ಏಳು ಕಳ್ಳ ಅಧಿಕಾರಿಗಳು ಬಲೆಗೆ : 7.05 ಕೋ ರು ವಶ

ಬೀದರ್ ಜಿಲ್ಲೆಯ ಅಬಕಾರಿ ಜಿಲ್ಲಾಧಿಕಾರಿ ಅಸದ್ ಅಲಿ ಅನ್ಸಾರಿ (1.69 ಕೋಟಿ ರುಪಾಯಿ), ಬಿಡಿಎ ಪ್ರಥಮ ದರ್ಜೆ ಗುಮಾಸ್ತ ಶಿವರಾಮ್ (1 ಕೋಟಿ ರುಪಾಯಿ), ಬೀದರ್ ಆರ್ ಟಿಒ ಇನ್ಸ್ ಪೆಕ್ಟರ್ ಕೆ ಎಲ್ ನಾಗರಾಜ್ (96 ಲಕ್ಷ ರುಪಾಯಿ), ಮೈಸೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಬಸವರಾಜ್ (74 ಲಕ್ಷ ರುಪಾಯಿ), ಕಿತ್ತೂರು ಪೊಲೀಸ್ ಇನ್ಸ್ ಪೆಕ್ಟರ್ ಬಸವಾರೆಡ್ಡಿ (1.40 ಕೋಟಿ ರುಪಾಯಿ), ಬೆಂಗಳೂರು ವಿಕಾಸಸೌಧದ ಸಹಾಯಕ ಇಂಜಿನಿಯರ್ ಶಿವಾಜಿ ಕವಳೆ (20 ಲಕ್ಷ ರುಪಾಯಿ), ಬೆಂಗಳೂರು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಶೇಖ್ ಸಮೀಉಲ್ಲಾ ಷರೀಫ್ (1.11 ಕೋಟಿ ರುಪಾಯಿ) ಲೋಕಾಯುಕ್ತ ಬಲೆಗೆ ಬಿದ್ದ ತಿಮಿಂಗಲುಗಳು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎಂ ಸಂತೋಷ ಹೆಗ್ಡೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಏಕಕಾಲಕ್ಕೆ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಪ್ರಕ್ರಿಯೆ ಆರಂಭಿಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ದಾಖಲೆಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೈಸೂರಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಬಸವರಾಜ್ ಅವರ ಬೋಗಾದಿ ಎಂಜಿನಿಯರ್ ಕಾಲೋನಿಯಲ್ಲಿರುವ 40x60 ಅಳತೆಯ ಬೃಹತ್ ಬಂಗಲೆಯ ಮೇಲೆ ದಾಳಿ. ಅಲ್ಲದೇ ತುಮಕೂರಿನಲ್ಲಿರುವ ಮನೆಯ ಮೇಲೂ ನಡೆಸಿದ ದಾಳಿ ಸಂದರ್ಭದಲ್ಲಿ ಅಕ್ರಮವಾಗಿ ಸಂಪಾದಿಸಿರುವ ಹಣ, ಚಿನ್ನಾಭರಣ, ಆಸ್ತಿಯ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಉದಯಗಿರಿಯಲ್ಲಿ 30x40 ಅಳತೆಯ ಒಂದು ಮನೆ, ಕೆಆರ್ ನಗರ ತಾಲ್ಲೂಕಿನ ಅವರ ಸ್ವಂತ ಊರಿನಲ್ಲಿ ಕೃಷಿ ಭೂಮಿ ಹಾಗೂ ತೋಟ ಇರುವುದು ದಾಳಿ ಸಂದರ್ಭದಲ್ಲಿ ಪತ್ತೆಯಾಗಿದೆ.
ಮೈಸೂರಿನ ಇನ್ನೊಬ್ಬ ಅಧಿಕಾರಿ ಶೇಖ್ ಸಮೀಉಲ್ಲಾ ಷರೀಫ್ ಅವರು ವಾಸ್ತವ್ಯವಿದ್ದ ನಗರದ ಪ್ರತಿಷ್ಠಿತ ಹೋಟೆಲ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಮನಗರದವರಾದ ಷರೀಫ್ ಮನೆ ಮೇಲೆ ದಾಲಿ ನಡೆಸಲಾಗಿದ್ದು, ಬೆಂಗಳೂರಿನ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಇವರ ಒಡೆತನದ ಬೆಂಗಳೂರಿನ ಥಣಿಸಂದ್ರದ ರಾಮಕೃಷ್ಣನಗರದಲ್ಲಿ ಒಂದು ಶಾಲೆಯೂ ಇದೆ.
ಬಿಡಿಎದಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿರುವ ಶಿವರಾಮ್ ಅವರ ಬೆಂಗಳೂರಿನ ಮಾಗಡಿ ರಸ್ತೆಯ ಎಂಸಿಆರ್ ಲೇಔಟ್ ನ ಮನುತೇಜ ಟವರ್ಸ್ ಮೇಲೆ ದಾಳಿ ನಡೆಸಿ ಅಕ್ರಮ ಸಂಪಾದನೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗುಲ್ಬರ್ಗಾ ಜಿಲ್ಲೆಯಯರಾದ ಶಿವಾಜಿ ಕವಳೆ ಅವರ ಮನೆ ಹುಮ್ನಾಬಾದ್ ನಲ್ಲಿದ್ದು, ಮನೆ ಮತ್ತು ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಲಾಗಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕ ದಾಖಲೆ, ನಗದು ಹಾಗೂ ಚಿನ್ನಾಭರಣಗಳ ಮೌಲ್ಯ ಒಟ್ಟು 7.05 ಕೋಟಿ ರುಪಾಯಿ ಎಂದು ಲೋಕಾಯುಕ್ತರು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications