• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಗಂಗಾ ಯೋಜನೆಗೆ ಕರವೇ ವಿರೋಧ

By Staff
|
ಶಿವಮೊಗ್ಗ,ಜು.8: ಕನ್ನಡ ಗಂಗಾ ಯೋಜನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಇಂದು ನಗರಸಭೆ ಸದಸ್ಯರ ಸಭೆಗೆ ನುಗ್ಗಿ ಪ್ರತಿಭಟಿಸಿದ ಘಟನೆ ನಡೆಯಿತು.

ಕನ್ನಡ ಗಂಗಾ ಯೋಜನೆಯಡಿ ವಾರದ 24 ಗಂಟೆಗಳು ನೀರು ಸರಬರಾಜು ಮಾಡುವ ನೆಪದಲ್ಲಿ ನಗರಸಭೆ ನಲ್ಲಿಗಳಿಗೆ ಮೀಟರ್ ಅಳವಡಿಸಿ, ಅವೈಜ್ಞಾನಿಕವಾಗಿ ಶುಲ್ಕಗಳನ್ನು ನಿಗಧಿಪಡಿಸಲು ಹೊರಟಿದೆ. ಈಗಾಗಲೇ ಮಾಸಿಕ ೬೦ರೂ.ಗಳನ್ನು ತೆರಿಗೆಯಾಗಿ ಕಟ್ಟಲು ಜನತೆ ಕಷ್ಟಪಡುತ್ತಿದೆ. ಈಗ ಕನ್ನಡ ಗಂಗಾ ಯೋಜನೆಯಡಿ ಮಾಸಿಕ 250ರಿಂದ 270 ರು.ಗಳ ಶುಲ್ಕವನ್ನು ಪಾವತಿಸಬೇಕಾಗುವುದರಿಂದ ಸಾಕಷ್ಟು ತೊಂದರೆಗೊಳಗಾಗುವ ಸಂಭವವಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಶಿವಮೊಗ್ಗ ನಗರದಲ್ಲಿ ಶೇ.50 ಕ್ಕೂ ಹೆಚ್ಚು ಜನರು ಬಿಪಿಎಲ್ ಕಾರ್ಡುದಾರರಾಗಿದ್ದು, ಕೇಂದ್ರ ಸರ್ಕಾರ ಕೇವಲ 3 ರು.ಗೆ ಅಕ್ಕಿ ನೀಡುತ್ತಿರುವಾಗ, ನಗರಸಭೆ ಏಕಾಏಕಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಹೊರಟಿರುವುದು ಖಂಡನಾರ್ಹ. ನಗರ ಸಮೀಪವೇ ಗಾಜನೂರು ಅಣೆಕಟ್ಟು ಇರುವುದರಿಂದ ವರ್ಷವಿಡೀ ನೀರಿಗೆ ಅಭಾವವೇನೂ ಇಲ್ಲ. ಮೇಲಾಗಿ ಶಿವಮೊಗ್ಗ ನಗರ ಮಲೆನಾಡು ಪ್ರದೇಶವಾಗಿದ್ದು, ನೆರೆ ರಾಜ್ಯ ತಮಿಳುನಾಡಿನಲ್ಲಿರುವಂತೆ ನೀರಿನ ಸಮಸ್ಯೆ ಏನು ಇಲ್ಲ. ಇದೆಲ್ಲವನ್ನು ದೃಷ್ಟಿಯಲ್ಲಿಟುಕೊಂಡು ಕನ್ನಡ ಗಂಗಾ ಯೋಜನೆಯನ್ನು ಜಾರಿಗೆ ಬರದಂತೆ ಮಡುವ ಮೂಲಕ ಸಾರ್ವಜನಿಕರ ಹಿತವನ್ನು ಕಾಪಾಡಬೇಕು. ಇಲ್ಲವಾದಲ್ಲಿ ರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ನಗರಸಭೆ ಅಧ್ಯಕ್ಷರಿಗೆ ಸಲ್ಲಿಸಿದ ಮನವಿಯಲ್ಲಿ ಕರವೇ ಎಚ್ಚರಿಸಿದೆ.

