• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಕೃತಿಯ ವಿಕೋಪ, ಸರಕಾರದ ಮೇಲೆ ಜನರ ಕೋಪ

|
ಬೆಂಗಳೂರು, ಅ. 3 : ಮಳೆಯ ದಾಂಗುಡಿ ರಾಜ್ಯದಲ್ಲಿ ತನ್ನ ಅಟ್ಟಹಾಸ ಮೆರೆದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪ್ಪತ್ತು ಘೋಷಿಸಬೇಕೆಂದು ಕೇಂದ್ರಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ. ಮತ್ತು 10 ಸಾವಿರ ಕೋಟಿ ರು. ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇಂಥ ವಿಪ್ಪತ್ತಿನ ಸಮಯದಲ್ಲಿ ವಿರೋಧ ಪಕ್ಷಗಳು ಸರಕಾರವನ್ನು ಟೀಕಿಸುವುದನ್ನು ಬಿಟ್ಟು ಪರಿಹಾರ ಕಾರ್ಯಕ್ಕೆ ಕೈಜೋಡಿಸಬೇಕೆಂದು ಕೇಳಿಕೊಂಡಿದ್ದಾರೆ.

ಪ್ರಕೃತಿಯ ವಿಕೋಪ, ಜನರ ಕೋಪ : ಪ್ರಕೃತಿಯ ವಿಕೋಪಕ್ಕೆ ಇಡೀ ಉತ್ತರ ಕರ್ನಾಟಕವೇ ಪತರಗುಟ್ಟಿದೆ. ರಾಜಕಾರಣಿಗಳ, ಅಧಿಕಾರಿಗಳ ನಿಷ್ಕ್ರಿಯತೆಯಿಂದ ಜನತೆಯೂ ಕೋಪದಿಂದ ಥರಥರಗುಟ್ಟುತ್ತಿದ್ದಾರೆ. ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಎಲ್ಲೆಲ್ಲೂ ನೀರನ್ನು ಕಾಣಿತ್ತಿರುವ ಜನರು ಕಣ್ಣೀರು ಸುರಿಸುತ್ತಿದ್ದಾರೆ. ಬಿಜಾಪುರ, ಬೀದರ್, ಗುಲಬರ್ಗಾ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಬಳ್ಳಾರಿ, ರಾಯಚೂರು, ಗದಗ, ಉತ್ತರ ಕನ್ನಡ, ಕೊಪ್ಪಳ ಜಿಲ್ಲೆಗಳು ಸಂಪೂರ್ಣ ಜಲಪ್ರಳಯಕ್ಕೆ ತುತ್ತಾಗಿವೆ. ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಪ್ರವಾಹಕ್ಕೆ ಆಹುತಿಯಾದವರ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 160 ದಾಟಿದೆ. ಎಲ್ಲೆಡೆಗಳಿಂದಲೂ ಆತ್ಮೀಯರನ್ನು ಕಳೆದುಕೊಂಡವರ, ಮನೆಮಠ ಕಳೆದುಕೊಂಡವರ ಆರ್ತನಾದ ಮುಗಿಲುಮುಟ್ಟಿದೆ.

ಪ್ರವಾಹದ ಭೀಕರತೆಯ ಮುಂದೆ ರಕ್ಷಣಾ ತಂಡ ಕೂಡ ನಿಸ್ಸಹಾಯಕವಾಗಿದೆ. ಬಾಗಲಕೋಟೆಯ ಹುನಗುಂದ್ ಬಳಿಯ ಹಿರೇಮಾಗಿಯಲ್ಲಿ ರಕ್ಷಣಾ ಕಾರ್ಯದಲ್ಲಿ ಬಳಸಿದ್ದ ದೋಣಿಯೇ ಪ್ರವಾಹಕ್ಕೆ ಸಿಲುಕಿದ್ದರಿಂದ ರಕ್ಷಣಾ ಸಿಬ್ಬಂದಿಯೇ ಮರವೇರಿ ರಕ್ಷಣೆಗೆ ಗೋಗರೆದ ಘಟನೆ ಇಂದು ಜರುಗಿದೆ. ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಮತ್ತು ನಾಲ್ವರು ಮಕ್ಕಳು ಜಲಸಮಾಧಿಯಾಗಿದ್ದಾರೆ. ಹೆದರಿಕೆಯಿಂದ ಏಳು ಜನ ನೀರಿಗೆ ಜಿಗಿದಿದ್ದರಿಂದ ಅನಾಹುತ ಸಂಭವಿಸಿದೆ. ಅವರಲ್ಲಿ ಇಬ್ಬರನ್ನು ಪಾರುಮಾಡಲಾಗಿದೆ.

ಕಾರವಾರದ ಕಡುವಾಡ ಎಂಬ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮಣ್ಣಿನ ಗುಡ್ಡ ಕುಸಿದಿದ್ದರಿಂದ ಅದರಡಿಯಲ್ಲಿ 20 ಜನ ಸಿಲುಕಿದ್ದರೆಂದು ಶಂಕಿಸಲಾಗಿದೆ. ಈಗಾಗಲೇ ನಾಲ್ವರ ಶವವನ್ನು ಹೊರತೆಗೆಯಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಶಂಕಿಸಲಾಗಿದೆ. ಬಾಗಲಕೋಟೆಯ ಮರೆಗುದ್ದಿ ಎಂಬಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಕಮತನೂರು ಗ್ರಾಮದಲ್ಲಿ ಕೆರೆ ಕಟ್ಟೆಯೊಡೆದು ಇಡೀ ಗ್ರಾಮ ನೀರಿಗೆ ಆಹುತಿಯಾಗಿದೆ. ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದರಿಂದ ಕೆರೆ ಒಡೆಯಬಹುದೆಂಬ ಮಾಹಿತಿ ಜಿಲ್ಲಾಡಳಿತಕ್ಕೆ ಇದ್ದರೂ ಮುನ್ನೆಚ್ಚರಿಕೆ ವಹಿಸಲಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೊಚ್ಚಿಗೆದ್ದ ಸಂತ್ರಸ್ತರು : ತಲೆಯ ಮೇಲೆ ಸೂರಿಲ್ಲದೇ, ರಕ್ಷಣಾ ಕಾರ್ಯ ಸೂಕ್ತ ಸಮಯದಲ್ಲಿ ತಲುಪದೇ, ಕುಡಿಯಲು ನೀರು ತಿನ್ನಲು ಆಹಾರವಿಲ್ಲದೆ ಒದ್ದಾಡುತ್ತಿರುವ ಜನ ಅನೇಕ ಕಡೆಗಳಲ್ಲಿ ಸರಕಾರದ ವಿರುದ್ಧ, ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಜಿಲ್ಲಾಧಿಕಾರಿಗೆ ದಿಗ್ಬಂಧನ ಹಾಕಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಸುರಿಯುತ್ತಿರುವ ಮಳೆಯ ಛಾವಣಿಯ ಕೆಳಗೇ ಜನ ಕಾಲ ದೂಡುತ್ತಿದ್ದಾರೆ. ಎಣಿಸಿದಂತೆ ಯಾವ ಪರಿಹಾರ ಕಾರ್ಯ, ಅನ್ನ ಆಹಾರಾದಿಗಳು ತಲುಪದ ಕಾರಣ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಎತ್ತಿನ ಬಂಡಿಯ ಕೆಳಗೆ, ಗುಡಿಗಳಲ್ಲಿ, ಶೆಡ್ಡುಗಳ ಕೆಳಗೆ ಮಕ್ಕಳು ಮರಿಗಳ ಸಮೇತರಾಗಿ ಬಯಲಲ್ಲಿಯೇ ಸಂಸಾರ ನಡೆಸಿದ್ದಾರೆ. ಇನ್ನು ಜಾನುವಾರುಗಳ ಕಥೆಯಂತೂ ಕರುಣಾಜನಕವಾಗಿದೆ. ಸಕಾಲಕ್ಕೆ ರಕ್ಷಣೆ ಮತ್ತು ಪರಿಹಾರ ಒದಗಿಸದ ಕಾರಣ ಕೊಪ್ಪಳ ಜಿಲ್ಲಾಧಿಕಾರಿಗೆ ಜನರೇ ದಿಗ್ಬಂಧನ ಹಾಕಿದ ಘಟನೆ ಇಂದು ಜರುಗಿದೆ.

