ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಆಟೋಗೆ ಹಸುರು ಬಣ್ಣ ಬಳಿಯಿರಿ

By Staff
|
Google Oneindia Kannada News

Bengaluru welcomes environment friendly auto rickshaw
ಬೆಂಗಳೂರು, ಸೆ. 8 : ರಾಜ್ಯ ಸರಕಾರದ ಕೆಲವು ಬಸ್ಸುಗಳು ಫಲಕದಲ್ಲಿ ಪರಿಸರ ಪ್ರೇಮಿ ಆಗಿದ್ದಾಯಿತು. ಈಗ ಬಸ್ಸು ಸಿಗದಿದ್ದವರು ಅನಿವಾರ್ಯವಾಗಿ ಹತ್ತಲೇಬೇಕಾದ ಆಟೋ ರಿಕ್ಷಾಗಳು ಪರಿಸರದ ಮಹತ್ವವನ್ನು ಸಾರುವ ಹಸುರು ರಥಗಳಾಗಿ ಬೆಂಗಳೂರು ರಸ್ತೆಗಳಲ್ಲಿ ಶೋಭಾಯಮಾನವಾಗುವ ದಿನಗಳು ಬಂದಿವೆ. ಸಾರಿಗೆ ಇಲಾಖೆಯ ಹೊಸ ಚಿಂತನೆ ಪ್ರಕಾರ ಪರಿಸರ ಸ್ನೇಹಿ ಆಟೋಗಳಿಗೆ ವಿಶೇಷ ಮಾನ್ಯತೆ ಪತ್ರ ನೀಡಲಾಗುತ್ತದೆ. ಅವು ಹಸುರು ಹಳದಿ ಬಣ್ಣ ಬಳಿದುಕೊಂಡಿರುತ್ತವೆ. ನೋಡಿದ ಕೂಡಲೇ ಓಹೋ ಇದು ಪರಿಸರ ಪ್ರೇಮಿ ವಾಹನ ಎಂದು ಭಾವಿಸಿ ನೀವು ಸಂತೋಷದಿಂದ ಓಡಿಹೋಗಿ ಹತ್ತಿ ಕುಳಿತು ಪ್ರಯಾಣ ಬೆಳೆಸಬಹುದು.

ಈ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಜಾರಿಗೆ ಬರುತ್ತಿರುವುದರಿಂದ ಈಗಲೇ ಏನನ್ನೂ ಹೇಳುವಂತಿಲ್ಲ. ಯಾಕೆಂದರೆ, ಆಟೋ ಕವಚಕ್ಕೆ ಹೊಸ ಬಣ್ಣ ಬಳಿಯಬೇಕಾದರೆ ಕನಿಷ್ಠ 7 ಸಾವಿರ ರೂಪಾಯಿ ಬೇಕು. ಖಾಸಗಿ ಆಟೋಗೆ ಸರಕಾರದ ಹಣ ವೆಚ್ಚವಾಗುವ ಹಾಗಿಲ್ಲ. ಆಟೋ ಉತ್ಪಾದಿಸುವ ಕಂಪನಿಗಳು ಹಳೆಯ ವಾಹನಕ್ಕೆ ಬಣ್ಣ ಹಚ್ಚುವ ಉಸಾಬರಿ ವಹಿಸಿಕೊಳ್ಳುವುದಿಲ್ಲ. ಆಟೋ ಮಾಲಿಕನಿಗೆ ಪರಿಸರ ಪ್ರೇಮ ಉಂಟು, ಆದರೆ ವಾಹನ ನವೀಕರಿಸುವುದಕ್ಕೆ ಅಗತ್ಯವಾಗುವ 7 ಸಾವಿರ ರೂ ಕಕ್ಕಲು ಹಣ ಇಲ್ಲ, ಇದ್ದರೂ ಸಿದ್ಧನಿಲ್ಲ.

ಪರಿಸರ ಪ್ರೇಮಿ ಆಟೋ ಆಗಬೇಕಾದರೆ ಮುಖ್ಯ ಅರ್ಹತೆ ಫೋರ್ ಸ್ಟ್ರೋಕ್ ಇಂಜಿನ್ ಆಗಿರತಕ್ಕದ್ದು. ಬೆಂಗಳೂರಿನಲ್ಲಿ ಅಲೆಯುವ 80 ಸಾವಿರಕ್ಕೂ ಹೆಚ್ಚು ಆಟೋಗಳಲ್ಲಿ ಶೇ 25 ರಷ್ಟು ವಾಹನಗಳು ಮಾತ್ರ ಫೋರ್ ಸ್ಟ್ರೋಕ್ ಇಂಜಿನ್ ಹೊಂದಿವೆ. ಕೇವಲ ಬಣ್ಣಕ್ಕೆ ಮಾರುಹೋಗುವ ತವಕವಲ್ಲವಿದು. ಪರಿಸರ ಪ್ರೇಮಿ ಆಟೋ ಎಂದರೆ, ಚಾಲಕ ಸಭ್ಯನಾಗಬೇಕು, ಗಾಂಧಿ ಮೀಟರ್ ಕಿತ್ತುಹಾಕಿ ಡಿಜಿಟಲ್ ಮೀಟರ್ ಹಾಕಬೇಕು, ಸೀಮೆ ಎಣ್ಣೆ ಹಾಕಿ ಗಾಡಿ ಓಡಿಸಬಾರದು, ಗ್ಯಾಸ್ ಕಿಟ್ ಲಗತ್ತಾಗಿರಬೇಕು. ಎಷ್ಟೋ ಮಾಲಿಕರು ಮತ್ತು ಚಾಲಕರಿಗೆ ಈ ಕಟ್ಟಳೆಗಳು ಇಷ್ಟವಿಲ್ಲ. ಅಂಥವರು ಈಗಾಗಲೇ ಪರಿಸರ ಪ್ರೇಮಿ ಆಟೋ ಕಲ್ಪನೆಯನ್ನು ವಿರೋಧಿಸಲು ಸಿದ್ಧರಾಗಿದ್ದಾರೆ.