ಮನವಿ ಸ್ವೀಕರಿಸಿ ನಗರಸಭೆ ಅಧ್ಯಕ್ಷರು ಮಾತನಾಡಿ, ಕನ್ನಡಗಂಗಾ ಯೋಜನೆ ಫಲಾನುಭವಿಗಳಾದ ಬಿಪಿಎಲ್ ಕಾರ್ಡುದಾರರಿಗೆ ಬೇರೆ ಮಾನದಂಡದಡಿ ಶುಲ್ಕ ನಿಗದಿಪಡಿಸಲಾಗುವುದು. ಜೊತೆಗೆ ರಿಯಾಯಿತಿಯನ್ನು ನೀಡುವ ಉದ್ದೇಶವಿದೆ ಎಂದು ಆಶ್ವಾಸನೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಸ್. ಮಧು, ಮೋಹನ್ ಬಾಬು, ಚಂದ್ರು, ರಾಘವೇಂದ್ರ, ಉಮಾಕಾಂತ್, ಕೆ. ರಾಘವೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

**********

ದೊಡ್ಡಪೇಟೆ ಪೊಲೀಸರಿಂದ ಇಬ್ಬರ ಮೇಲೆ ರೌಡಿ ಶೀಟ್

ಶಿವಮೊಗ್ಗ,:ಇಲ್ಲಿನ ದೊಡ್ಡಪೇಟೆ ಠಾಣೆಯ ಪೊಲೀಸರು ನಗರದ ಇಬ್ಬರ ಮೇಲೆ ರೌಡಿ ಚಾರ್ಜ್‌ಶೀಟ್ ತೆರೆದಿದ್ದಾರೆ. ಈ ರೌಡಿ ಶೀಟ್‌ನಲ್ಲಿ ಸೇರಿದ ಇಬ್ಬರು ಮರಿ ರೌಡಿಗಳು ಶಿವಮೊಗ್ಗದವರೇ ಆಗಿದ್ದು, ಓರ್ವ ಎನ್.ಟಿ.ರಸ್ತೆಯ ಕೆಇಬಿ ಕ್ವಾರ್ಟರ್‍ಸ್ ಹಿಂಬದಿಯಲ್ಲಿ ವಾಸವಾಗಿರುವ ರವಿ ಅಲಿಯಾಸ್ ರವಿಕುಮಾರ್ (25) ಆಗಿದ್ದರೆ, ಮತ್ತೋರ್ವ ರಾಮಿನಕೊಪ್ಪದ ಶಿವಕುಮಾರ್ (23) ರೌಡಿ ಶೀಟ್‌ನಲ್ಲಿ ಹೆಸರು ಬರೆಸಿಕೊಂಡವರಾಗಿದ್ದಾರೆ.

ಸಣ್ಣಪುಟ್ಟ ರೌಡಿಗಳಿಂದ ಹಿಡಿದು ಈಗಾಗಲೇ ಕುಖ್ಯಾತರಾಗಿರುವ ರೌಡಿಗಳವರೆಗೆ ಸಾಕಷ್ಟು ಹುಡುಕಾಟ ನಡೆಸಿ, ಮರಿ ರೌಡಿಗಳನ್ನೆಲ್ಲಾ ಗುಡ್ಡೆಹಾಕಿ ಜೈಲಿಗೆ ಅಟ್ಟುತ್ತಿರುವ ದೊಡ್ಡ ಪೇಟೆ ಪೊಲೀಸ್ ಠಾಣೆಯ ಪೊಲೀಸರ ಕೆಲಸ ಇದೀಗ ರೌಡಿ ಶೀಟ್‌ಗಳಲ್ಲಿ ಕೆಲವರ ಹೆಸರನ್ನು ಸೇರಿಸುವವರೆಗೆ ಮುಂದುವರೆದಿದೆ.