ಮಂತ್ರಾಲಯದಲ್ಲಿ ಹಾಲನ್ನು ನಿರೀಕ್ಷಿಸಿ ಬಂದ ಭಕ್ತಾದಿಗಳನ್ನು ಪ್ರಕೃತಿ ಮಾತೆ ನೇರವಾಗಿ ನೀರಲ್ಲೇ ಹಾಕಿದ್ದಾಳೆ. ಮನೆಮಠ ಸೇರಿಕೊಳ್ಳುವುದಿರಲಿ ಮಠದ ಛಾವಣಿಯ ಮೇಲೆ ನೀರಿಗೆ ಹಾಹಾಕಾರ ಮಾಡುತ್ತಿದ್ದ ಜನರಿಗೆ ಕುಡಿಯಲು ತೊಟ್ಟು ನೀರು ದೊರೆತಿಲ್ಲ. ಇನ್ನು ಆಹಾರದ ಮಾತು ದೂರವೇ ಉಳಿಯಿತು. ರಕ್ಷಣೆಗೆಂದು ಬಂದ ಹೆಲಿಕಾಪ್ಟರನ್ನು ಏರದೆ ಕೆಲವರು ಅಲ್ಲಿಯೇ ಉಳಿದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ನಡುವೆ, ಮುಂಗಾರು ಮಳೆ ಚಿತ್ರೀಕರಣ ನಡೆದ ಸ್ಥಳ ವೀಕ್ಷಣೆಗೆ ಬಂದಿದ್ದ ಏಳು ಜನ ಪ್ರವಾಸಿಗರು ಲಿಂಗನಮಕ್ಕಿಯಿಂದ ಶರಾವತಿಗೆ ಹೆಚ್ಚಿನ ನೀರು ಹರಿದು ಬಂದ ಕಾರಣ ಅಪಾಯಕ್ಕೆ ಸಿಲುಕಿದ್ದರು. ಆದರೆ, ರಕ್ಷಣಾ ಸಿಬ್ಬಂದಿ ಅವರನ್ನು ಹಗ್ಗ ಹಾಕಿ ಮೇಲಕ್ಕೆಳೆದು ಅಪಾಯದಿಂದ ಪಾರು ಮಾಡಿದ್ದಾರೆ.

ಕಾದಿದೆ ಮತ್ತಷ್ಟು ಮಳೆ : ಮಹಾಪೂರದಿಂದ ತೃಪ್ತನಾಗದ ವರುಣ ದೇವರು ಮುಂದಿನ ಐದು ದಿನಗಳ ಕಾಲವೂ ಭಾರೀ ಮಳೆ ಸುರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಬೀದರ್ ನಲ್ಲಿ 46 ಮಿ.ಮೀ., ಗುಲಬರ್ಗಾದಲ್ಲಿ 22 ಮಿ.ಮೀ., ಬಿಜಾಪುರದಲ್ಲಿ 21 ಮಿ.ಮೀ., ರಾಯಚೂರಿನಲ್ಲಿ 13 ಮಿ.ಮೀ., ಬಾಗಲಕೋಟೆಯಲ್ಲಿ 23 ಮಿ.ಮೀ., ಬೆಳಗಾವಿಯಲ್ಲಿ 30 ಮಿ.ಮೀ, ಗದಗದಲ್ಲಿ 30 ಮಿ.ಮೀ., ಧಾರವಾಡದಲ್ಲಿ 32 ಮಿ.ಮೀ., ಕೊಪ್ಪಳದಲ್ಲಿ 18 ಮಿ.ಮೀ., ಉತ್ತರ ಕನ್ನಡದಲ್ಲಿ 35 ಮಿ.ಮೀ. ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಮಳೆ ಇನ್ನೂ ಐದು ದಿನ ಮುಂದುವರಿದೆ ನಂತರ ಕ್ರಮೇಣ ತಗ್ಗಲಿದೆ ಎಂದು ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more