ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾಕರ್ ತಲೆದಂಡ : ವರಿಷ್ಠರ ನಿರ್ಧಾರಕ್ಕೆ ಬದ್ಧ

By Staff
|
Google Oneindia Kannada News

ಬೆಂಗಳೂರು, ಆ. 26 : ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಮುಜರಾಯಿ ಸಚಿವ ವಿ ಸೋಮಣ್ಣ ಅವರನ್ನು ಸಂಪುಟದಲ್ಲಿ ಮುಂದುವರೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಬ್ಯಾಂಕಿಗೆ ಕೋಟಿಗಟ್ಟಲೆ ವಂಚಿಸಿರುವ ಆರೋಪಕ್ಕೆ ಒಳಗಾಗಿರುವ ಕಳಂಕಿತ ಸಚಿವ ಡಿ ಸುಧಾಕರ್ ಅವರ ತಲೆದಂಡ ಬಹುತೇಕ ಖಚಿತವಾಗಿದೆ. ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸೋಮಣ್ಣ ಅವರನ್ನು ಸಂಪುಟದಲ್ಲಿ ಉಳಿಸಿಕೊಂಡರೆ ಪಕ್ಷಕ್ಕೆ ಲಾಭ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಮೂರು ತಿಂಗಳಲ್ಲಿ ವಿಧಾನ ಪರಿಷತ್ ಗೆ ಸೋಮಣ್ಣ ಅವರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಅದಕ್ಕಾಗಿ ಬಿಜೆಪಿ ನಾಯಕರು ತಂತ್ರವೊಂದನ್ನು ರೂಪಿಸಿದ್ದಾರೆ. ಹಾಸನದ ವಿಧಾನ ಪರಿಷತ್ ಸದಸ್ಯ ಎಂ ಗುರುದೇವ್ ಅವರ ರಾಜೀನಾಮೆ ಪಡೆದು ಸೋಮಣ್ಣಗೆ ಅವಕಾಶ ಕಲ್ಪಿಸುವ ಮಾಸ್ಟರ್ ಪ್ಲಾನ್ ಹೆಣೆಯಲಾಗಿದೆ.

ಗುರುದೇವ್ ಅವರು ಈಗಾಗಲೇ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದು, ಈ ಕಾರಣವನ್ನು ಮುಂದಿಟ್ಟುಕೊಂಡು ಅವರ ಸದಸ್ಯತ್ವ ರದ್ದುಗೊಳಿಸಿ ಸೋಮಣ್ಣ ಅವರನ್ನು ಆಯ್ಕೆ ಮಾಡಿಕೊಳ್ಳಲು ಪರ್ಯಾಯ ಮಾರ್ಗ ಹುಡುಕಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸೋಮಣ್ಣ ಹಿಡಿತವಿಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸಂಪುಟದಿಂದ ಕೈಬಿಟ್ಟರೆ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕೆಲವರು ಅಭಿಪ್ರಾಯ ಮಂಡಿಸಿದ್ದಾರೆ. ಒಂದು ವೇಳೆ ಸೋಮಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟರೆ ಅವರನ್ನು ಹಿಂಬಾಲಿಸಿ ಬಂದಿರುವ ಪಾಲಿಕೆಯ ಮಾಜಿ ಸದಸ್ಯರು, ಮಾಜಿ ಉಪಮೇಯರ್ ಗಳು ಅಸಮಾಧಾನಗೊಳ್ಳಲಿದ್ದು, ಅವರ ಹಿತ ಕಾಪಾಡಲು ಸೋಮಣ್ಣ ಸಂಪುಟದಲ್ಲಿ ಉಳಿಯಲೇಬೇಕಿದೆ ಎನ್ನುವ ಅಭಿಪ್ರಾಯವೂ ಬಿಜೆಪಿ ಪಾಳೆಯದಲ್ಲಿ ಕೇಳಿ ಬಂದಿದೆ.

ಸದಾನಂದಗೌಡ ಸೂಚನೆ

ಕಾನೂನಿನ ಅನ್ವಯ ಅಪರಾಧಿಯೆಂದು ಪರಿಗಣಿಸಿದ ಮೇಲೆ ಸಚಿವ ಸ್ಥಾನದಲ್ಲಿ ಸುಧಾಕರ್ ಮುಂದುವರೆಯಲು ಸಾಧ್ಯವಿಲ್ಲ. ಅವರು ನಿರ್ದೋಷಿ ಎಂದು ತೀರ್ಮಾನ ಆಗುವವರೆಗೂ ಅಧಿಕಾರದಿಂದ ದೂರವಿರುವುದು ಅನಿವಾರ್ಯ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ಸಚಿವ ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ನಗರದಲ್ಲಿಂದು ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಲ್ ಕೃಷ್ಣ ಅಡ್ವಾಣಿ ಪ್ರಕರಣವೊಂದರಲ್ಲಿ ನಿರ್ದೋಷಿ ಎಂದು ಸಾಬೀತಾಗುವವರೆಗೂ ಯಾವುದೇ ಅಧಿಕಾರದಲ್ಲಿ ಮುಂದುವರೆಯಲಿಲ್ಲ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ಮುಂದುವರೆಯುವುದಾಗಿ ಗೌಡ ಹೇಳಿದರು.

ಒಮ್ಮತದ ಅಭಿಪ್ರಾಯಕ್ಕೆ ಬದ್ದ : ಸಿಎಂ

ಸಂಪುಟದ ಸದಸ್ಯರನ್ನು ಉಳಿಸಿಕೊಳ್ಳಲು ಅಥವಾ ಬಿಡಲು ತಾವು ಸ್ವತಂತ್ರರಾಗಿದ್ದರೂ ಸಾಮೂಹಿಕ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸುಧಾಕರ್ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಹಾಗೂ ರಾಜ್ಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಸಚಿವ ಸಂಪುಟಕ್ಕೆ ತಾವು ಮುಖ್ಯಸ್ಥರಾಗಿದ್ದರೂ ವರಿಷ್ಠರ ನಿರ್ಧಾರವೂ ಮುಖ್ಯ ಸಾಮೂಹಿಕವಾಗಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಮಣಿಯಬೇಕಾಗುತ್ತದೆ ಎಂದು ಹೇಳುವ ಮೂಲಕ ಸಚಿವ ಸುಧಾಕರ್ ಅವರನ್ನು ಮನೆಗೆ ಕಳುಹಿಸಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದಂತಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X