ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ

By Staff
|
Google Oneindia Kannada News

ರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು.

*ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! ತನ್ನ ಮಾಲೀಕರಿಗೆ ತೊಂದರೆ ಕೊಟ್ಟ ರೆಡ್ಡಿಯವರನ್ನು ಅವರು ಬದುಕಿದ್ದಾಗ ತರಾವರಿಯಾಗಿ ಟೀಕಿಸುತ್ತಿದ್ದ ಟಿವಿ ವಾಹಿನಿಯೊಂದು ರೆಡ್ಡಿಯವರು ಸತ್ತಕೂಡಲೇ ಸುಗುಣಸಂಪನ್ನ ನಾಯಕನನ್ನಾಗಿ ಬಿಂಬಿಸತೊಡಗಿತು!

ಆದರೆ ಸತ್ಯವನ್ನೆಂದಿಗೂ ಮರೆಯಲು ಸಾಧ್ಯವಿಲ್ಲ. ಕ್ರಿಶ್ಚಿಯನ್ ಮತಾನುಯಾಯಿಯಾಗಿದ್ದ ರೆಡ್ಡಿಯವರು ಕ್ರಿಶ್ಚಿಯನ್ ಧರ್ಮದ ಪ್ರಚಾರ ಮತ್ತು ಆ ಧರ್ಮಕ್ಕೆ ಹಿಂದೂಗಳ ಮತಾಂತರ ಈ ಕಾರ್ಯಗಳಿಗೆ ಕುಮ್ಮಕ್ಕು ಕೊಡುತ್ತಿದ್ದುದು ಯಾರೂ ಅಲ್ಲಗಳೆಯಲಾಗದ ಸತ್ಯ. ಅನಿಲ್ ಕುಮಾರ್ ಎಂಬ ಬ್ರಾಹ್ಮಣ ಯುವಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ರೆಡ್ಡಿಯವರ ಮಗಳು ಶರ್ಮಿಳಾರನ್ನು ಮದುವೆಯಾದದ್ದು ಮತ್ತು ಪಾದ್ರಿಯಾಗಿ ಆತ ಧರ್ಮಪ್ರಚಾರ ಮಾಡುತ್ತಿದ್ದಾಗ ಮುಖ್ಯಮಂತ್ರಿ ರೆಡ್ಡಿಯವರ ಸರ್ಕಾರ ಆತನ ಬೆನ್ನಿಗಿದ್ದದ್ದು ಇವೂ ಜನರ ಅರಿವಿಗೆ ಬಂದಿರುವ ಸತ್ಯ. ತಿರುಪತಿಯ "ಮತಾಂತರ ಘೊಟಾಲೆ"ನಿಮಗೆ ಗೊತ್ತಿಲ್ಲದಿದ್ದರೆ ಅದು ನಮ್ಮ ತಪ್ಪಲ್ಲ.

ಇಷ್ಟಾಗಿಯೂ, ತಮ್ಮ ನಾಯಕ ಕ್ರಿಶ್ಚಿಯನ್ ಮತಾನುಯಾಯಿ ಎಂಬುದನ್ನು ರೆಡ್ಡಿ ಬಂಟರು ಮತ್ತು ಅಭಿಮಾನಿಗಳು ಕೆಲವರು ಒಪ್ಪುತ್ತಿರಲಿಲ್ಲ. "ಯೆಡುಗೂರಿ ಸ್ಯಾಮುಯೆಲ್ ರಾಜಶೇಖರ ರೆಡ್ಡಿ" ಎಂಬ ಪ್ರಚಲಿತ ನಾಮದ ಬದಲು "ಯೆಡುಗೂರಿ ಸಂದಿಂಟಿ ರಾಜಶೇಖರ ರೆಡ್ಡಿ" ಎಂಬ ಪೂರ್ವನಾಮವನ್ನೇ ಆ ಬಂಟರು ಮತ್ತು ಅಭಿಮಾನಿಗಳು ಸಮರ್ಥಿಸುತ್ತಿದ್ದರು. ರೆಡ್ಡಿಗಾರು ಕೂಡ ನಡೆ-ನುಡಿ-ಉಡುಗೆ-ತೊಡುಗೆಗಳಲ್ಲಿ ಅತಿ ಜಾಣ್ಮೆಯಿಂದ ವರ್ತಿಸುತ್ತಿದ್ದರು! "ರೆಡ್ಡಿ" ಎಂಬ ಉಪನಾಮವನ್ನು ಉಳಿಸಿಕೊಳ್ಳುವ ಮೂಲಕ ಹಿಂದೂಗಳ ಕೃಪೆಯಲ್ಲಿಯೂ ಚ್ಯುತಿಯಾಗದಂತೆ ನೋಡಿಕೊಂಡರು. ಈ ರೀತಿ ಅದೆಷ್ಟೋ ಮುಗ್ಧ ಹಿಂದೂಗಳಿಗೆ ಮಕ್ಮಲ್ ಟೋಪಿ ಇಟ್ಟರು!

ರಾಜಶೇಖರ ರೆಡ್ಡಿಯವರ ಧರ್ಮಾಚರಣೆಯ ನಿಜಸಂಗತಿಯೀಗ ಅವರ ಸಾವಿನಲ್ಲಿ ದೃಢೀಕೃತವಾಗಿದೆ. ಕ್ರಿಶ್ಚಿಯನ್ ಧರ್ಮದನುಸಾರ ಅವರ ಅಂತ್ಯಕ್ರಿಯೆ ನೆರವೇರಿದೆ. ಅವರ ತಂದೆ ರಾಜಾರೆಡ್ಡಿಯವರು ಬ್ರಿಟಿಷ್ ಆಡಳಿತದ ಕಾಲದಲ್ಲಿ ಬ್ರಿಟಿಷ್ ಸೈನ್ಯದಲ್ಲಿದ್ದವರಾಗಿದ್ದು ಆಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರೆಂಬುದು ನಿರಾಕರಿಸಲಾಗದ ಸತ್ಯವಾಗಿ ಹೊರಹೊಮ್ಮಿದೆ.

ಇಂಥ ರಾಜಶೇಖರ ರೆಡ್ಡಿಗಾರು ತಾನು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ "ತಿರುಪತಿ ತಿರುಮಲ ದೇವಸ್ಥಾನಮ್ಸ್" ("ಟಿಟಿಡಿ") ಬೋರ್ಡ್‌ನ ಅಧ್ಯಕ್ಷನನ್ನಾಗಿ ನೇಮಿಸಿದ್ದು ಯಾರನ್ನು ಗೊತ್ತೆ? ತನ್ನ ಮಲತಮ್ಮ ಕರುಣಾಕರ ರೆಡ್ಡಿಯನ್ನು! ಹಿಂದೂ ದೇವಾಲಯದ ಮಂಡಳಿಗೆ ಕ್ರಿಶ್ಚಿಯನ್ ಅಧ್ಯಕ್ಷ! ತಿರುಪತಿಯಲ್ಲಿ ಮತಾಂತರ ಕಾರ್ಯದ ಮುನ್ನಡೆಗೆ ಇನ್ನೇನು ಬೇಕು?

ಈ ಕರುಣಾಕರ ರೆಡ್ಡಿ ಓರ್ವ ಪಕ್ಕಾ ಕಾಂಗ್ರೆಸ್ ಪುಢಾರಿ! ಮೊದಲು ಈತ "ವೈ‌ಎಸ್‌ಆರ್ ಯುವಸೇನಾ"ದ ಅಧ್ಯಕ್ಷನಾಗಿದ್ದ! (ಟಿಟಿಡಿಯ ಅಧ್ಯಕ್ಷಸ್ಥಾನ ಅಲಂಕರಿಸಿದ್ದವನಾದ್ದರಿಂದ ಈತನನ್ನು ಇನ್ನು ಬಹುವಚನದಲ್ಲಿ ಸಂಬೋಧಿಸೋಣ!) ಟಿಟಿಡಿಯಂಥ ಬೃಹತ್ ಧಾರ್ಮಿಕ ಮಂಡಳಿಯ ಅಧ್ಯಕ್ಷರಾಗಿದ್ದುಕೊಂಡು ಕರುಣಾಕರ ರೆಡ್ಡಿಯವರು ತನ್ನೊಡೆಯ ರಾಜಶೇಖರ ರೆಡ್ಡಿಯನ್ನು ರಾಜಕೀಯವಾಗಿ ಸಮರ್ಥಿಸುವ ಮತ್ತು ಹಾಡಿ ಹೊಗಳುವ ಕೆಲಸವನ್ನು ಅವ್ಯಾಹತವಾಗಿ ಮಾಡಿಕೊಂಡು ನಡೆದರು! ರಾಜಶೇಖರ ರೆಡ್ಡಿಯನ್ನು ಸ್ತುತಿಸುವುದರಲ್ಲಿ ಕಾಲಂಶದಷ್ಟೂ ಈ ಕರುಣಾಕರ ರೆಡ್ಡಿ ತಿರುಪತಿ ತಿಮ್ಮಪ್ಪನನ್ನು ಸ್ತುತಿಸಲಿಲ್ಲ!

