ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀರಾಕುಮಾರ್ ಪಲ್ಲವಿ ಅನುಪಲ್ಲವಿ

By Staff
|
Google Oneindia Kannada News

Meira Kumar
ನವದೆಹಲಿ, ಡಿ. 7 : ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮನಮೋಹನ ಸಿಂಗ್ ಲಿಬರ್ಹಾನ್ ಸಮಿತಿಯ ವರದಿ ದೇಶದಲ್ಲಿ ಕೋಲಾಹಲ ಎಬ್ಬಿಸಿದೆಯಷ್ಟೆ. ವಿಷಯ ಇಷ್ಟು. ಬಾಬರಿ ಮಸೀದಿಯನ್ನು ಕೆಡವಿದವರು ಯಾರು? 1992 ಡಿಸೆಂಬರ್ 6 ರಂದು ಸಂಭವಿಸಿದ ಈ ಘಟನೆಯಲ್ಲಿ ಯಾರಯಾರ ಕೈವಾಡ ಇದೆ ಎನ್ನುವುದನ್ನು ಅಗೆದು ಬಗೆದು ನೋಡುವ ಒಂದು ಅಧ್ಯಯನ. ಆ ವರದಿ ಹೊರಬೀಳುವುದಕ್ಕೆ 17 ವರ್ಷ ಬೇಕಾಯಿತು.

ಈ ವಿಷಯದ ಬಗೆಗೆ ಕೂಲಂಕುಷ ಚರ್ಚೆಯಾಗಬೇಕು ಎನ್ನುವುದು ಲೋಕಸಭಾ ಸದಸ್ಯರ ಇಂಗಿತ. ಹಾಗಾಗಿ ಇಂದು ಮತ್ತು ನಾಳೆ ಡಿ 7ಮತ್ತು ಎಂಟರಂದು ಲೋಕಸಭೆಯಲ್ಲಿ ಬಿಸಿಬಿಸಿ ಚರ್ಚೆ. ಇದಕ್ಕೋಸ್ಕರವೇ ಕರೆದ ವಿಶೇಷ ಸಂಸತ್ ಅಧಿವೇಶನ ಈಗ ನಡೆಯುತ್ತಿದೆ.

ಇಂದು ಬೆಳಗ್ಗೆ 11 ಗಂಟೆಯಿಂದ ಚರ್ಚೆ ನಡೆಯುತ್ತಿದೆ. ಮುಖ್ಯ ಭಾಷಣಕಾರರಲ್ಲಿ ಸಿಪಿಐನ ಧುರೀಣ ಗುರುದಾಸ್ ದಾಸ್ ಗುಪ್ತ ಮತ್ತು ಕಾಂಗ್ರೆಸ್ಸಿನ ಉತ್ತರ ಪ್ರದೇಶದ ಸದಸ್ಯ ಜಗದಂಬಿಕ ಪಾಲ್ ಅವರು ಹೇಳಿದ್ದಿಷ್ಟು. ವರದಿಯಲ್ಲಿ ಹೆಸರಿಸಲಾದ 68 ಮಂದಿಗೆ ಶಿಕ್ಷೆ ಆಗಬೇಕು. ಈ ವರದಿ ಬರೆಯುವ ಸಮಯಕ್ಕೆ ಭಾಜಪದ ಅಧ್ಯಕ್ಷ ರಾಜನಾಥ್ ಸಿಂಗ್ ತಮ್ಮ ವಾಗ್ಝರಿಯನ್ನು ತೇಲಿಬಿಡುತ್ತಿದ್ದು, ಭಾಜಪ ತಪ್ಪೇನೂ ಇಲ್ಲ ಎನ್ನುವುದು ಅವರ ಸಮರ್ಥನೆಯ ಸಾರಾಂಶ.

