ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕರ ಜನ್ಮಭೂಮಿ, ಕರ್ಮಭೂಮಿಯಲ್ಲಿ ಹಬ್ಬ

|
Google Oneindia Kannada News

Saint Kanakadasa
ಹಾವೇರಿ, ನ. 5 : ದಾಸವರೇಣ್ಯ ಕನಕದಾಸರ ಜನ್ಮಸ್ಥಳವಾದ ಬಾಡದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 7 ಕೋಟಿ ರುಪಾಯಿಗಳ ವಿವಿಧ ಕಾಮಗಾರಿಗಳಿಗೆ ನವೆಂಬರ್ 5 ರಂದು ಚಾಲನೆ ದೊರೆಯಲಿದೆಯೆಂದು ಪ್ರಾಧಿಕಾರದ ಆಯುಕ್ತ ಕೆ.ರೇವಣ್ಣಪ್ಪ ಅವರು ತಿಳಿಸಿದ್ದಾರೆ.

ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನಕದಾಸರ 522ನೇ ಜನ್ಮದಿನವಾದ ನವೆಂಬರ್ 5 ರಂದು ಬೆಳಿಗ್ಗೆ ಬಾಡದಲ್ಲಿ ಜಯಂತಿ ಕಾರ್ಯಕ್ರಮ ಜರುಗಲಿದ್ದು, ಸಾಯಂಕಾಲ 4.30ಕ್ಕೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಭೂಮಿಪೂಜೆ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ ಎಂದರು.

ಕನಕದಾಸರ ಜನ್ಮಸ್ಥಳ ಬಾಡ ಹಾಗೂ ಕರ್ಮಭೂಮಿ ಕಾಗಿನೆಲೆಯನ್ನು ಕೂಡಲ ಸಂಗಮ ಮಾದರಿಯಲ್ಲಿ ರಾಜ್ಯದ ಪ್ರಮುಖ ಪ್ರವಾಸೀ ಕೇಂದ್ರವನ್ನಾಗಿ ಮಾರ್ಪಡಿಸಲು ಸರ್ಕಾರ ಯೋಜನೆ ರೂಪಿಸಿ ಮೂರುವರ್ಷಗಳ ಹಿಂದೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿದ್ದು, ಸರ್ಕಾರ ಪ್ರಾಧಿಕಾರಕ್ಕೆ ಈ ಅವಧಿಯಲ್ಲಿ 21.5 ಕೋಟಿ ರುಪಾಯಿಗಳನ್ನು ನೀಡಿದೆ.

ಕಾಮಗಾರಿಗಳನ್ನು ಮೂರು ಹಂತದಲ್ಲಿ ಕೈಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ಕಾಗಿನೆಲೆಯಲ್ಲಿ 7 ಕೋಟಿ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. 2ನೇ ಹಂತದ 7 ಕೋಟಿ ರುಪಾಯಿ ಕಾಮಗಾರಿಗಳಿಗೆ ನ.5 ರಂದು ಬಾಡದಲ್ಲಿ ಸಚಿವದ್ವಯರು ಚಾಲನೆ ನೀಡಲಿದ್ದಾರೆ. ಬಾಡದಲ್ಲಿ ಕನಕದಾಸರ ಅರಮನೆ ಇದ್ದು, ಸ್ಥಳದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕೋಟಿ(ಸಂರಕ್ಷಣ ಗೋಡೆ) 1.5 ಕೋಟಿ ರುಪಾಯಿ ವೆಚ್ಚದಲ್ಲಿ ಬಾಡಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಸಂಪರ್ಕ ರಸ್ತೆ, 1.5 ಕೋಟಿ ರುಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಬಂಕಾಪುರ-ಸವಣೂರು ಈ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ 5 ಕಡೆಗಳಲ್ಲಿ ಮಹಾದ್ವಾರಗಳ ನಿರ್ಮಾಣ ಹಾಗೂ ಪ್ರಾಧಿಕಾರಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ನೀಡಿರುವ 10 ಎಕರೆ ಜಾಗೆಗೆ ಸಂರಕ್ಷಣಾಗೋಡೆ ಮತ್ತಿತರ ಕಾಮಗಾರಿ ಸೇರಿ ಒಟ್ಟು 7 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ" ಎಂದರು.

