• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಚುನಾವಣೆ : ಅಖಾಡದಲ್ಲಿರುವ ಕೋಟ್ಯಾಧೀಶರು

By Staff
|
ಬೆಂಗಳೂರು, ಜು. 2 : ಗೋವಿಂದರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಎಂ.ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣ 770 ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯ. ಆಯ್ಕೆಯಾದರೆ, ಶಾಸನಸಭೆಯ ಕೋಟ್ಯಧಿಪತಿ ಶಾಸಕರಲ್ಲಿ ಮೊದಲಿಗರಾಗಲಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಸೋಮಣ್ಣ ಅವರಿಗಿಂತ ಅವರ ಪತ್ನಿ ಆಸ್ತಿ ಮೌಲ್ಯವೇ ಹೆಚ್ಚು. ಕೊಳ್ಳೇಗಾಲದಲ್ಲಿ ಬಿಎಸ್ಪಿ ಅಭ್ಯರ್ಥಿ ಸುಭಾಷ್ ಭರಣಿ ಎಲ್ಲರಿಗಿಂತ ಸ್ಥಿತಿವಂತರು. ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ, ತಂದೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಗಿಂತಲೂ ಶ್ರೀಮಂತ. ಶಿಕ್ಷಣದಲ್ಲಿ ತಂದೆಗಿಂತಲೂ ಬಡವ.

ಗೋವಿಂದರಾಜನಗರ ಪ್ರಿಯ ಕೃಷ್ಣ (ಕಾಂಗ್ರೆಸ್)

ಶಾಸಕ ಎಂ.ಕೃಷ್ಣಪ್ಪ ಪುತ್ರ ಪ್ರಿಯಕೃಷ್ಣ 770 ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯ. 25 ವರ್ಷದ ಪ್ರಿಯಕೃಷ್ಣ ಇತ್ತೀಚಿನ ದಿನಗಳಲ್ಲಿ ಚುನಾವಣೆ ಕಣಕ್ಕಿಳಿದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. ಆಯ್ಕೆಯಾದರೆ ಶಾಸನ ಸಭೆಯ ಕೋಟ್ಯಧಿಪತಿ ಶಾಸಕರಲ್ಲಿ ಮೊದಲಿಗರಾಗಲಿದ್ದಾರೆ. ಅವರ ಬಳಿ 2,60,537 ಕೋಟಿ ರೂ. ನಗದು, ಸುಮಾರು 20 ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಯ ಮೊತ್ತ 50 ಕೋಟಿ ರೂ.ಇದೆ.

ಆರ್‌ಪಿಸಿ ಲೇಔಟ್, ಕೆಂಗೇರಿ, ಮಾಗಡಿ ಕಾರ್ಡ್ ರಸ್ತೆ, ಹಾರೋಹಳ್ಳಿ, ನಾಗದೇವನಹಳ್ಳಿ ಸೇರಿದಂತೆ 9 ಕಡೆ ನಿವೇಶನ ಹೊಂದಿದ್ದಾರೆ. ಇವುಗಳ ಮೌಲ್ಯ ಬರೋಬರಿ 27 ಕೋಟಿ ರೂ. 17 ಕೋಟಿ ರೂ.ಮೊತ್ತವನ್ನು ನಾನಾ ಕಂಪನಿಗಳ ಷೇರಿನಲ್ಲಿ ತೊಡಗಿಸಿದ್ದಾರೆ. 88 ಕೋಟಿ ರೂ.ಗಳನ್ನು

ನಾನಾ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ನಾನಾ ಬ್ಯಾಂಕ್, ಸಂಸ್ಥೆಗಳಲ್ಲಿ ಮಾಡಿರುವ ಸಾಲ ಹಾಗೂ ಪಡೆದಿರುವ ಮುಂಗಡ ಪ್ರಮಾಣ 734 ಕೋಟಿ ರೂ. ಪ್ರಿಯಕೃಷ್ಣ ಅವರ ಬಳಿ 74 ಲಕ್ಷ ರೂ. ಮೌಲ್ಯದ ಆಡಿ ಕಾರು ಸೇರಿದಂತೆ ಐದು ಕಾರುಗಳಿವೆ. ಇವುಗಳ ಮೌಲ್ಯ 2 ಕೋಟಿ ರೂ.ದಾಟಲಿದೆ. 21.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಅವಿವಾಹಿತರಾಗಿರುವ ಪ್ರಿಯಕೃಷ್ಣ, ದೂರಶಿಕ್ಷಣ ಮೂಲಕ ರಾಜ್ಯಶಾಸ್ತ್ರದಲ್ಲಿ ಎಂ.ಎ.ಪದವಿ, ಬೆಂಗಳೂರು ವಿವಿಯಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.

ವಿ. ಸೋಮಣ್ಣ (ಬಿಜೆಪಿ)

ಸೋಮಣ್ಣ ಹಾಗೂ ಕುಟುಂಬದ ಸದಸ್ಯರು 18 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಸೋಮಣ್ಣ ಅವರಿಗಿಂತ ಪತ್ನಿ ಶೈಲಜಾ ಸೋಮಣ್ಣ ಅವರೇ ಹೆಚ್ಚಿನ ಆಸ್ತಿ ಇದೆ. ಶೈಲಜಾ ಅವರ ಬಳಿ 15.46 ಕೋಟಿ ರೂ. ಆಸ್ತಿ ಇದ್ದರೆ, ಸೋಮಣ್ಣ ಅವರ ಬಳಿ 2.38 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಸೋಮಣ್ಣ ಪುತ್ರಿ ದಿವ್ಯ ಹೆಸರಿನಲ್ಲಿ 39.38 ಲಕ್ಷ ರೂ. ಮೌಲ್ಯದ ಆಸ್ತಿಯಿದೆ. ಒಟ್ಟಾರೆ ಸೋಮಣ್ಣ ಕುಟುಂಬದ ಆಸ್ತಿ ಮೌಲ್ಯ 17.69 ಕೋಟಿ ರೂ. ಪತ್ನಿ ಶೈಲಜಾ ಅವರ ಬಳಿ 10.83 ಕೋಟಿ ರೂ. ಮೌಲ್ಯದ ಕೃಷಿ ಹಾಗೂ ಕೃಷಿಯೇತರ ಭೂಮಿ ಇದೆ. ಸೋಮಣ್ಣ ಹೆಸರಿನಲ್ಲಿ ಯಾವುದೇ ಜಮೀನು ಇಲ್ಲ. ಶೈಲಜಾ ಅವರು 5.43 ಕೋಟಿ ರೂ. ಕಟ್ಟಡದ ಒಡತಿಯಾಗಿದ್ದರೆ, ಸೋಮಣ್ಣ ಬಳಿ 8.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಪತ್ನಿ ಬಳಿ 2.12 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಸೋಮಣ್ಣ ಬಳಿ 3.5 ಲಕ್ಷ ರೂ. ಮೌಲ್ಯದ ಕ್ವಾಲೀಸ್ ಕಾರು ಇದ್ದರೆ, ಪತ್ನಿ ಬಳಿ ಮಾರುತಿ ಸ್ವಿಫ್ಟ್ ಹಾಗೂ ಹೋಂಡಾ ಸಿಆರ್‌ವಿ ಕಾರು ಇದೆ. ಸೋಮಣ್ಣ 83 ಲಕ್ಷ ರೂ. ಸಾಲ ಮಾಡಿದ್ದರೆ, ಪತ್ನಿ 2.05 ಕೋಟಿ ರೂ. ಸಾಲ ಮಾಡಿದ್ದಾರೆ. ಬಾಡಿಗೆ ರೂಪದಲ್ಲಿ ಸೋಮಣ್ಣ ಅವರಿಗೆ 23 ಲಕ್ಷ ರೂ. ಹಾಗೂ ಪತ್ನಿ ಹೆಸರಿಗೆ 22 ಲಕ್ಷ ರೂ. ಆದಾಯ ಬರುತ್ತಿದೆ.

ಚನ್ನಪಟ್ಟಣ ಸಿ.ಪಿ. ಯೋಗೀಶ್ವರ್ (ಬಿಜೆಪಿ)

8 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. 51.68 ಲಕ್ಷ ರೂ. ಮೌಲ್ಯದ ಕೃಷಿ ಜಮೀನು, 1.05 ಕೋಟಿ ರೂ. ಬೆಲೆಬಾಳುವ ಕೃಷಿಯೇ ತರ ಭೂಮಿ,4.18 ಕೋಟಿ ರೂ. ವಾಣಿಜ್ಯ ಹಾಗೂ ನಿವಾಸ ಕಟ್ಟಡ, ಮನೆ ಇದೆ. ಅಪಾರ್ಟ್‌ಮೆಂಟ್‌ಗಳ ಮೌಲ್ಯ 1.30 ಕೋಟಿ ರೂ. ಇತರ ಆಸ್ತಿ 37.75 ಲಕ್ಷ ರೂ. ಅವರಿಗೆ ಸ್ವಂತ ಕಾರಾಗಲಿ, ವಾಹನವಾಗಲಿ ಇಲ್ಲ. ಯಾವುದೇ ಬ್ಯಾಂಕ್‌ಗಳಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಸಾಲ ಇಲ್ಲ. ಸ್ವತಃ 25 ಲಕ್ಷ ರೂ. ಜೀವ ವಿಮೆ, ನಾನಾ ಬ್ಯಾಂಕ್‌ಗಳಲ್ಲಿ ಹೊಂದಿರುವ ಠೇವಣಿ 39.580 ರೂ. ಬೆಂಗಳೂರು ಮೆಗಾಸಿಟಿ ಡೆವಲಪರ್‍ಸ್ ನಲ್ಲಿರುವ ಷೇರು 35 ಲಕ್ಷ ರೂ. ಫ್ಯಾಷನ್ ಫೋರಂ ನಲ್ಲಿ ಹೂಡಿರುವ ಬಂಡಾವಾಳ 75 ಸಾವಿರ ರೂ. ವಾಣಿಜ್ಯ ಹಾಗೂ ನಿವಾಸ ಕಟ್ಟಡಗಳು ಬೆಂಗಳೂರಿನ ಹನುಮಂತನಗರದಲ್ಲಿದ್ದು, ಬನಶಂಕರಿಯಲ್ಲಿ 64 ಲಕ್ಷ ರೂ. ಮೌಲ್ಯದ ಮನೆ, ಕುವೆಂಪು ನಗರದ 5ನೇ ಅಡ್ಡರಸ್ತೆಯಲ್ಲಿ 50 ಲಕ್ಷ ರೂ. ಬೆಲೆಯ ಮನೆ, 6ನೇ ಅಡ್ಡರಸ್ತೆಯಲ್ಲಿ 15.22 ಲಕ್ಷ ರೂ. ಮನೆ ಇದೆ. ಇದಲ್ಲದೆ ಇತರ 37.75 ಲಕ್ಷ. ರೂ. ಆಸ್ತಿ, 250 ಗ್ರಾಂ ಚಿನ್ನ ಹೊಂದಿದ್ದಾರೆ.

ಎಂ.ಸಿ. ಅಶ್ವತ್ಥ್ (ಜೆಡಿಎಸ್)

1.56 ಕೋಟಿ ರೂ. ಬೆಲೆಬಾಳುವ ಆಸ್ತಿ ಹೊಂದಿದ್ದಾರೆ. 3 ಲಕ್ಷ ರೂ. ನಗದು, 40 ಲಕ್ಷ ರೂ. ಮೌಲ್ಯದ ಕೃಷಿ ಜಮೀನು, 50 ಲಕ್ಷ ರೂ. ಮೌಲ್ಯದ ಕಟ್ಟಡ, 56 ಲಕ್ಷ ರೂ. ಮೌಲ್ಯದ ಮನೆ-ಅಪಾರ್ಟ್‌ಮೆಂಟ್, 6.62 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 50 ಸಾವಿರ ಮೌಲ್ಯದ ಬೆಳ್ಳಿ ಹೊಂದಿರುವುದಾಗಿ ಅವರು ಘೋಷಿಸಿದ್ದಾರೆ. ಆದರೆ ಇವರ ಹೆಸರಿನಲ್ಲಿ ರುವ ಇನೋವಾ, ಪೇಜೋರೋ ಮಾಡೆಲ್ ಕಾರುಗಳ ಮೌಲ್ಯವನ್ನು ಘೋಷಿಸಿಲ್ಲ. ಮಳವಳ್ಳಿ ತಾಲೂಕಿನ ಬಾಣಸಮುದ್ರ, ಕಗ್ಗಲಿಪುರ ಗ್ರಾಮದಲ್ಲಿರುವ 33.12 ಎಕರೆ ಜಮೀನಿನ ಮಾರುಕಟ್ಟೆ ಮೌಲ್ಯ 40 ಲಕ್ಷ ರೂ., ಬೆಂಗಳೂರಿನ ವಿಜಯನಗರ ಎಂ.ಸಿ. ಲೇಔಟ್‌ನಲ್ಲಿ 50 ಲಕ್ಷ ರೂ. ಮೌಲ್ಯದ ಮನೆ, ಮೂಡಲಪಾಳ್ಯದಲ್ಲಿ 30 ಲಕ್ಷ ರೂ. ಮೌಲ್ಯದ ಉದಯ್ ದರ್ಶನ್ ಬಾರ್, ಅಕ್ಕೂರಿನಲ್ಲಿ 8 ಲಕ್ಷ ಬೆಲೆಯ ದರ್ಶನ್ ವೈನ್ಸ್, ರಾಮನಗರದಲ್ಲಿ 8 ಲಕ್ಷ ಮೌಲ್ಯದ ಯೋಗಿತಾ ವೈನ್ಸ್, ಮಾಗಡಿಯಲ್ಲಿ 10 ಲಕ್ಷ ರೂ. ಮೌಲ್ಯದ ಹರ್ಷಿತಾ ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಒಟ್ಟು 56 ಲಕ್ಷ ರೂ. ಮೌಲ್ಯದ ಮನೆಗಳು, ಅಪಾರ್ಟ್‌ಮೆಂಟ್‌ಗಳು ತಮ್ಮ ಮತ್ತು ಪತ್ನಿ ಗಾಯತ್ರಿ ಹೆಸರಿನಲ್ಲಿದೆ.

ಟಿ.ಕೆ. ಯೋಗೀಶ್ (ಕಾಂಗ್ರೆಸ್)

ಮಾಜಿ ಶಾಸಕ ಟಿ.ವಿ. ಕೃಷ್ಣಪ್ಪ ಅವರ ಪುತ್ರ ಟಿ.ಕೆ. ಯೋಗೀಶ್ ಹೆಸರಿನಲ್ಲಿ 26.12 ಲಕ್ಷ ರೂ. ಮೌಲ್ಯದ ಆಸ್ತಿ ಇದೆ. ಪತ್ನಿ ಶೈಲಜಾ ಭಾಮಿನಿ ಅವರ ಹೆಸರಿನಲ್ಲಿ 30.52 ಲಕ್ಷ ರೂ. ಮೌಲ್ಯದ ಆಸ್ತಿ, ಹಾಗೂ ತಂದೆ ಟಿ.ವಿ. ಕೃಷ್ಣಪ್ಪ ಅವರ ಹೆಸರಿನಲ್ಲಿ 10 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ತಮ್ಮ ಬಳಿ 50 ಸಾವಿರ ರೂ. ನಗದು ಇದ್ದು, ಚನ್ನಪಟ್ಟಣ ಎಸ್‌ಬಿಎಂ ಶಾಖೆಯಲ್ಲಿ 2.92 ಲಕ್ಷ ರೂ. ಠೇವಣಿ, 70 ಸಾವಿರ ರೂ. ಮೌಲ್ಯದ 50 ಗ್ರಾಂ. ಚಿನ್ನಾಭರಣ, ಮಳೂರು ಗ್ರಾಮದ ವ್ಯಾಪ್ತಿಯಲ್ಲಿ 18 ಲಕ್ಷ ರೂ. ಮೌಲ್ಯದ 11.18 ಎಕರೆ ಕೃಷಿ ಭೂಮಿ, ತಿಟ್ಟಮಾರನಹಳ್ಳಿಯಲ್ಲಿ 6 ಲಕ್ಷ ರೂ. ಮೌಲ್ಯದ ಕೃಷಿಯೇತರ ಜಮೀನು ಇದೆ.

