಲ್ಲಿ 45 ಎಕರೆಗಳ ನೆಲದ ಮೇಲೆ ನಿಂತ "ಯದ್ ವಶೆಮ್" ಯಹೂದ್ಯರ ಮೇಲಿನ ಅತ್ಯಾಚಾರಗಳನ್ನು ನೆನಪಿಸುವ ಸ್ಮಾರಕ, ಮಾತ್ರವಲ್ಲ, ಇಂತಹ ಅತ್ಯಾಚಾರಕ್ಕೆ ಒಳಗಾದ ಪ್ರತಿ ಯಹೂದಿಯ ಹೆಸರು, ಭಾವಚಿತ್ರ, ವಿಳಾಸಗಳು ಲಭ್ಯವಿರುವ ಆಕರ. ಇದರ ಉದ್ದೇಶ, ಬರುವ ಪೀಳಿಗೆಗಳು ತಮ್ಮ ಮೇಲೆ ಅತ್ಯಾಚಾರ ನಡೆಸಿದವರನ್ನು ಮರೆಯಬಾರದು, ಮತ್ತು ಕ್ಷಮಿಸಬಾರದೆಂದು.

ಆದರೆ ನಮ್ಮ ದೇಶಕ್ಕೇನಾಗಿದೆ? 20 ವರ್ಷಗಳಲ್ಲಿ, ನಮಗೆ, ಎಷ್ಟು ಕಾಶ್ಮೀರಿ ಪಂಡಿತರ ಪ್ರಾಣ ಹರಣವಾಯಿತು, ಎಷ್ಟು ಜನ ಸ್ತ್ರೀ, ಪುರುಷ, ಮಕ್ಕಳು ಸ್ವಾಭಿಮಾನದಿಂದ ತಮ್ಮದೇ ನೆಲದಲ್ಲಿ ಬದುಕುವ ಹಕ್ಕುಗಳನ್ನು ದೌರ್ಜನ್ಯಕ್ಕೆ ತುತ್ತಾಗಿ ಕಳೆದುಕೊಂಡರು, ಎಷ್ಟು ಸ್ತ್ರೀಯರು ಬಲಾತ್ಕಾರಕ್ಕೆ ಒಳಗಾದರು, ಅಪಾಂಗಗೊಳಿಸಲ್ಪಟ್ಟರು ಎನ್ನುವುದು ನೆನಪಿಲ್ಲ! ದಿಲ್ಲಿ ಮತ್ತು ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ, ಮುಂದೊಂದು ದಿನ ಕಾಶ್ಮೀರ ಕಣಿವೆಗೆ ಸುರಕ್ಷತೆ ಮತ್ತು ಗೌರವದೊಂದಿಗೆ ಮರಳುವ ಆಸೆಯಿಟ್ಟುಕೊಂಡ ಕೆಲವರಿರಬಹುದು. ಆದರೆ, ಸುತ್ತ ನಿಂತ ನಮಗೆ, ಮತ್ತು ಒಳಗೆಲ್ಲೋ ಅವರಿಗೂ ಕೂಡ, ಅದು ಸಾಧ್ಯವಿಲ್ಲ ಎಂದೇ ಅನಿಸುತ್ತದೆ.

ಹಿಂದುಗಳ ಅಮೋಘ ನಿರ್ಲಕ್ಷ್ಯಕ್ಕೆ ಇದೊಂದು ಉತ್ತಮ ವ್ಯಾಖ್ಯಾನ. (ಕೃಪೆ : ದಿ ಪಯೋನೀರ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more