ಕಾಗಿನೆಲೆಯಲ್ಲಿ ಪ್ರಾಧಿಕಾರಕ್ಕೆ ಲಭ್ಯವಿರುವ 128 ಎಕರೆ ಜಮೀನನ್ನು ಸೂಕ್ತವಾಗಿ ಅಭಿವೃದ್ಧಿ ಪಡಿಸಿದ್ದು, ಇಲ್ಲಿ ಕಾಮಗಾರಿಗಳನ್ನು ಕೈಕೊಳ್ಳಲು ಕೇಂದ್ರ ಸರ್ಕಾರದಿಂದಲೂ 4.99 ಕೋಟಿ ರುಪಾಯಿ ಲಭ್ಯವಾಗಲಿದೆ. ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸಕ್ಕೆ ಒಂದು ಕೋಟಿ ರುಪಾಯಿ ಲಭ್ಯವಾಗಲಿದ್ದು, ಒಂದನೇ ಹಂತದ ಕಾಮಗಾರಿಗಳಿಗೆ ಕಳೆದ ವರ್ಷದಲ್ಲೇ ಚಾಲನೆ ನೀಡಲಾಗಿದೆ.

ಕಾಗಿನೆಲೆಯಲ್ಲಿ ಆದಿಕೇಶವ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 1.31 ಕೋಟಿ ರುಪಾಯಿ ವೆಚ್ಚದಲ್ಲಿ ಕನಕದಾಸರ ಸಮಾಧಿ "ಕನಕಮಂದಿರ" ನಿರ್ಮಾಣ ಮುಕ್ತಾಯ ಹಂತದಲ್ಲಿದೆ. ಮಹಾದ್ವಾರ, ಸಭಾ ಭಾವನ, ಆಡಳಿತ ಕಚೇರಿ, ಗ್ರಂಥಾಲಯ ಕಾಮಗಾರಿಗಳು ವಿವಿಧ ಹಂತದಲ್ಲಿವೆ. ದೇವನಹಳ್ಳಿ ಶಿಲ್ಪಿಗಳು, ಕಲ್ಲುಕುಸುರಿನ ಕೆಸಲಗಳನ್ನು ಮಾಡುತ್ತಿದ್ದು, ಈ ಕಾಮಗಾರಿಗಳು 2010ರ ಮೇ ತಿಂಗಳಲ್ಲಿ ಪೂರ್ಣಗೊಳ್ಳಬಹುದಾಗಿದೆ.

ಇಂಗಳಗುಂದಿ ಗ್ರಾಮದ ಗುಡ್ಡದ ಮೇಲೆ ಕನಕದಾಸರ ಆರಾಧ್ಯ ದೈವ ಚನ್ನಕೇಶವ ದೇವಸ್ಥಾನದ ಪ್ರತಿರೂಪ ದೇವಸ್ಥಾನವನ್ನು 1.71 ಕೋಟಿ ರುಪಾಯಿ ವೆಚ್ಚದಲ್ಲಿ ಕೈಕೊಳ್ಳಲಾಗುತ್ತಿದ್ದು. ದೇವನಹಳ್ಳಿ ಶಿಲ್ಪಿಗಳು ದೇಗುಲದ ಕುಸುರಿನ ಕೆತ್ತನೆಯಲ್ಲಿ ತೊಡಗಿದ್ದಾರೆ. ಈ ಕಾಮಗಾರಿಗಳಲ್ಲದೆ ದೇವಸ್ಥಾನ ಕಂಪೌಂಡ್, ದೇವಸ್ಥಾನಕ್ಕೆ ಸಂಪರ್ಕ ರಸ್ತೆ, ಧ್ವಜಸ್ಥಂಬ ಹಾಗೂ ಮುಖ್ಯದ್ವಾರಗಳ ಕಾಮಗಾರಿಗಳು ಇಷ್ಟರಲ್ಲೇ ಆರಂಭಗೊಳ್ಳಲಿವೆ" ಎಂದರು ಪ್ರಾಧಿಕಾರದ ಕಾಮಗಾರಿಗಳ ವಿವರ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಎಲ್ಲ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದೂ ಅವರು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X