ಸರ್ವಪಕ್ಷಗಳ ಸಭೆ : ನೂತನ ತೆರಿಗೆ ಪದ್ಧತಿ ?
ಬೆಂಗಳೂರು, ಅ. 11 : ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದಿಂದ ನಲುಗಿರುವ ಜನತೆಗೆ ಪುನರ್ವಸತಿ ಕಲ್ಪಿಸಲು ಸರಕಾರ ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳಲ್ಲೂ ಪಕ್ಷಭೇದ ಮರೆತು ಕೈಜೋಡಿಸುವುದರೊಂದಿಗೆ ಎಲ್ಲ ರಾಜಕೀಯ ಪಕ್ಷಗಳು ಇಂದಿಲ್ಲಿ ಒಗ್ಗಟ್ಟು ಪ್ರದರ್ಶಿಸಿವೆ.
ಪರಿಹಾರದ ಬಗ್ಗೆ ಟೀಕೆ ಟಿಪ್ಪಣಿಗಳು ಬೇಡ. ಪಕ್ಷಭೇದ ಮತ್ತು ರಾಜಕೀಯ ಲಾಭದ ಉದ್ದೇಶಗಳನ್ನು ಬಿಟ್ಟು ಮೊದಲು ಬೀದಿ ಪಾಲಾಗಿರುವ ಕುಟುಂಬಗಳನ್ನು ರಕ್ಷಿಸುವುದು ನಮ್ಮ ಹೊಣೆ. ಎಲ್ಲರೂ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಪ್ರತಿಪಕ್ಷದ ಮುಖಂಡರು ಸಲಹೆ ನೀಡಿದರು.
ಕೂಡಲೇ ಹಾನಿಗೊಳಗಾದ ಪ್ರತಿ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಪರಿಹಾರ ಕಾರ್ಯ ರೂಪಿಸುವುದು. ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಕ್ಷಣ ಪರಿಹಾರ ಕಲ್ಪಿಸುವುದು. ಪದೇಪದೇ ಪ್ರವಾಹಕ್ಕೆ ಸಿಲುಕದಂತೆ ಶಾಶ್ವತ ಪರಿಹಾರ ಒದಗಿಸುವುದು. ಕೇಂದ್ರ ಸರಕಾರದಿಂದ ಹೆಚ್ಚಿನ ಪರಿಹಾರಕ್ಕೆ ಒತ್ತಾಯ. ಶೀಘ್ರದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡುವುದೂ ಸೇರಿದಂತೆ ಸರಕಾರ ಹಲವರು ಕ್ರಮಗಳನ್ನು ಕೈಗೊಳ್ಳಬೇಕೆಂದು ವಿರೋಧ ಪಕ್ಷಗಳ ಮುಖಂಡರು ಮನವಿ ಮಾಡಿಕೊಂಡರು.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಕೆಎಚ್ ಮುನಿಯಪ್ಪ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಮೇಲ್ಮನೆ ಪ್ರತಿಪಕ್ಷದ ನಾಯಕ ವಿಎಸ್ ಉಗ್ರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದಗೌಡ, ಸಂಸದರಾದ ಅನಂತಕುಮಾರ್, ಚೆಲುವರಾಯಸ್ವಾಮಿ, ರಾಜಶೇಖರಮೂರ್ತಿ, ಎಂಪಿ ನಾಡಗೌಡ, ಮಾರಸಂದ್ರ ಮುನಿಯಪ್ಪ, ಎಂಸಿ ನಾಣಯ್ಯ, ಬಂಡೆಪ್ಪ ಕಾಶೆಂಪೂರ್, ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಂತ್ರಸ್ಥರ ಪರಿಹಾರ ಕಾರ್ಯಕ್ಕೆ ಸರ್ವಪಕ್ಷಗಳ ನಾಯಕರೊಂದಿಗೆ ಚರ್ಚಿಸಲಾಗಿದೆ. ಅನೇಕ ಸಲಹೆಗಳನ್ನು ವಿರೋಧಪಕ್ಷಗಳು ನೀಡಿವೆ ಎಂದರು. ಅಲ್ಲದೇ, ಶ್ರೀಸಾಮಾನ್ಯರನ್ನು ಹೊರತುಪಡಿಸಿ ಶ್ರೀಮಂತರ ಎನಿಸಿಕೊಂಡವರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಲು ನೂತನ ತೆರಿಗೆ ಪದ್ಧತಿ ತರಲು ಸರಕಾರ ಚಿಂತನೆ ನಡೆಸಿದೆ. ನೂತನ ಪದ್ಧತಿ 6 ತಿಂಗಳಿಂದ 1 ವರ್ಷದೊಳಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಯಡಿಯೂರಪ್ಪ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications