ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪಾಳೆಯದಲ್ಲಿ ಏನು ನಡೆಯುತ್ತಿದೆ ರಾಮರಾಮ!

By Staff
|
Google Oneindia Kannada News

LK Advani
ಆಡ್ವಾಣಿಯವರ ಪ್ರಭಾವ ಮಸುಕಾಗುತ್ತಿದೆ, ಅವರ ನಾಯಕತ್ವಕ್ಕೆ ಈಗ ಹಿನ್ನಡೆ ಉಂಟಾಗುತ್ತಿದೆ. ಈ ಮಾತನ್ನು ಬಿಜೆಪಿಯಲ್ಲಿರುವ ಟಾಪ್ ಕಮಾಂಡ್ ಗಳು ಬಾಯಿಬಿಟ್ಟು ಹೇಳುತ್ತಿಲ್ಲ, ಆದರೆ ಪರ್ಯಾಯ ನಾಯಕರನ್ನು ತಲಾಶ್ ಮಾಡುತ್ತಿದೆ. ಮತ್ತೊಂದೆಡೆ ಸಂಘ ಪರಿವಾರಕ್ಕೆ ಬಿಜೆಪಿ ತಾಕತ್ತಿನ ಬಗ್ಗೆ ಶಂಕೆ ಉಂಟಾಗಿದೆ, ಆದ್ದರಿಂದಲೇ ಬಿಜೆಪಿ ಸಹವಾಸ ಸಾಕು ಎನ್ನುವ ಹಂತಕ್ಕೆ ಬಂದಿದೆ.

* ಚಿದಂಬರ ಬೈಕಂಪಾಡಿ, ಮಂಗಳೂರು

ಸಿದ್ದಾಂತವೇ ಉಸಿರೆಂದು ಭಾವಿಸಿದ್ದ ಮತ್ತು ಸಿದ್ದಾಂತವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಲೇ ಬಂದ ಪಕ್ಷಕ್ಕೆ ಅದೆಂಥ ದುಸ್ಥಿತಿ ಬಂತು? ಈ ಮಾತು ಬಿಜೆಪಿಗೆ. ಹದಿನೈದನೇ ಲೋಕಸಭೆಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದ ಕೂಡಲೇ ಮತ್ತೆ ಪ್ರತಿಕ್ಷಗಳ ಸಾಲಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು ಎನ್ನುವುದಕ್ಕಿಂತಲೂ ಅಧಿಕಾರ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬೀದಿರಂಪಾಟ ಮಾಡುತ್ತಿರುವುದು ದೇಶದ ಜನರಿಗೆ ಬಿಟ್ಟಿ ಮನರಂಜನೆ ಸಿಗುತ್ತಿರುವುದು ದುರಂತ.

ಎಲ್.ಕೆ.ಆಡ್ವಾಣಿಯವರೇ ನಮ್ಮ ಪ್ರಧಾನಿ ಅಂದ ಮಾತ್ರಕ್ಕೇ ದೇಶದ ಜನ ಮತ ಹಾಕಿಬಿಡುತ್ತಾರೆಂದು ಭಾವಿಸಿದ್ದು ಬಿಜೆಪಿ ಮಾಡಿದ ಮೊದಲ ತಪ್ಪು. ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ ಅನ್ನುತ್ತಿದ್ದ ಬಿಜೆಪಿ ವ್ಯಕ್ತಿಪೂಜೆಗೆ ಮುಂದಾಗುವ ಮೂಲಕ ಆತುರ ತೋರಿತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ರಾಮಮಂದಿರ ಕಟ್ಟುತ್ತಾರೆಂದು ಜನರು ನಂಬುತ್ತಾರೆಂಬ ತಪ್ಪು ಗ್ರಹಿಕೆ ಬಿಜೆಪಿಗಿತ್ತು. ಹಿಂದುತ್ವದ ಅಜೆಂಡಾವನ್ನು ಪ್ರಚಾರ ಮಾಡಿದರೆ ಜನರು ಮರುಳಾಗುತ್ತಾರೆಂದು ಭಾವಿಸಿದ್ದೂ ಕೂಡಾ ತಪ್ಪು.