ವಿಶ್ವದಲ್ಲೇ ಅತಿ ಹೆಚ್ಚು ಆದಾಯವಿರುವ ಮತ್ತು ಅತಿ ಹೆಚ್ಚು ಭಕ್ತರು ಸಂದರ್ಶಿಸುವ ವೆಂಕಟೇಶ್ವರ ದೇವಾಲಯವೂ ಸೇರಿದಂತೆ ಹನ್ನೆರಡು ದೇವಾಲಯಗಳ ಮತ್ತು ಅವುಗಳ ಉಪ ದೇಗುಲಗಳ ಆಡಳಿತಾಧಿಕಾರ ಹೊಂದಿರುವ ಟಿಟಿಡಿ ಬೋರ್ಡ್‌ನ ಮುಖ್ಯಸ್ಥರಾಗಿದ್ದ ಕರುಣಾಕರ ರೆಡ್ಡಿಗಾರು ರಾಜಕಾರಣರಹಿತರೂ ಧರ್ಮಶ್ರದ್ಧಾಳುವೂ ಆಗಿರುವ ಬದಲು ಓರ್ವ ಕಾಂಗ್ರೆಸ್ ಪುಢಾರಿಯಾಗಿಯೇ ಮುಂದುವರಿದರಲ್ಲದೆ ಯಾವ ಅಳುಕೂ ಇಲ್ಲದೆ ರಾಜಶೇಖರ ರೆಡ್ಡಿಯವರ ಭಟ್ಟಂಗಿಯ ಕೆಲಸ ನಿರ್ವಹಿಸಿದರು! ದೇವರ ವಿಷಯದಲ್ಲಾಗಲೀ ಧರ್ಮದ ವಿಷಯದಲ್ಲಾಗಲೀ ಕರುಣಾಕರ ರೆಡ್ಡಿಯವರಿಂದ ಜನತೆಯು ನ್ಯಾಯಯುತ ನಡೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಅವರ ಚಟುವಟಿಕೆಗಳು ರಾಜಕಾರಣಮಯವಾಗಿದ್ದವು.

ಮತಾಂತರದ ಬಗ್ಗೆ ಎದ್ದಿದ್ದ ಜನಾಕ್ಷೇಪವನ್ನು ಹತ್ತಿಕ್ಕಿ, ಜನರನ್ನು ದಿಕ್ಕು ತಪ್ಪಿಸಿ (ಅಂಥ ಅನೇಕ ತೋರಿಕೆಯ ಕೆಲಸಗಳು ಟಿಟಿಡಿಯ ವತಿಯಿಂದ ಆಗ ನಡೆದವು), ಒಳಗಿಂದೊಳಗೇ ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟುಕೊಂಡಿರುವುದೇ ಉಭಯ ರೆಡ್ಡಿಗಳ ಉದ್ದೇಶವೆಂದು ಜನರಿಗೆ ಅನುಮಾನ ಬರುವಂತಾಯಿತು. ಇಷ್ಟಕ್ಕೂ, ಟಿಟಿಡಿಯ ಅಧ್ಯಕ್ಷ ಪದವಿಯನ್ನಲಂಕರಿಸಲು ಕ್ರಿಶ್ಚಿಯನ್ ವೈ‌ಎಸ್‌ಆರ್ ಮಲತಮ್ಮ ಹಾಗೂ "ವೈ‌ಎಸ್‌ಆರ್ (ಭಟ್ಟಂಗಿಗಳ) ಯುವಸೇನಾ"ದ ಅಧ್ಯಕ್ಷನ ಹೊರತು ಬೇರಾವ ಯೋಗ್ಯ ವ್ಯಕ್ತಿಯೂ ಇಡೀ ಆಂಧ್ರಪ್ರದೇಶದಲ್ಲಿ, ಇಡೀ ಭಾರತ ದೇಶದಲ್ಲಿ ಇರಲಿಲ್ಲವೆ?

ಪ್ರತ್ಯಕ್ಷ ಕಂಡದ್ದು

ಟಿಟಿಡಿಯ ಅಧ್ಯಕ್ಷರಾದಮೇಲೂ ಕರುಣಾಕರ ರೆಡ್ಡಿಗಾರು ವೈ‌ಎಸ್‌ಆರ್‌ನ ಬಂಟನ ಕಾರ್ಯವನ್ನು (ಇನ್ನೂ ಹೆಚ್ಚಿನ ಜೋಷ್‌ನಿಂದ)ಮುಂದುವರಿಸಿಕೊಂಡು ಹೋಗುತ್ತಿದ್ದ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ,ಓದಿದ್ದೆ ಮತ್ತು ಅವರಿವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೆ. ಆದರೆ ಸ್ವಯಂ ಪ್ರತ್ಯಕ್ಷ ಕಾಣದೆ ಈ ಬಗ್ಗೆ ಬಾಯ್ತೆರೆಯಬಾರದೆಂದು ನಿರ್ಧರಿಸಿ ಸುಮ್ಮನಿದ್ದೆ. ಪ್ರತ್ಯಕ್ಷ ಕಾಣುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂಥದೊಂದು ಅವಕಾಶ 2008ರ ಜೂನ್ 12ರಂದು ನನಗೆ ದೊರೆತೇಬಿಟ್ಟಿತು. ಆ ದಿನ ಆಂಧ್ರಪ್ರದೇಶದ ಕುಪ್ಪಂನಲ್ಲಿ (ಅದು ಚಂದ್ರಬಾಬು ನಾಯ್ಡು ವಿಧಾನಸಭೆಗೆ ಆಯ್ಕೆಗೊಂಡ ಕ್ಷೇತ್ರ) ರಾಜಕೀಯ ಸಮಾರಂಭವೊಂದಕ್ಕೆ ಟಿಟಿಡಿ ರೆಡ್ಡಿಗಾರು ಆಗಮಿಸುವರೆಂದು ನನಗೆ ಸುದ್ದಿ ಬಂದು ಮುಟ್ಟಿತಲ್ಲದೆ ಆ ಭಾವಿ ಸಮಾರಂಭದ ವಿವರಗಳೂ ದೊರೆತವು. ನಾನು ಕುಪ್ಪಂಗೆ ಧಾವಿಸಿದೆ.

ಕುಪ್ಪಂ ಅನ್ನು ಒಳಗೊಂಡಿರುವ ಚಿತ್ತೂರು ಜಿಲ್ಲೆಯ ಯುವ ಕಾಂಗ್ರೆಸ್‌ನ ಅಧ್ಯಕ್ಷನ "ಪಾದಯಾತ್ರೆ"ಯ ಮುಕ್ತಾಯ ಸಮಾರಂಭ ಅದು. ಊರಿಡೀ ಕಾಂಗ್ರೆಸ್ ಬ್ಯಾನರ್‌ಗಳು, ಬಂಟಿಂಗ್‌ಗಳು, ಧ್ವಜಗಳು ಮತ್ತು ಅಸಂಖ್ಯಾತ ಫ್ಲೆಕ್ಸ್‌ಗಳು. ಎಲ್ಲವೂ ಸೋನಿಯಾಮಯ, ರಾಹುಲ್‌ಮಯ. ಜೊತೆಗೆ, ಅಂದಿನ ಸಮಾರಂಭದ ಮುಖ್ಯ ಅತಿಥಿಯಾದ ಟಿಟಿಡಿ ಚೇರ್‌ಮನ್ನರ ಭಾವಚಿತ್ರ ಮತ್ತು ಹೆಸರು. ಪ್ರತಿಯೊಂದು ಫ್ಲೆಕ್ಸ್ ಮತ್ತು ಬ್ಯಾನರ್‌ನಲ್ಲೂ ಟಿಟಿಡಿ ಚೇರ್‌ಮನ್ ಕರುಣಾಕರ ರೆಡ್ಡಿಗೆ ಭರ್ಜರಿ ಸ್ವಾಗತ ಬರಹ. ಆಕರ್ಷಕ ಕರಪತ್ರಗಳಲ್ಲಿ ಕಾಂಗ್ರೆಸ್‌ನ "ಸಾಧನೆ"ಗಳ ಗುಣಗಾನ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ಸೇರಿದಂತೆ ಒಂದು ಹಿಂಡು ಕಾಂಗ್ರೆಸ್ ಪುಢಾರಿಗಳ ಮಧ್ಯೆ ರಾರಾಜಿಸುತ್ತಿದ್ದ ಟಿಟಿಡಿ ಅಧ್ಯಕ್ಷರನ್ನು ಸಮಾರಂಭದ ಸ್ಥಳಕ್ಕೆ ಊರ ಹೊರಗಿನಿಂದಲೇ ಮೆರವಣಿಗೆಯಲ್ಲಿ ಕರೆತರಲಾಯಿತು. ವಾದ್ಯ ಮತ್ತು ಪಟಾಕಿಗಳ ಸಂಭ್ರಮವೋ ಸಂಭ್ರಮ. ಮೆರವಣಿಗೆಯಿಂದಾಗಿ ರಸ್ತೆಗಳ ವಾಹನ ಸಂಚಾರದ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಊರೊಳಗೆ ಬಸ್ ನಿಲ್ದಾಣದೆದುರು ಜನನಿಬಿಡ ರಸ್ತೆಯನ್ನು ಸಂಪೂರ್ಣ ಆಕ್ರಮಿಸಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಮಾರಂಭ. ವೇದಿಕೆಯ ಮೇಲೂ ಕೆಳಗೂ ಕಾಂಗ್ರೆಸ್ ಪುಢಾರಿಗಳದೇ ಸಾಮ್ರಾಜ್ಯ.