ಘಟನೆ ಸಂಭವಿಸಿದ ದಿನದಂದು ಭಾರತದ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿತ್ತು. ಪ್ರಧಾನಿಯಾಗಿ ಪಿ ವಿ ನರಸಿಂಹರಾವ್ ಅವರಿದ್ದರು. ಅವರು ಕೂಡಾ ಘಟನೆಯಲ್ಲಿ ಪಾಲುದಾರರು ಎಂಬುದು ಬಿಜೆಪಿಯ ವಾದ. ಆದರೆ, ಲಿಬರ್ಹಾನ್ ವರದಿಯಲ್ಲಿ ನರಸಿಂಹರಾವ್ ಅವರ ಸೊಲ್ಲು ಇಲ್ಲದಿರುವುದು ವರದಿಯನ್ನು ಅನುಮಾನದಿಂದ ನೋವಂತಾಗಿದೆ.

ಮುಖ್ಯವಾದ ಸುದ್ದಿಯೆಂದರೆ ಒಬ್ಬ ಸದಸ್ಯರು ಮಾತನಾಡುತ್ತಿರುವಾಗ ಇನ್ನೊಬ್ಬ ಸದಸ್ಯ ಅಥವಾ ನಾಕಾರು ಎಂಟು ಮಂದಿ ಸದಸ್ಯರು ಮಧ್ಯೆ ಬಾಯಿಹಾಕುವುದು ಲೋಕಸಭೆಯಲ್ಲಿ ವಾಡಿಕೆ. ಹಾಗಾಗಿ ಯಾರು ಎನು ಹೇಳುತ್ತಾರೆ ಎಂದು ಆಸಕ್ತಿಯಿಂದ ಟಿವಿ ನೋಡುತ್ತಾ ಕುಳಿತವರಿಗೆ ಗೊಂದಲ. ಅದೇನೇ ಇರಲಿ, ಸ್ಪಷ್ಟವಾಗಿ ಕೇಳಿಸಿದ ವಿಚಾರವೆಂದರೆ ಲೋಕಸಭಾಧ್ಯಕ್ಷೆ ಮೀರಾಕುಮಾರ್ ಹೇಳುತ್ತಿರುವ ಆಪ್ ಭೈಟಿಯೇ, ಆಪ್ ಭೈಟಿಯೇ, ಶಾಂತ್ ಹೋಜಾಯಿ ಯೇ, ಆಪ್ ಕಾ ಬಾರಿ ಖತಂ ಹೋಗಯಾ, ಮುಂತಾದವು.

ಟಿವಿಗೆ ಕಿವಿಯನ್ನು ಅಂಟಿಸಿಕೊಂಡು ಕುಳಿತಿದ್ದ ನಮ್ಮ ಉಪಸಂಪಾದಕರು ಹೇಳುವ ಪ್ರಕಾರ ಮೀರಾಕುಮಾರ್ ಅವರ ಎಲ್ಲ ಸಮಯ, ಎಲ್ಲ ಚಾಕಚಕ್ಯತೆ, ಸಂಸತ್ ನಿಭಾಯಿಸುವ ಎಲ್ಲ ಕೌಶಲ್ಯಗಳೂ ಸುಮ್ಮನಿರಿ, ಸುಮ್ಮನಿರಿ ಎನ್ನುವುದರಲ್ಲೇ ಕಳೆದುಹೋಗುತ್ತಿದೆ. ಏನಿಲ್ಲವೆಂದರೂ ಅವರೂ 'ಶಾಂತ್ ಹೋಜಾಯಿ ಯೇ' ಶಬ್ದಗುಚ್ಛಗಳನ್ನು ಬೆಳಗಿನಿಂದ 79 ಬಾರಿ ಬಳಸಿದ್ದಾರೆ. ಈ ಅಧಿವೇಶನ ಮುಗಿಯುವ ಹೊತ್ತಿಗೆ ಅವರು ತ್ರಿಶತಕ ಬಾರಿಸಿದರೆ ಆಶ್ಚರ್ಯವಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X