ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮಪ್ಪ, ಬಿಜೆಪಿ ಸರಕಾರ ಕಾಪಾಡಪ್ಪ

By Staff
|
Google Oneindia Kannada News

BS Yeddyurappa
ಬೆಂಗಳೂರು, ಡಿ. 27 : ಕಳಂಕಿತ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರ ವಿರುದ್ಧ ರಾಜ್ಯದಲ್ಲಿ ಭಿನ್ನಮತ ಭುಗಿಲೆದ್ದಿರುವ ಸಂದರ್ಭದಲ್ಲಿ ಸಹೋದ್ಯೋಗಿಳ ಸಮೇತರಾಗಿ ವೈಕುಂಠ ಏಕಾದಶಿ ಆಚರಿಸಲು ತಿರುಪತಿಗೆ ತೆರಳಲಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಸರಕಾರವನ್ನು ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು.

ರೆಡ್ಡಿಗಳ ವಿರುದ್ಧ ಭಿನ್ನಮತ ತಾರಕಕ್ಕೇರಿದಾಗ ಕೆಲವರನ್ನು ಸಂಪುಟದಿಂದ ಕೈಬಿಟ್ಟಾಗ ಕಣ್ಣೀರುಗರೆದಿದ್ದ ಯಡಿಯೂರಪ್ಪ ಈಗ ನಗುನಗುತ್ತಲೇ ರೇಣುಕಾಚಾರ್ಯರನ್ನು ಸಂಪುಟಕ್ಕೆ ಸೇರಿಸಿರುವುದು ಹಿರಿಯಕಿರಿಯರೆನ್ನದೆ ಅನೇಕ ಶಾಸಕರ ಕಣ್ಣು ಕೆಂಪಾಗುವಂತೆ ಮಾಡಿದೆ.

ರೇಣುಕಾಚಾರ್ಯ ಪ್ರಮಾಣ ವಚನ ಸ್ವೀಕರಿಸಿದಾಗ ಸಮಾರಂಭದಿಂದ ಬೆಂಗಳೂರು ಶಾಸಕರು ಹೊರಗುಳಿದಿದ್ದರು. ಅಲ್ಲದೆ, ಹಿರಿಯ ರಾಷ್ಟ್ರೀಯ ನಾಯಕರು ಕೂಡ ಭಾಗವಹಿಸಿರಲಿಲ್ಲ. ಈಗ ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ. ಇಷ್ಟು ವರ್ಷ ನಾವೂ ಬಿಜೆಪಿಗಾಗಿ ದುಡಿದಿದ್ದೇವೆ, ನಮಗೂ ಸಚಿವ ಸ್ಥಾನ ನೀಡಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮದಿಂದ ಶಾಸಕರಾಗಿ ಆಯ್ಕೆಯಾಗಿರುವ ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ ಚಂದ್ರಕಾಂತ್ ಬೆಲ್ಲದ್, "ಜನರ ಸೇವೆ ಮಾಡಾಕ ನಮಗೂ ಸಚಿವ ಸ್ಥಾನ ನೀಡಬೇಕು. ಸ್ಥಾನ ನೀಡಲಿಲ್ಲಾ ಅಂದ್ರ ನಾವು ಗುಡುಗುವುದಿಲ್ಲ, ಜನರೇ ಗುಡುಗುತ್ತಾರೆ" ಎಂದು ಹುಬ್ಬಳ್ಳಿಯಲ್ಲಿ ಗುಡುಗು ಹಾಕಿದ್ದಾರೆ.

ಈ ಹಿಂದೆ ಕೂಡ ನಮಗೆ ಸಚಿವ ಸ್ಥಾನ ನೀಡಬೇಕೆಂದು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ನಮ್ಮನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಬೇಕು. ಅಷ್ಟೇ ನಮ್ಮ ಬೇಡಿಕೆ ಅಂತ ಸಂಪುಟ ಸೇರಲಿರುವವರ ಕ್ಯೂನಲ್ಲಿ ತಮ್ಮನ್ನೂ ಸೇರಿಸಿಕೊಂಡಿದ್ದಾರೆ.

ಮುಂದಿನ ವರ್ಷ ಜೂನ್ ತಿಂಗಳಲ್ಲಿ ಯಡಿಯೂರಪ್ಪ ಸರಕಾರ ಎರಡು ವರ್ಷ ಪೂರೈಸಲಿದೆ. ಆನಂತರವಷ್ಟೇ ಸಂಪುಟ ಪುನಾರಚನೆಯಾಗಲಿದೆ ಎಂದು ಹೇಳಿ ಯಡಿಯೂರಪ್ಪ ಭಿನ್ನಮತೀಯರಿಗೆ ತಣ್ಣೀರು ಎರಚಿದ್ದರು. ಆದರೆ, ರೇಣುಕಾ ಸೇರ್ಪಡೆ ವಿರುದ್ಧ ಸಿಡಿದೆದ್ದಿರುವವರ ಪಟ್ಟಿ ಬೆಳೆಯುತ್ತಲೇ ಇದೆ. ಈಗಾಗಲೆ, 30ಕ್ಕೂ ಹೆಚ್ಚು ಶಾಸಕರು ಕತ್ತಿ ಮಸೆಯುತ್ತಿದ್ದಾರೆ. ರೇಣುಕಾಚಾರ್ಯರಿಂದ ಏಕವಚನದಲ್ಲಿ ಬೈಸಿಕೊಂಡಿದ್ದ ಶೋಭಾ ಕರಂದ್ಲಾಜೆ ಕೂಡ ತಮ್ಮ ಮುನಿಸನ್ನು ಹೊರಗೆಡಹಿದ್ದಾರೆ.

ಎಂಡಿ ಲಕ್ಷ್ಮಿನಾರಾಯಣ ಅವರು ನೇರವಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೇ ಕಣ್ಣುಹಾಕಿದ್ದಾರೆ. ನಾನೂ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಅಂತ ಸದಾನಂದ ಗೌಡರಿಗೇ ಸೆಡ್ಡುಹೊಡೆದಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆ, ತಿರುಪತಿಗೆ ಏಕಾದಶಿ ಆಚರಿಸಲು ಯಡಿಯೂರಪ್ಪ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್ ಅಶೋಕ್ ಕೂಡಿರುವ ಪಟಾಲಂ ತಿರುಪತಿಗೆ ತೆರಳಿದೆ. ಸ್ವರ್ಗದ ಬಾಗಿಲು ತೆರೆದುಕೊಳ್ಳುವ ಹೊತ್ತಿನಲ್ಲಿ ಯಡಿಯೂರಪ್ಪನವರಿಗೆ ಭಿನ್ನಮತವೆಂಬ ನರಕದ ಬಾಗಿಲು ತೆರೆದುಕೊಳ್ಳುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X