ಏರ್ ಇಂಡಿಯಾದಲ್ಲಿ ಸಿಬ್ಬಂದಿ ಸಂಬಳ ವಿಳಂಬ
ನವದೆಹಲಿ, ಜೂ. 15 : ವಹಿವಾಟಿನಲ್ಲಿ ಉಂಟಾದ ನಷ್ಟದ ಹಿನ್ನೆಲೆಯಲ್ಲಿ ಏರ್ ಇಂಡಿಯಾದ ಸುಮಾರು 30 ಸಾವಿರ ಸಿಬ್ಬಂದಿಗೆ ಜೂನ್ ತಿಂಗಳ ಸಂಬಳ ಪಾವತಿಯನ್ನು 15 ದಿನ ಮುಂದೂಡಲಾಗಿದೆ. ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ನಷ್ಟ ಅನುಭವಿಸತೊಡಗಿದ ನಂತರ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಉಂಟಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಏರ್ ಇಂಡಿಯಾದ ವಕ್ತಾರರು, ಕಂಪನಿಯ ಸಂಪನ್ಮೂಲ ನಷ್ಟವನ್ನು ಅನುಭವಿಸುತ್ತಿರುವುದರಿಂದ ಜೂನ್ ತಿಂಗಳ ವೇತನವನ್ನು ಜುಲೈ 15 ರಂದು ನೀಡಲಾಗುವುದು ಎಂದಿದ್ದಾರೆ. ಉತ್ಪಾದನೆಗೆ ಸಂಬಂಧಿಸಿದ ಸಹಾಯಧನ ನೀಡಿಕೆಯೂ 15 ದಿನ ತಡವಾಗಿದೆ ಎಂದು ಏರ್ ಇಂಡಿಯಾ ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾದ ನಷ್ಟ ಸುಮಾರು 4000 ಕೋಟಿ ರುಪಾಯಿ ಆಗಿತ್ತು. ಅದರ ಹಿಂದಿನ ವರ್ಷದ ನಷ್ಟ ಸುಮಾರು 2226 ಕೋಟಿ ರುಪಾಯಿ ಆಗಿತ್ತು ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ.
(ಏಜನ್ಸೀಸ್)












Click it and Unblock the Notifications