ಎನ್‌ಡಿಎ ಕೂಟವೇ ಅಧಿಕಾರಕ್ಕೆ ಬಂದರೆ ರಾಮಮಂದಿರ ನಿರ್ಮಿಸುವುದು ಅಸಾಧ್ಯವೆಂದು ಬಿಜೆಪಿ ಹೇಳದಿದ್ದರೂ ಜನರು ಅರಿತಿದ್ದರು. ಹಿಂದುತ್ವ ಎನ್ನುವುದನ್ನು ಬಿಜೆಪಿ ಚುನಾವಣೆ ಕಾಲದಲ್ಲಿ ಮಾತ್ರ ತೇಲಿಬಿಡುತ್ತದೆ ಎನ್ನುವ ಸತ್ಯ ಸ್ವತಃ ಸಂಘಪರಿವಾರಕ್ಕೂ ಗೊತ್ತಿತ್ತು. ರಾಮನ ಹೆಸರನ್ನು ಗೆಲ್ಲುವುದಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುವ ಈಗಿನ ಬಿಜೆಪಿಯನ್ನು ಜನರು ದೂರವಿಟ್ಟರು ಎನ್ನುವುದು ಸಿಂಪಲ್ ಥಿಯರಿ.

ಚುನಾವಣೆಗೂ ಮುನ್ನವೇ ಎನ್‌ಡಿಎ ಕೂಟದೊಳಗೂ ಹೊಂದಾಣಿಕೆ ಇರಲಿಲ್ಲ. ಆಡ್ವಾಣಿಯವರ ಸಾರಥ್ಯವನ್ನು ಈ ಕೂಟದಲ್ಲಿದ್ದವರೆಲ್ಲರೂ ಸರ್ವ ಸಮ್ಮತವಾಗಿ ಒಪ್ಪಿರಲಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಚುನಾವಣೆ ಫಲಿತಾಂಶ ಹೊರಬೀಳುವತನಕ ಮೌನವಾಗಿದ್ದವರೇ ಅಧಿಕ ಹೊರತು ಆ ಮೌನವನ್ನು ಸಮ್ಮತಿಯೆಂದು ಭಾವಿಸಿದ್ದು ಬಿಜೆಪಿಯ ತಪ್ಪು ಗ್ರಹಿಕೆ. ಒಂದು ವೇಳೆ ಅಧಿಕಾರಕ್ಕೆ ಹತ್ತಿರವಾಗುವಷ್ಟು ಸಂಖ್ಯೆ ಬಂದಿದ್ದರೂ ಆಡ್ವಾಣಿಯವರ ನಾಯಕತ್ವದ ಪ್ರಶ್ನೆ ಎದುರಾಗುತ್ತಿತ್ತು. ಆಗ ಬಿಜೆಪಿ ಮತ್ತಷ್ಟು ಮುಜುಗರ ಅನುಭವಿಸಬೇಕಾಗುತ್ತಿತ್ತು.

ಬಿಜೆಪಿ ಪಾಳೆಯಳದೊಳಗೆ ಈಗ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕಿಂತ ಏನೂ ಭಿನ್ನವಾಗಿಲ್ಲ. ಬಿಜೆಪಿಯೊಳಗಿನ ಆಂತರಿಕ ಪ್ರಜಾಪ್ರಭುತ್ವದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಮತ್ತು ಹತ್ತಾರು ಸ್ವರಗಳು ಗಟ್ಟಿಯಾಗಿ ಕೇಳಿಬರುತ್ತಿರುವುದು ಪಕ್ಷಕ್ಕೆ ಹಿನ್ನಡೆ ಹೊರತು ಆಂತರಿಕ ಪ್ರಜಾಪ್ರಭುತ್ವದ ಗಟ್ಟಿಯಾಗುವ ಲಕ್ಷಣಗಳಲ್ಲ. ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೇಳಿಬಂದ ಮಾತುಗಳು, ಸೋಲಿನ ಅವಲೋಕನದ ವಿಮರ್ಶೆ ಬಿಜೆಪಿ ಇತರ ಪಕ್ಷಗಳಿಗಿಂತ ಹೇಗೆ ಭಿನ್ನ?

