ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಣು ಪರೀಕ್ಷೆ : ಕಲಾಂ ವಿರುದ್ಧ ಸೆತ್ನಾ ಕಿಡಿ
ನವದೆಹಲಿ, ಸೆ. 2 : ರಾಷ್ಟ್ರಪತಿ ಆದ ತಕ್ಷಣ ತಮಗೆಲ್ಲಾ ತಿಳಿದಿದೆ ಎಂಬಂತೆ ಕಲಾಂ ತಮ್ಮನ್ನು ತಾವು ಬಿಂಬಿಸಿಕೊಂಡರು. ತಮ್ಮ ಪ್ರತಿಷ್ಠೆಗಾಗಿ ಅವರು ಪರಮಾಣು ವಿಜ್ಞಾನವನ್ನು ಅವಲಂಬಿಸಿದ್ದರು. ಪರಮಾಣು ಪರೀಕ್ಷೆ ಯಶಸ್ವಿಯಾಗಿತ್ತು ಎಂದು ಹೇಳಿಕೊಳ್ಳುವ ಅರ್ಹತೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂಗೆ ಇಲ್ಲ ಎಂದು ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಹೋಮಿ ನುಸ್ಸೆರ್ ವಾನ್ ಜೀ ಸೆತ್ನಾ ಕಿಡಿಕಾರಿದ್ದಾರೆ.
ಅಣು ಇಂಧನವನ್ನು ಭೂಮಿಯಿಂದ ಹೊರತೆಗೆಯುವ ಬಗ್ಗೆ ಮತ್ತು ಅಣ್ವಸ್ತ್ರಗಳನ್ನು ತಯಾರಿಸುವ ಬಗ್ಗೆ ಕಲಾಂ ಅವರಿಗೆ ಏನೂ ತಿಳಿದಿಲ್ಲ. ತೀರಾ ಗಡಿಬಿಡಿಯಲ್ಲಿ 1998ರಲ್ಲಿ ಪೋಖ್ರಾನ್ ಅಣು ಪರೀಕ್ಷೆ ನಡೆಸಲಾಯಿತು ಎಂದು ಸೆತ್ನಾ ಟೀಕಿಸಿದ್ದಾರೆ. ಸ್ಫೋಟಕಗಳನ್ನು ರೂಪಿಸುವ ಪ್ರಕ್ರಿಯೆ ಕಲಾಂ ಅವರಿಗೇನು ತಿಳಿದಿದೆ ? ರಾಷ್ಟ್ರಪತಿಯಾಗಿದ್ದರು ಎಂಬ ಕಾರಣಕ್ಕೆ ಅವರಿಗೆ ಬೆಲೆ ಸಿಕ್ಕಿದೆಯಷ್ಟೆ ತಮ್ಮ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಅವರು ಅಣು ಶಕ್ತಿಯ ಬಗ್ಗೆ ಮಾತನಾಡತೊಡಗಿದ್ದಾರೆ ಎಂದು ಸೆತ್ನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1974ರ ಮೇ ನಲ್ಲಿ ನಡೆದ ಭಾರತದ ಮೊದಲ ಅಣ್ವಸ್ತ್ರ ಪ್ರಯೋಗ ಸ್ಫೋಟದ ಯಶಸ್ಸಿನ ರೂವಾರಿಯಲ್ಲೊಬ್ಬರಾಗಿರುವ ಸೆತ್ನಾ, ರಾಜಕಾರಣಿಗಳು ವೈಜ್ಞಾನಿಕ ವಿಷಯಗಳಲ್ಲಿ ಮೂಗು ತೋರಿಸಬಾರದು ಎಂದಿದ್ದಾರೆ.
(ಏಜನ್ಸೀಸ್)