ಸಭೆಯ ಮುಖ್ಯ ಕಾರ್ಯಕ್ರಮವೇ ಮುಖ್ಯ ಅತಿಥಿಯ ಭಾಷಣ. ಮುಖ್ಯ ಅತಿಥಿ ಟಿಟಿಡಿ ಅಧ್ಯಕ್ಷರು ಭಾಷಣ ಆರಂಭಿಸಿದರು. ರಾಜಶೇಖರ ರೆಡ್ಡಿಯನ್ನೂ ಕಾಂಗ್ರೆಸ್ಸನ್ನೂ ಹೊಗಳಲು ಶುರುವಿಟ್ಟುಕೊಂಡರು! ಇನ್ನಿಲ್ಲದಂತೆ ಹೊಗಳತೊಡಗಿದರು. ಜೊತೆಗೆ ಚಂದ್ರಬಾಬು ನಾಯ್ಡುವನ್ನು ತೆಗಳಲಾರಂಭಿಸಿದರು! ಇನ್ನಿಲ್ಲದಂತೆ ತೆಗಳತೊಡಗಿದರು. "ಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಿರಿ, ಚಂದ್ರಬಾಬು ನಾಯ್ಡುವನ್ನು ಸೋಲಿಸಿರಿ, ಸದಾಕಾಲವೂ ಕಾಂಗ್ರೆಸ್ಸನ್ನೇ ಅಧಿಕಾರಕ್ಕೆ ತರುತ್ತಿರಿ, ರಾಜಶೇಖರ ರೆಡ್ಡಿಯನ್ನೇ ನಾಯಕನೆಂದು ಸ್ವೀಕರಿಸುತ್ತಿರಿ", ಎಂದು ತಿರುಪತಿ ತಿರುಮಲ ದೇವಸ್ಥಾನ ಬೋರ್ಡ್‌ನ ಅಧ್ಯಕ್ಷ ಮಹಾಶಯರು ಪುನಃ ಪುನಃ ಹೇಳತೊಡಗಿದರು! ಇದಿಷ್ಟು ಬಿಟ್ಟು ಭಾಷಣದಲ್ಲಿ ಅವರು ಬೇರೇನನ್ನೂ ಹೇಳಲಿಲ್ಲ! ದೇವರ ಬಗ್ಗೆಯೂ ಹೇಳಲಿಲ್ಲ, ಧರ್ಮದ ಬಗ್ಗೆಯೂ ಹೇಳಲಿಲ್ಲ, ಶ್ರೀನಿವಾಸನ ಬಗ್ಗೆಯೂ ಇಲ್ಲ, ಪದ್ಮಾವತಿಯ ಬಗ್ಗೆಯೂ ಇಲ್ಲ!

ಒಂದು ಹಂತದಲ್ಲಿ ಕರುಣಾಕರ ರೆಡ್ಡಿಯ ಈ ನಡೆಯಿಂದ ಬೇಸತ್ತ ಸಭಾಸದನೋರ್ವ ಆಕ್ಷೇಪವೆತ್ತಿದ. ಅವನಿಗೆ "ಧರ್ಮದರ್ಶಿ" ರೆಡ್ಡಿಗಾರು ಕೆಂಗಣ್ಣು ಬಿಟ್ಟು ಗದರಿದರು! ಕೂಡಲೇ ಪೋಲೀಸರು ಅವನನ್ನು ಹೊರಕ್ಕೆ ಎಳೆದೊಯ್ದರು! ಭಾಷಣಾನಂತರ ಟಿಟಿಡಿ ಪ್ರಭುವಿನಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಲು ಹೊದೆಸಿ ಸನ್ಮಾನ! ಕೊನೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ. ಇದು ನಾನು ಪ್ರತ್ಯಕ್ಷ ಕಂಡ ಸಮಾರಂಭ.

ನಂತರದ ದಿನಗಳಲ್ಲಿ ಕರುಣಾಕರ ರೆಡ್ಡಿಯವರನ್ನು ಟಿಟಿಡಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಸಬೇಕಾಗಿ ಬಂತು. ಕೆಳಗಿಳಿಸಲಾಯಿತು. ಇದೀಗ ರಾಜಶೇಖರ ರೆಡ್ಡಿಯವರು ಈ ಲೋಕದಿಂದಲೇ ನಿರ್ಗಮಿಸಿದ್ದಾರೆ. ಆದರೆ ಇವರ ಸುತ್ತಲಿನ ಸತ್ಯಗಳು ಮಾತ್ರ ಪ್ರಜ್ಞಾವಂತರನ್ನು ಕಾಡುತ್ತಿರುತ್ತವೆ. ಊಳಿಗಮಾನ್ಯ ಪದ್ಧತಿಯ ಲಾಭ ಪಡೆದು, ಹಿಂಸೆ-ಬೆದರಿಕೆಗಳ ಅಸ್ತ್ರ ಬಳಸಿ ಮೇಲೆಬಂದು, ನಂತರ ರಾಜಶೇಖರ ರೆಡ್ಡಿಯವರು ಬಡವರ ಬಂಧು ಆದರಾದರೂ ಅದಕ್ಕಾಗಿ ಸರ್ಕಾರದ ಬೊಕ್ಕಸವನ್ನು ಬಹುತೇಕ ಖಾಲಿಮಾಡಿ ಹೋಗಿದ್ದಾರೆ! ಪುತ್ರನನ್ನು ರಾಜಕಾರಣಕ್ಕೆ ತಂದು, ಸಂಸದನನ್ನಾಗಿಸಿ, ಅನನುಭವಿಯಾದ ಆತನೀಗ ಮುಖ್ಯಮಂತ್ರಿಯ ಗಾದಿಮೇಲೆ ಕಣ್ಣುಹಾಕಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಮುಗ್ಧ ಬಡಜನರು ಪಾಪ, ತಮ್ಮ "ರಕ್ಷಕ" ಸತ್ತನೆಂದು ನೂರಾರರ ಸಂಖ್ಯೆಯಲ್ಲಿ ತಾವೂ ವೈ‌ಎಸ್‌ಆರ್ ಅವರನ್ನು ಹಿಂಬಾಲಿಸಿ ನಡೆದಿದ್ದಾರೆ!ರಾಜಶೇಖರ ರೆಡ್ಡಿಗಾರು ಬಳ್ಳಾರಿ ಗಣಿದಣಿಗಳ ಜೊತೆ "ಕೈ"ಜೋಡಿಸಿ, ಉಭಯರೂ ಒಟ್ಟಾಗಿ ಕರ್ನಾಟಕವನ್ನು ಕಿತ್ತುತಿಂದ ಧೂರ್ತಕಾರ್ಯವಂತೂ ಸಹಿಸಲಸಾಧ್ಯ. ಸತ್ಯವು ಮರೆಮಾಚಲ್ಪಟ್ಟು ಮತ್ತೇನೋ ವಿಜೃಂಭಿಸತೊಡಗಿದಾಗ ಅದನ್ನು ಗಮನಿಸುವ ಮನಸ್ಸಿಗೆ ಬೇಸರವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X