ಕಳೆದ 15 ದಿನಗಳ ಹಿಂದೆ ಸುದೀಪ್ ಎಂಬ ಹೆಸರಿನ ಮರಿ ರೌಡಿ ಬಾರ್‌ವೊಂದರಲ್ಲಿ ತಿಂದು, ಕುಡಿದು ಆ ಬಾರ್‌ನ ಮಾಲೀಕನಿಗೆ ಚಾಕು ಹಾಕಲು ಹೋದ ಸಂದರ್ಭದಲ್ಲಿ ದೊಡ್ಡಪೇಟೆ ಪೊಲೀಸರು ಬಂಧಿಸಿ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಈತನ ಶಿಷ್ಯಂದಿರಾದ ಎನ್‌ಟಿ ರಸ್ತೆಯ ವಾಸಿ ರವಿ ಅಲಿಯಾಸ್ ರವಿಕುಮಾರ್ ಮತ್ತು ರಾಮಿನಕೊಪ್ಪದ ವಾಸಿ ಶಿವಕುಮಾರ್ ಎಂಬಿಬ್ಬರೂ ಇಂಡಸ್ಟ್ರೀಯಲ್ ಎಸ್ಟೇಟ್‌ನ ಕಿರಣ್ ಎಂಬಾತನ ಜೊತೆ ಸೇರಿ ಕಳೆದ ಜು.2ರಂದು ಮಧ್ಯರಾತ್ರಿ ನಗರದ ಮಂಜುನಾಥ ಪೆಟ್ರೋಲ್ ಬಂಕ್‌ಗೆ ನುಗ್ಗಿ ಬಲವಂತದಿಂದ ಪೆಟ್ರೋಲ್ ಹಾಕಿಸಿಕೊಂಡಿದ್ದಲ್ಲದೆ, 370 ರು.ಗಳನ್ನು ನೀಡದೆ, ಹಣ ಕೇಳಿದ ಪೆಟ್ರೋಲ್ ಬಂಕ್‌ನ ಕೆಲಸಗಾರರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣ ನಡೆದಿತ್ತು.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೂಡಲೇ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಬಿ.ಮಂಜುನಾಥ್, ಪ್ರೊಬೆಷನರಿ ಸಬ್‌ಇನ್ಸ್‌ಪೆಕ್ಟರ್ ಆನಂದ್ ಹಾಗೂ ಅಪರಾಧ ವಿಭಾಗದ ಪೇದೆಗಳಾದ ಹಾಲಪ್ಪ, ನಾರಾಯಣ್ ಕಾರ್ಯಾಚರಣೆ ನಡೆಸಿದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಈ ಮೂವರನ್ನೂ ಸಹ ಜೈಲಿಗೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ರವಿ ಅಲಿಯಾಸ್ ರವಿಕುಮಾರ್ ಮತ್ತು ಶಿವಕುಮಾರ್‌ರವರ ಮೇಲೆ ರೌಡಿ ಶೀಟ್ ಪ್ರಾರಂಭಿಸಿದ್ದು, ಈ ಮೂಲಕ ಅವರಿಗೆ ಕಡಿವಾಣ ಹಾಕಲು ಪ್ರಯತ್ನಿಸಿದ್ದಾರೆ.

********

ಧ್ವಜ ಸ್ತಂಭ ಕಳವು; ನಗರಸಭೆ ವಿಶೇಷ ಸಭೆಯಲ್ಲಿ ಚರ್ಚೆ

ಶಿವಮೊಗ್ಗ:ನಗರಸಭೆ ಆವರಣದಲ್ಲಿದ್ದ ರಾಷ್ಟ್ರ ಲಾಂಛನ ಧ್ವಜಸ್ತಂಭ ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಜು.7 ರಂದು ನಗರಸಭೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಹಲವು ಸದಸ್ಯರು ರಾಷ್ಟ್ರ ಲಾಂಛನವನ್ನು ಹುಡುಕಿಸಿ ಸತ್ಯಾಂಶ ಹೊರತರುವಂತೆ ಗಮನಸೆಳೆದರು.

ಘಟನೆಗೆ ಸಂಬಂಧಿಸಿದಂತೆ ನಗರಸಭಾ ಅಧ್ಯಕ್ಷರಾದ ಎನ್.ಜೆ.ರಾಜಶೇಖರ್ ಮಾತನಾಡಿ, ಸರಿಯಾದ ತನಿಖೆ ನಡೆದರೆ ಸತ್ಯಾಂಶ ಹೊರಬರುತ್ತದೆ. ಈಗಾಗಲೇ ಕನ್ನಡ ಸೈನ್ಯ ವತಿಯಿಂದ ಮೊಕದ್ದಮೆ ದಾಖಲಿಸಿದ್ದಾರೆ ಎಂದರು.

ನಗರಸಭಾ ಆಯುಕ್ತ ಮಾತನಾಡಿ, ನಗರಸಭೆ ವತಿಯಿಂದಲೇ ಪೊಲೀಸರಿಗೆ ಮೊಕದ್ದಮೆ ನೀಡುತ್ತೇವೆ. ಜೊತೆಗೆ ತಾವೇ ಖುದ್ದಾಗಿ ನಗರದ ಎಲ್ಲಾ ಗುಜರಿ ಅಂಗಡಿಗಳಲ್ಲಿ ಹುಡುಕುವುದಾಗಿ ಸಭೆಯಲ್ಲಿ ತಿಳಿಸಿದರು.

ಅನಂತರ ನಗರಸಭಾ ಸದಸ್ಯ ಎಸ್.ಕೆ.ಮರಿಯಪ್ಪ ಮಾತನಾಡಿ, ನಗರಸಭೆ ನೌಕರರೆ ಹೇಳುವಂತೆ ಇಲ್ಲಿನ ಒಂದು ಗುಂಪೇ ಅದನ್ನು ಒಡೆದು ಮಾರಿದ್ದಾರೆ. ಹಿಂದೆ ಬಿ.ಹೆಚ್.ರಸ್ತೆಯ ಅಂಗಡಿಗಳನ್ನು ಹೇಳದೇ ಕೇಳದೇ ಒಡೆಯುವಾಗ ಅಧಿಕಾರಿಗಳಿಗೆ ಮಾನವೀಯತೆ ಇರಲಿಲ್ಲ. ಆದರೆ ದೇಶದ ಲಾಂಛನವನ್ನೇ ತೆಗೆಯುವಾಗ ಅಧಿಕಾರಿಗಳಿಗೆ ಪರಿಜ್ಞಾನವಿರಲಿಲ್ಲವೇ ಎಂದು ಪ್ರಶ್ನಿಸಿದರು.

ಈ ಲಾಂಛನವನ್ನು ಒಡೆದು ಮಾರಿರುವುದು ಇಲ್ಲಿನ ಕೆಲವು ನೌಕರರಿಗೆ ತಿಳಿದಿದೆ. ಅದನ್ನು ಪತ್ತೆ ಹಚ್ಚಿ ಮಾರಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಂತರ ನಗರಸಭೆ ಕೌನ್ಸಿಲ್‌ನ ವಿಶೇಷ ಸಭೆಯಲ್ಲಿ ಚರ್ಚೆಗೆ ಬಂದ ಶಿವಪ್ಪನಾಯಕ ಮಾರುಕಟ್ಟೆ ಜಾಗದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಜಾಗಗಳನ್ನು ಒಳಗೊಂಡ ಒಟ್ಟು 3 ಎಕರೆ 11 ಗುಂಟೆ ಜಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ವಾಣಿಜ್ಯ ಸಂಕೀರ್ಣವನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವ ಬದಲು ನಗರಸಭೆಯೇ ನಿರ್ಮಾಣ ಮಾಡಲಿ. ಇದಕ್ಕೆ ಸ್ಥಳೀಯ ವ್ಯಾಪಾರಸ್ಥರು ಸಂಕೀರಣದಲ್ಲಿ ಕೊಠಡಿ ಬೇಕಾದವರು ಮುಂಗಡ ಹಣ ನೀಡಲು ತಯಾರಿದ್ದು ಅದರಡಿ ಮಾರುಕಟ್ಟೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಿ ಎಂದು ನಗರಸಭೆ ಸದಸ್ಯ ಪ್ರಸನ್ನಕುಮಾರ್ ಒತ್ತಾಯಿಸಿದರು.

ಶಿವಮೂರ್ತಿ ವೃತ್ತದಿಂದ ಜಿಲ್ಲಾಧಿಕಾರಿಯವರ ಮನೆ ಕಡೆ ತೆರಳುವ ರಸ್ತೆಯ ಅಗಲೀಕರಣಕ್ಕೆ ನೆಹರೂ ಕ್ರೀಡಾಂಗಣದ 8 ಅಡಿ ಜಾಗ ನೀಡಲು ನಗರಸಭೆ ತೀರ್ಮಾನಿಸಿರುವ ಕ್ರಮವನ್ನು ನಗರಸಭೆ ಸದಸ್ಯ ವಿಶ್ವನಾಥ ಕಾಶಿ, ಎಸ್.ಕೆ. ಮರಿಯಪ್ಪ ತೀವ್ರವಾಗಿ ವಿರೋಧಿಸಿದರು. ಕ್ರೀಡಾಂಗಣದ ಜಾಗವನ್ನು ಇತರ ಉದ್ದೇಶಗಳಿಗೆ ನೀಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಅವರು ಅಭಿಪ್ರಾಯ

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more