ಈ ಯೋಜನೆ ಜಾರಿಗೆ ಬರಲಿ ಎನ್ನುತ್ತಾರೆ ಹಳೆಗುಡ್ಡದಹಳ್ಳಿ ನಿವಾಸಿ ಕೃಷ್ಣಪ್ಪ. ಆಟೋ ಉಪಟಳದಿಂದ ಬೇಸತ್ತ ಇವರಿಗೆ ಸರಕಾರ ಕಡಿವಾಣ ಹಾಕಬೇಕು ಎಂಬ ನಿರೀಕ್ಷೆ ಇತ್ತಂತೆ. ಅಂತೂ ನಂಬಲರ್ಹ ಆಟೋ ಇದ್ದರೆ ಒಳ್ಳೆಯದು. ಇನ್ನುಮುಂದೆ ಹಸುರು ಬಣ್ಣದ ಆಟೋ ರಸ್ತೆಯಲ್ಲಿ ಸಿಕ್ಕರೆ ಅದನ್ನೇ ಹತ್ತುವುದಾಗಿ ಹೇಳುತ್ತಾರೆ. ಈ ಆಟೋಗಳು ಉತ್ಪಾದಿಸುವ ಒಟ್ಟು ವಿಷಗಾಳಿ ನೆನೆಸಿಕೊಂಡರೆ ಭಯವಾಗುತ್ತದೆ. ವಾತಾವರಣ ಕಲುಷಿತ ರಹಿತವಾಗುವುದಾದರೆ ಸಾಕು, ಆಟೋ ಬಣ್ಣ ನನಗೆ ಮುಖ್ಯವಲ್ಲ ಎಂದವರು ವಾಣಿವಿಲಾಸ ರಸ್ತೆಯಲ್ಲಿ ಆಟೋ ಹತ್ತಲು ಸಿದ್ಧವಾಗಿ ನಿಂತಿದ್ದ ಕಾಲೇಜು ವಿದ್ಯಾರ್ಥಿ ಪ್ರತಿಮಾ ಶೆಟ್ಟಿ.

ಬೆಂಗಳೂರಿನ ಆಟೋಗಳು ಹಳೆಯ ಮೀಟರ್ ತೆಗೆದು ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳಬೇಕೆಂಬ ನಿಯಮವನ್ನು ಸಾರಿಗೆ ಇಲಾಖೆ ಪ್ರಕಟಿಸಿದೆ. ಆದರೆ, ಎಷ್ಟೋ ವಾಹನ ಮಾಲಿಕರಿಗೆ ಈ ಸಂಗತಿ ಕಿವಿಗೆ ಬಿದ್ದಂತಿಲ್ಲ. ಸರಕಾರ, ಇಲಾಖೆಗಳು ನಿಯಮಗಳನ್ನು ಪ್ರಕಟಿಸುವುದು ದೊಡ್ಡ ವಿಚಾರವಲ್ಲ. ನಿಯಮಗಳು ಜಾರಿಗೆ ಬಂದಿವೆಯೇ, ಜಾರಿಗೆ ತರದವರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಾನಸಿಕವಾಗಿ, ಸಾಮಾಜಿಕವಾಗಿ ಬದ್ಧತೆ ಅಧಿಕಾರಿಗಳಿಗೆ ಇದೆಯೇ ಎನ್ನುವುದೇ ಪ್ರಶ್ನೆ. ಈ ಪ್ರಶ್ನೆಗಳು ಯಾಕೆ ಉದ್ಭವಿಸುತ್ತದೆ ಎಂದರೆ ಎಲ್ಲ ಫಲಕಗಳಲ್ಲೂ ಕನ್ನಡ ಕಡ್ಡಾಯ ಎಂಬ ನಿಯಮ ಇದೆ. ಎಷ್ಟರ ಮಟ್ಟಿಗೆ ಇದು ಜಾರಿ ಆಗಿದೆ ಎಂದು ನೀವೇ ಪರೀಕ್ಷಿಸ ಬೇಕು. ಇವತ್ತು ಸಂಜೆ ಕಪ್ಪು ಬಿಳುಪಿನ ಆಟೋ ಹತ್ತುವಾಗ ಕಣ್ಣು ಇಬ್ಬದಿಯ ಸಾಲುಗಳಲ್ಲಿ ನೇತಾಡುವ ಬೋರ್ಡುಗಳ ಮೇಲೆ ಕಣ್ಣು ಹಾಯಿಸಿ.

ನಿಸ್ಸಂದೇಹವಾಗಿ ಪರಿಸರ ಪ್ರೇಮಿ ಆಟೋಗೆ ಸ್ವಾಗತ. ಅದರ ಎಲ್ಲ ಪ್ರಯೋಜನಗಳು ಬೆಂಗಳೂರಿಗರಿಗೆ ದಕ್ಕಲಿ. ಬೆಳಗ್ಗೆ ಬೆಳಗ್ಗೆ ಗಂಡನ ಮೇಲೆ ಮುನಿಸಿಕೊಂಡ ಹೆಂಡತಿ ಕಣ್ಣೀರು ಹಾಕುತ್ತಾ ರಸ್ತೆಗಿಳಿದರೆ ಮತ್ತಷ್ಟು ಕಣ್ಣೀರು ಹಾಕಿಸಲು ಸಿದ್ಧವಾಗಿರುವ ಆಟೋ ರಾಜ್ಯ ಕೊನೆಗೊಳ್ಳಲಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X