ರಾಮನಗರ: ಸಿ.ಎಂ.ಲಿಂಗಪ್ಪ (ಕಾಂಗ್ರೆಸ್)

8.7 ಕೋಟಿ ರೂ. ಆಸ್ತಿ ಹೊಂದಿದ್ದು, 76 ಲಕ್ಷ ರೂ. ಸಾಲವಿದೆ. ತಾಲೂಕಿನ ಬಿಡದಿ ಹೋಬಳಿ ಇಟ್ಟ ಮಡುವಿನಲ್ಲಿ 1.25 ಎಕರೆ ಕೃಷಿ ಭೂಮಿ, ಕೈಗಾರಿಕಾ ಭೂಮಿ 4 ಎಕರೆ. ಇದರ ಮೌಲ್ಯ 8.5 ಕೋಟಿ. 25 ಕೆಜಿ ಚಿನ್ನಾಭರಣ ಮತ್ತು ಬೆಳ್ಳಿ 25 ಕೆ.ಜಿ. ಇದರ ಮೌಲ್ಯ 31,80 ಲಕ್ಷ ರೂ. ನಾನಾ ಬ್ಯಾಂಕ್‌ಗಳಲ್ಲಿ ತೊಡಗಿಸಿರುವ ಷೇರುಗಳ ಮೌಲ್ಯ 27,500ರೂ. 5 ಕಾರು ಮತ್ತು ಜೆಸಿಬಿ ಮತ್ತು 1ಬೈಕ್ ಮೌಲ್ಯ 38,20 ಲಕ್ಷ ಸೇರಿ ಒಟ್ಟು 8,70,77,980 ರೂ. ಹೊಂದಿದ್ದಾರೆ.

ಎಂ.ನಾರಾಯಣಗೌಡ (ಬಿಜೆಪಿ)

ನೂರಾರು ಎಕರೆ ಕೃಷಿ ಭೂಮಿ ಹೊಂದಿರುವ ಇವರು ಸ್ವಂತ ಕಾರು ಹೊಂದಿಲ್ಲ. ಕನಕಪುರ ತಾಲೂಕಿನ ಚಕ್ಕನಹಳ್ಳಿ ಹಾಗೂ ವೀರಪ್ಪಸಂದ್ರ ಸೇರಿದಂತೆ ನಾನಾ ಕಡೆ 1.6 ಕೋಟಿ ರೂ. ಬೆಲೆ ಬಾಳುವ ಸುಮಾರು 42 ಎಕರೆಗೂ ಹೆಚ್ಚು ಜಮೀನು ಹೊಂದಿದ್ದಾರೆ. ಚಿನ್ನಾಭರಣ, ಮನೆ, ನಾನಾ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಸೇರಿ 6.99 ಕೋಟಿ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಪತ್ನಿ ಆರ್. ಲಕ್ಷ್ಮಿ ಹೆಸರಿನಲ್ಲಿ 1,73 ಕೋಟಿ ರೂ. ಮತ್ತು ಪುತ್ರ ಎನ್.ಅಭಿಜಿತ್ ಅವರ ಹೆಸರಿನಲ್ಲಿ 1.14 ಕೋಟಿ ರೂ.ಆಸ್ತಿ ಹೊಂದಿದ್ದಾರೆ. ಕೆನರಾ ಬ್ಯಾಂಕಿನಲ್ಲಿ 2.76 ಕೋಟಿ ರೂ. ಸಾಲ ಮತ್ತು ಪತ್ನಿ ಹೆಸರಿನಲ್ಲಿ 20,38 ಲಕ್ಷ ಹಾಗೂ ಅಭಿಜಿತ್ ಹೆಸರಿನಲ್ಲಿ 15.9 ಲಕ್ಷ ರೂ. ಸಾಲ ಇದೆ.

ಕೆ.ರಾಜು (ಜೆಡಿಎಸ್)

3 ಕೋಟಿ ರೂ.ಆಸ್ತಿ ಹೊಂದಿದ್ದಾರೆ. ರಾಮನಗರ ತಾಲೂಕಿನ ನಾನಾ ಕಡೆ 41 ಎಕರೆ ಜಮೀನು ಹೊಂದಿದ್ದಾರೆ. ವಿವೇಕಾನಂದ ನಗರದಲ್ಲಿನ ಮನೆ, ನಿವೇಶನ ಸೇರಿ 3.20 ಕೋಟಿ ರೂ. ಮೌಲ್ಯ ಎಂದು ಹೇಳಿಕೊಂಡಿದ್ದಾರೆ. 450 ಗ್ರಾಂ ಚಿನ್ನ ಮತ್ತು ಬೆಳ್ಳಿ 500 ಗ್ರಾಂ ಹೊಂದಿದ್ದು, ಇದರ ಮೌಲ್ಯ ನಮೂದಿಸಿಲ್ಲ. ಎರಡು ಕಾರುಗಳನ್ನು ಹೊಂದಿದ್ದಾರೆ. ಪತ್ನಿ ಮಂಜುಳಾ ಹೆಸರಿನಲ್ಲಿ 17.5 ಲಕ್ಷ ರೂ.ಮೌಲ್ಯದ 2.5 ಎಕರೆ ಕೃಷಿ ಭೂಮಿ ಹೊಂದಿದ್ದು, ವಿಜಯ ಬ್ಯಾಂಕಿನಲ್ಲಿ ಮನೆ ಮತ್ತು ಕಾರಿನ ಸಾಲವಾಗಿ 12 ಲಕ್ಷ ರೂ. ಪಡೆದಿದ್ದಾರೆ.

ಕೊಳ್ಳೆಗಾಲ: ಸುಭಾಷ್ ಭರಣಿ (ಬಿಎಸ್ಪಿ)

ಬೆಂಗಳೂರು ನಿವಾಸಿಯಾದ 58 ವರ್ಷದ ಭರಣಿಯವರ ಕುಟುಂಬದ ಒಟ್ಟು ಆಸ್ತಿ 1.18 ಕೋಟಿ ರೂ. ಈ ಪೈಕಿ ಭರಣಿಯವರ ಬೆಂಗಳೂರಿನ ಮನೆಯೇ 91 ಲಕ್ಷ ರೂ. ಮೌಲ್ಯದ್ದು. 2.45 ಲಕ್ಷ ರೂ. ನಗದನ್ನು ಭರಣಿ ಹೊಂದಿದ್ದಾರೆ. ಉಳಿದಂತೆ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ 1.55 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 12.42 ಲಕ್ಷ ರೂ. ಸಾಲ ಪಡೆದಿದ್ದಾರೆ. 2.35 ಲಕ್ಷ ರೂ. ಮೌಲ್ಯದ ಚಿನ್ನಾಭರಣವೂ ಇದೆ. ಪತ್ನಿ ಮೋಹನ ಭರಣಿ ಹೆಸರಿನಲ್ಲಿ 30 ಸಾವಿರ ರೂ.ನ ಬಾಂಡ್ ಇದೆ. ಸೋಸಲೆ ಗ್ರಾಮದಲ್ಲಿ 5 ಲಕ್ಷ ಬೆಲೆಯ ಜಮೀನು, ಪತ್ನಿಯ ಹೆಸರಲ್ಲಿ ಅಂಬಾಸಿಡರ್ ಕಾರು ಇದೆ. ಇದಲ್ಲದೆ ಪುತ್ರ ಸಮರ್ಥ ಭರಣಿ ಹೆಸರಲ್ಲಿ 1.70 ಲಕ್ಷ ರೂ.ಅನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ.

