ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನೀರಾವರಿ ಯೋಜನೆಗಳಿಗೆ 662 ಕೋಟಿ

By Staff
|
Google Oneindia Kannada News

ಬೆಂಗಳೂರು, ಜು. 14 : ಕೃಷ್ಣರಾಜ ಸಾಗರವು 2008ರಲ್ಲಿ 75 ವರ್ಷಗಳನ್ನು ಪೂರ್ಣಗೊಳಿಸಿದ್ದು, ಆ ಸಂದರ್ಭದ ನೆನಪಿನಲ್ಲಿ ಆಡಂಬರದ ಆಚರಣೆಗೆ ಬದಲಾಗಿ ಜಲಾಶಯದ 16 ಗೇಟ್‌ಗಳನ್ನು ಬದಲಾವಣೆ ಮಾಡಿ ನವೀಕರಿಸಿ ಈ ಸಂದರ್ಭವನ್ನು ಸ್ಮರಣೀಯವಾಗಿ ಮಾಡಲಾಗುತ್ತದೆ. ಕಾಮಗಾರಿಗಳು ಪೂರ್ಣಗೊಂಡ ವಜ್ರ ಮಹೋತ್ಸವ ಆಚರಣೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅಧಿವೇಶನದಲ್ಲಿ ತಿಳಿಸಿದರು.

ಅವರು ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು. ಚಿಕ್ಕದೇವರಾಯ ಸಾಗರ ನಾಲೆ, ದೇವರಾಯ ನಾಲೆ ಮತ್ತು ವಿರಿಜಾ ನಾಲೆ ಇವುಗಳು 200 ರಿಂದ 300 ವರ್ಷಗಳಷ್ಟು ಹಳೆಯ ನಾಲೆಗಳಾಗಿದ್ದು, ಅವುಗಳ ವಿವರವಾದ ಸರ್ವೆ ಮಾಡಿಸಿ, ತಾಂತ್ರಿಕ ಅಭಿಪ್ರಾಯಗಳನ್ನು ಪಡೆದು ಆಧುನೀಕರಣಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹಲವು ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದು ಸಹ ತಿಳಿಸಿದರು.

ಕಾವೇರಿ ನೀರಾವರಿ ನಿಗಮದ ಕಾಮಗಾರಿಗಳಿಗಾಗಿ 2009-10 ನೇ ಸಾಲಿಗಾಗಿ ರೂ 662 ಕೋಟಿ ಅನುದಾನವನ್ನು ಬಿಡುಗಡೆಮಾಡಲಾಗಿದೆ. 2342 ನೂತನ ಕಾಮಗಾರಿಗಳನ್ನು ಈ ಸಾಲಿನಲ್ಲಿ ಕೈಗೊಳ್ಳಲಾಗುತ್ತಿದ್ದು, ಇವುಗಳಿಗಾಗಿ 98.80 ಕೋಟಿ ರೂ ಗಳನ್ನು ನಿಗದಿಪಡಿಸಿಲಾಗಿದೆ. ಈ ಕಾಮಗಾರಿಗಳಲ್ಲಿ ನೀರಾವರಿ ಸಾಮ್ಯರ್ಥವನ್ನು ಕಲ್ಪಿಸುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ಹಾಗೂ ನಿರ್ವಹಣಾ ಕಾಮಗಾರಿಗಳು ಸೇರಿವೆ ಎಂದು ತಿಳಿಸಿದರು.

ಹೇಮಾವತಿ ಜಲಾಶಯ ಯೋಜನೆಯಡಿ ಮುಳುಗಡೆಯಾದ ಗ್ರಾಮಗಳನ್ನು ಸ್ಥಳಾಂತರಿಸಿದ್ದು, ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಮುಂತಾದ ಸೌಲಭ್ಯಗಳನ್ನು ಸ್ಥಳಾಂತರಗೊಂಡ ಗ್ರಾಮಗಳಿಗೆ ಕಲ್ಪಿಸಿಕೊಡಲಾಗುವುದು ಎಂದರು. ಹೊಳೆನರಸೀಪುರ ತಾಲ್ಲೂಕು, ತಟ್ಟೆಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕು ಬಂಡಿಹಳ್ಳಿ ಗ್ರಾಮಗಳ ಗ್ರಾಮಸ್ಥರಿಗೆ ಐ-ತೀರ್ಪು ಆಗಿದ್ದು, ಪರಿಹಾರ ಹಣವನ್ನು ಮುಂದಿನ 15 ದಿನಗಳಲ್ಲಿ ರೈತರಿಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X