ಸೋಲಿನ ಹೊಣೆ ಹೊರುವ ವಿಚಾರದಲ್ಲಿ ಪರ-ವಿರೋಧ ಸ್ವರಗಳು ಕೇಳಿಬಂದವು. ಸೋಲಿಗೆ ಕಾರಣರಾದವರು ಯಾರೆಂದು ವ್ಯಕ್ತಿಗತವಾಗಿ ಗುರುತಿಸುವಷ್ಟರಮಟ್ಟಿಗೆ ಬಿಜೆಪಿ ಕಾಂಗ್ರೆಸ್ ಹೆಜ್ಜೆಗಳನ್ನು ಅನುಸರಿಸುತ್ತಿದೆ. ತಂತ್ರ ಹೆಣೆಯುವುದರಲ್ಲಿ ನಿಸ್ಸೀಮರೆಂದು ಅರುಣ್ ಜೈಟ್ಲಿ ಅವರನ್ನು ಹೊಗಳುತ್ತಿದ್ದವರು ಈಗ ಜರೆಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅರುಣ್ ಜೈಟ್ಲಿ ಕಾರಣರೆಂದು ಬಿಜೆಪಿ ಸುಪ್ರಿಮೋಗಳು ಹೇಳುತ್ತಿದ್ದರು. ಆದರೆ ಈಗ ಅವರೊಳಗೇ ವಾದ-ವಿವಾದ ಏನನ್ನು ಸೂಚಿಸುತ್ತದೆ?

ಆಡ್ವಾಣಿಯವರ ಪ್ರಭಾವ ಮಸುಕಾಗುತ್ತಿದೆ, ಅವರ ನಾಯಕತ್ವಕ್ಕೆ ಈಗ ಹಿನ್ನಡೆ ಉಂಟಾಗುತ್ತಿದೆ. ಈ ಮಾತನ್ನು ಬಿಜೆಪಿಯಲ್ಲಿರುವ ಟಾಪ್ ಕಮಾಂಡ್ ಗಳು ಬಾಯಿಬಿಟ್ಟು ಹೇಳುತ್ತಿಲ್ಲ, ಆದರೆ ಪರ್ಯಾಯ ನಾಯಕರನ್ನು ತಲಾಶ್ ಮಾಡುತ್ತಿದೆ. ಮತ್ತೊಂದೆಡೆ ಸಂಘಪರಿವಾರಕ್ಕೆ ಬಿಜೆಪಿ ತಾಕತ್ತಿನ ಬಗ್ಗೆ ಶಂಕೆ ಉಂಟಾಗಿದೆ, ಆದ್ದರಿಂದಲೇ ಬಿಜೆಪಿ ಸಹವಾಸ ಸಾಕು ಎನ್ನುವ ಹಂತಕ್ಕೆ ಬಂದಿದೆ.

ಅನಾಯಾಸವಾಗಿ ಕೇಂದ್ರದಲ್ಲಿ ಅಧಿಕಾರ ಸೂತ್ರಹಿಡಿದ ಕಾಂಗ್ರೆಸ್ ಸಾರಥ್ಯದ ಯುಪಿಎಗೆ ಈಗ ಹಿತಾನುಭವ ಆಗುತ್ತಿದೆ. ಇಂಡಿಯಾಶೈನಿಂಗ್ ಎನ್ನುವ ಘೋಷಣೆ ಹುಟ್ಟು ಹಾಕಿದ ಬಿಜೆಪಿಗೆ ಈಗ ಯಾವ ಘೋಷಣೆ ಸೂಟ್ ಅಗುತ್ತೋ ಕಾದುನೋಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X