ಶಿವಮೊಗ್ಗ ಲಕ್ಷ್ಮಿ ಚಿತ್ರಮಂದಿರದಲ್ಲಿ ಲವ್ ಗುರು ಧ್ಯಾನ
ಶಿವಮೊಗ್ಗ, ಜು. 24 : ಹೊಸ ಟ್ರೆಂಡ್‌ನ ಅಭಿರುಚಿಗೆ ತಕ್ಕಂತೆ ಭಾವನೆಗಳಿಗೆ ಒತ್ತು ಕೊಟ್ಟು ಲವ್ ಗುರು ಚಿತ್ರವನ್ನು ನಿರ್ದೇಶಿಸಿದ್ದು, ಎಲ್ಲಾ ವರ್ಗದ ಜನರಿಗೆ ಇಷ್ಟವಾಗುವಂತೆ ನಿರ್ಮಿಸಲಾಗಿದೆ ಎಂದು ನಿರ್ದೇಶಕ ಪ್ರಶಾಂತ್‌ರಾಜ್ ತಿಳಿಸಿದರು.
ನಗರದ ಲಕ್ಷ್ಮೀ ಚಿತ್ರಮಂದಿರದಲ್ಲಿ ಲವ್ ಗುರು ಚಿತ್ರ ತಂಡದ ಜೊತೆಗೆ ಪ್ರೇಕ್ಷಕರೊಡನೆ ಚಿತ್ರ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ತಮ್ಮದೇ ಆದ ಕಲ್ಪನೆ ಹಾಗೂ ಭಾವನೆಗಳಿದ್ದು, ಅವುಗಳನ್ನು ವ್ಯಕ್ತಪಡಿಸುವ ರೀತಿ ಮಾತ್ರ ವಿಭಿನ್ನವಾಗಿರುತ್ತದೆ. ಇಂದಿನ ಯುವ ಜನತೆ ಪ್ರತಿಯೊಂದರಲ್ಲೂ ದಿಢೀರ್ ಫಲಿತಾಂಶ ಬಯಸುತ್ತಿದ್ದು, ಅದಕ್ಕನುಗುಣವಾಗಿ ಹೊಸ ಪ್ರಯೋಗವಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ ಎಂದರು.
ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಚಿತ್ರ ಬಿಡುಗಡೆಗೊಂಡ ಕೆಲವು ನಗರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರದ್ಧೆಯಿಂದ ನಿರ್ಮಿಸಿದ ಚಿತ್ರ ಇದಾಗಿದ್ದು, ಇದರ ಯಶಸ್ಸಿನ ನಂತರ ಮುಂದಿನ ಚಿತ್ರವನ್ನು ನಿರ್ದೇಶಿಸುವ ಗುರಿಯನ್ನಿಟ್ಟುಕೊಂಡಿದ್ದೇನೆ. ಕನ್ನಡ ಜನತೆ ಸ್ವಮೇಕ್ ಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡಬೇಕು. ಲವ್ ಗುರು ಕೂಡ ಸ್ವಮೇಕ್ ಆಗಿದ್ದು, ನನ್ನ ನಿರ್ದೇಶನದ ಪ್ರಥಮ ಚಿತ್ರವಾಗಿದೆ. ಕನ್ನಡ ಚಿತ್ರರಂಗ ಬೆಳೆಯಲು ಸ್ವಮೇಕ್ ಚಿತ್ರಗಳ ಅಗತ್ಯವಿದ್ದು, ತಾನು ಕೂಡ ಈ ದಿಕ್ಕಿನಲ್ಲಿಯೇ ಮುಂದುವರೆಯಲು ಬಯಸುತ್ತೇನೆಂದು ಹೇಳಿದರು.
ಚಿತ್ರದ ನಾಯಕ ತರುಣ್ ಮಾತನಾಡಿ, ತಾನು ನಟಿಸಿದ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಲವ್ ಗುರು ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದೇನೆ. ಇದಕ್ಕೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕಲಾವಿದನಾಗಿರುವ ನನಗೆ ಇನ್ನೂ ಉತ್ತಮವಾಗಿ ನಟಿಸಬೇಕೆಂಬ ಹಂಬಲವಿದೆ. ಮುಂದಿನ ದಿನಗಳಲ್ಲಿ ಅದನ್ನು ಸಕಾರಗೊಳಿಸಲು ಪ್ರಯತ್ನಿಸುತ್ತೇನೆ. ಕನ್ನಡ ಜನತೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಚಿತ್ರದ ನಾಯಕಿ ರಾಧಿಕಾ ಪಂಡಿತ್ ಮಾತನಾಡಿ, ಚಿತ್ರರಂಗಕ್ಕೆ ಬಂದಾಗಿನಿಂದ ಒಂದಿಲ್ಲೊಂದು ವಿಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ. ಮೊಗ್ಗಿನ ಮನಸು ಚಿತ್ರದ ನಂತರ ಬಿಡುಗಡೆಗೊಂಡ ಒಲವೇ ಜೀವನ ಲೆಕ್ಕಾಚಾರ ಚಿತ್ರದಲ್ಲೂ ಕೂಡ ಚಾಲೆಂಜಿಂಗ್ ಪಾತ್ರದಲ್ಲಿ ಅಭಿನಯಿಸಿದ್ದು, ಎಲ್ಲರಿಗೂ ಇಷ್ಟವಾಗಿತ್ತು. ಅಂತೆಯೇ, ಲವ್ ಗುರು ಚಿತ್ರದಲ್ಲೂ ಕೂಡ ತುಂಬಾ ಲವಲವಿಕೆಯ ಪಾತ್ರವಾಗಿದ್ದು, ಚೆನ್ನಾಗಿಯೇ ಅಭಿನಯಿಸಿದ್ದೇನೆ ಎಂಬ ಭರವಸೆ ಇದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಲವ್ ಗುರು ಚಿತ್ರ ತಂಡದ ಹಲವರು ಉಪಸ್ಥಿತರಿದ್ದರು.
ಚಿತ್ರ: ಕೆ.ಆರ್. ಸೋಮನಾಥ್












Click it and Unblock the Notifications