ಎಸ್. ಜಯಣ್ಣ (ಕಾಂಗ್ರೆಸ್)

ಅವಿವಾಹಿತರಾಗಿರುವ 57 ವರ್ಷ ವಯಸ್ಸಿನ ಎಸ್. ಜಯಣ್ಣ ಲಕ್ಷಾಧೀಶರು. ಆದರೆ ಅಷ್ಟೇ ಸಾಲವಂತರು. ಇವರ ಒಟ್ಟು ಆಸ್ತಿ ಮೌಲ್ಯ 61.90 ಲಕ್ಷ ರೂ. ಆದರೆ ಇವರು 20.30 ಲಕ್ಷ ರೂ. ಸಾಲಗಾರ. ಯಾವುದೇ ಸ್ವಂತ ವಾಹನವನ್ನೂ ಇವರು ಹೊಂದಿಲ್ಲ. ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ 25 ಲಕ್ಷ ರೂ.ಮೌಲ್ಯದ ಸುವರ್ಣಾವತಿ ರೇಷ್ಮೆ ಹುರಿ ಮಿಲ್, ಮಾಂಬಳ್ಳಿ ಗ್ರಾಮದಲ್ಲಿ 1 ಲಕ್ಷ ರೂ.ಬೆಲೆ ಬಾಳುವ ಮನೆ ಇದೆ.

ಎಸ್. ಬಾಲರಾಜು (ಜಾ.ದಳ)

ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ನಿವಾಸಿ ಬಾಲರಾಜು ಹಾಗೂ ಅವರ ಅವಲಂಬಿತರ ಒಟ್ಟು ಆಸ್ತಿ 53.48 ಲಕ್ಷ ರೂ., ಇವರು 4 ಲಕ್ಷ ರೂ. ಸಾಲಗಾರ. ಭಾರತೀಯ ಸಹಕಾರ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ 13 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಪತ್ನಿ ವಿಮಲಾ ಅವರ ಹೆಸರಿನಲ್ಲಿ 608 ರೂ. ಠೇವಣಿ, 20 ಸಾವಿರ ರೂ. ಪಾಲಿಸಿ, 7.45 ಲಕ್ಷ ರೂ. ಬೆಲೆಯ ಕಾರು, 3.90 ಲಕ್ಷ ಮೌಲ್ಯದ ಚಿನ್ನಾಭರಣವಿದೆ.

ಜಿ.ಎನ್. ನಂಜುಂಡಸ್ವಾಮಿ (ಬಿಜೆಪಿ)

ಸದ್ಯ ಕೊಳ್ಳೇಗಾಲ ಪಟ್ಟಣದ ನಿವಾಸಿಯಾದ ನಂಜುಂಡಸ್ವಾಮಿ ಅವರ ಕುಟುಂಬದ ಒಟ್ಟು ಆಸ್ತಿ ಸುಮಾರು 1 ಕೋಟಿ. ಈ ಪೈಕಿ 21 ಲಕ್ಷ ರೂ. ಮೌಲ್ಯದ ನಳಂದಾ ಗ್ಯಾಸ್ ಏಜೆನ್ಸಿ ಇದೆ. ಇಷ್ಟಿದ್ದರೂ ಇವರು 20.19 ಲಕ್ಷ ರೂ. ಸಾಲಗಾರ. ಕುಣಗಳ್ಳಿ ಗ್ರಾಮದಲ್ಲಿ 2.41 ಲಕ್ಷ ರೂ.ಮೌಲ್ಯದ 10 ಎಕರೆ ಖುಷ್ಕಿ ಭೂಮಿ, ಕೊಳ್ಳೇಗಾಲ ಪಟ್ಟಣದಲ್ಲಿ 5.50 ಲಕ್ಷರೂ. ಮೌಲ್ಯದ ಮನೆ, ಬೆಂಗಳೂರು ಚಂದ್ರ ಲೇಹೌಟ್ ನಲ್ಲಿ 14.32 ಲಕ್ಷದ ಮನೆ, ಬಿಸಿಸಿ ಲೇಹೌಟ್‌ನಲ್ಲಿ 17 ಲಕ್ಷ ರೂ.ಮೌಲ್ಯದ ಮನೆಯನ್ನು ಹೊಂದಿದ್ದಾರೆ.

ಚಿತ್ತಾಪುರ: ಪ್ರಿಯಾಂಕ ಖರ್ಗೆ (ಕಾಂಗ್ರೆಸ್)

ಪ್ರಿಯಾಂಕ 5.40 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 12.27 ಲಕ್ಷ ರೂ. ಸಾಲದ ಹೊರೆಯೂ ಇದೆ. ಅದರಲ್ಲಿ ಅವರ ಪತ್ನಿ ಶೃತಿ ಮತ್ತು ಪುತ್ರ ಅಮಿತ ಹೆಸರನಲ್ಲಿರುವ 20 ಲಕ್ಷ ಮೌಲ್ಯದ ವಿಮೆ ಸೇರಿದೆ. ಪ್ರಿಯಾಂಕ ಬಳಿ 50 ಸಾವಿರ ರೂ. ಪತ್ನಿ ಬಳಿ 1ಲಕ್ಷ ರೂ. ನಗದು ಕೈಯಲ್ಲಿದೆ. ದಂಪತಿ1550 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಪ್ರಿಯಾಂಕ 1,56,93,911 ರೂ. ಚರಾಸ್ಥಿ ಹಾಗೂ 3,51,48,430 ರೂ. ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ. ಪತ್ನಿ ಬಳಿ 900 ಗ್ರಾಂ ಚಿನ್ನ ಸೇರಿದಂತೆ 19,33,345 ರೂ. ಹೂಡಿಕೆ, ಠೇವಣಿ, ವಿಮೆ ಹೊಂದಿದ್ದಾರೆ. ಪ್ರಿಯಾಂಕ ಖರ್ಗೆ ಕುಟುಂಬಕ್ಕೆ ಓಡಾಡಲು ಸ್ವಂತ ವಾಹನ ವಿಲ್ಲ. ಬೆಂಗಳೂರಿನ ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆಯಲ್ಲಿ 1995ರಲ್ಲಿ ಎಸ್‌ಎಸ್ ಎಲ್‌ಸಿ ಪಾಸಾಗಿರುವ ಪ್ರಿಯಾಂಕ ನಂತರ ಕಂಪ್ಯೂಟರ್ ಆರ್ಟ್ ಮತ್ತು ಆನ್ಯಿಮೇಷ ನ್‌ನಲ್ಲಿ ವೃತ್ತಿಪರ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದ್ದಾರೆ. ಆಸ್ತಿಯಲ್ಲಿ ತಂದೆ ಕೇಂದ್ರ ಸಚಿವ ಖರ್ಗೆಗಿಂತಲೂ ಶ್ರೀಮಂತನಾಗಿದ್ದಾರೆ, ಶಿಕ್ಷಣದಲ್ಲಿ ತಂದೆಗಿಂತಲೂ ಬಡತನದಲ್ಲಿದ್ದಾರೆ ಪ್ರಿಯಾಂಕ.

(ಸ್ನೇಹಸೇತು : ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more