ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ-ಕುಮಾರ್ ಭೇಟಿ ರಾಜಕೀಯ ತಲ್ಲಣಕ್ಕೆ ನಾಂದಿ

By Staff
|
Google Oneindia Kannada News

'ನಾನಿರುವುದೇ ಹೀಗೆ' ಅಂತ ಮುಖ ಮುಚ್ಚಿಕೊಂಡು ದೆಹಲಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅವರನ್ನು ಭೇಟಿ ಮಾಡಿರುವ ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನುಂಟು ಮಾಡಬಹುದೆಂಬ ಶಂಕೆ ಬಲವಾಗಿ ಬೀಸುತ್ತಿದೆ. ಇದಕ್ಕೆ ಪೂರಕವಾಗಿ ಸೋನಿಯಾ ಅವರು ಕೃಷ್ಣರನ್ನು ಕರೆಸಿ ಮಾತಾಡಿದ್ದು ಅನೇಕ ಊಹಾಪೋಹಗಳಿಗೆ ರೆಕ್ಕೆ ಹಚ್ಚಿದೆ.

* ಚಿದಂಬರ ಬೈಕಂಪಾಡಿ

ದೆಹಲಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ರಹಸ್ಯ' ಭೇಟಿ ಮಾಡಿದ ಮೇಲೆ ರಾಜಕೀಯರಂಗದಲ್ಲಿ ತಲ್ಲಣಗಳು ಕಾಣಿಸಿಕೊಂಡಿವೆ. ಇಂಥ ತಲ್ಲಣಗಳು ಹುಟ್ಟಬೇಕೆಂಬ ಕಾರಣಕ್ಕೇ ಈ ಭೇಟಿ ಆಗಿರುವುದೂ ಕೂಡಾ.

ಜೆಡಿಎಸ್ ಸುಪ್ರಿಮೋ ಎಚ್.ಡಿ.ದೇವೇಗೌಡರ ಹುಕುಂ ಇಲ್ಲದೆ ಕುಮಾರಸ್ವಾಮಿ ಸೋನಿಯಾರನ್ನು ಭೇಟಿ ಮಾಡಿದ್ದಾರೆಂದು ನೀವೇನಾದರೂ ಊಹಿಸಿದ್ದರೆ ಅದು ಸುಳ್ಳು. ಬಿಜೆಪಿ ಜೊತೆ ಗೌಡರನ್ನು ಕೇಳದೆ ಕುಮಾರಸ್ವಾಮಿ ಕೈಜೋಡಿಸಿದ ಮೇಲೆ ಏನಾಯ್ತು ಎನ್ನುವುದನ್ನು ನೆನಪಿಸಿಕೊಂಡರೆ ಎಲ್ಲವೂ ಅರ್ಥವಾಗಿ ಬಿಡುತ್ತದೆ. ಇನ್ನೆಂದೂ ಹೇಳದೆ ಕೇಳದೆ ಹೆಜ್ಜೆ ಇಡಲಾರೆ ಎನ್ನುವ ಮಾತುಕೊಟ್ಟಿದ್ದ ಕುಮಾರಸ್ವಾಮಿ ವಚನಭ್ರಷ್ಟರಾಗಲು ಸಾಧ್ಯವಿಲ್ಲ. ಎಲ್ಲವೂ ಖುಲ್ಲಾಂ ಖುಲ್ಲಾ.

ಹಿಂಸೆಯನ್ನು ಸಹಿಸಲಾಗದೆ ದೆಹಲಿಗೆ ದೂರುಕೊಡಲು ಕುಮಾರಸ್ವಾಮಿ ಸೋನಿಯಾ ಭೇಟಿ ಮಾಡಿದ್ದರೆಂದು ಸ್ವತಃ ದೇವೇಗೌಡರು ಪತ್ರಿಕಾಗೋಷ್ಠಿಯಲ್ಲಿ ಸಮಜಾಯಿಷಿಕೊಟ್ಟಿದ್ದಾರೆ. ಈ ಹಿಂಸೆ ಯಾರಿಂದ ಆಗುತ್ತಿದೆ ಎನ್ನುವುದು ಚರ್ಚೆಯಾಗಬೇಕಾದ ವಿಷಯ. ಕಾಂಗ್ರೆಸ್ ನಾಯಕರಿಂದ ಹಿಂಸೆಯಾಗುತ್ತಿದ್ದರೆ ನಿಜಕ್ಕೂ ಕುಮಾರಸ್ವಾಮಿ ಸೋನಿಯಾರಿಗೆ ದೂರುಕೊಟ್ಟಿದ್ದರೆ ಅರ್ಥವಿತ್ತು. ಆದರೆ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಂದ ಈ ಹಿಂದೆ ಕಿರಿಕಿರಿಯಾದಾಗಲೂ ರಾಜಕೀಯವಾಗಿಯೇ ಎದುರಿಸಿದ್ದಾರೆ. ಡಿಕೆಶಿ ತೊಡೆತಟ್ಟಿದಾಗಲೂ ಕುಮಾರಸ್ವಾಮಿ ದೂರುಕೊಟ್ಟಿರಲಿಲ್ಲ. ಹಾಗಾದರೆ ಕುಮಾರಸ್ವಾಮಿಯವರಿಗೆ ಹಿಂಸೆ ಯಾರಿಂದ?

ಆಪರೇಷನ್ ನೋವು ಹೆಚ್ಚಾಗುತ್ತಿದೆ

ಬಿಜೆಪಿಯ ಹೊಡೆತ ದಿನಕಳೆದಂತೆ ಜೆಡಿಎಸ್ ಮೇಲೆ ಹೆಚ್ಚಾಗುತ್ತಿದೆ. ಗಣಿಧಣಿಗಳ ಅಬ್ಬರವೂ ತೀವ್ರವಾಗುತ್ತಿದೆ. ರಾಜ್ಯಮಟ್ಟದಲ್ಲಿ ನಾಯಕರನ್ನು ಬಿಜೆಪಿ ಸೆಳೆಯುತ್ತಿದೆ. ಈಗಾಗಲೇ ಬಹುತೇಕ ಘಟಾನುಘಟಿಗಳನ್ನು ಆಪರೇಷನ್ ಕಮಲ'ದ ಮೂಲಕ ತೆಕ್ಕೆಗೆ ಹಾಕಿಕೊಂಡಿದೆ. ಈಗ ಜಿಲ್ಲೆ ಮತ್ತು ತಾಲೂಕುಮಟ್ಟಕ್ಕೂ ಆಪರೇಷನ್‌ಗೆ ಇಳಿದಿದೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್‌ಗಳನ್ನು ಇಡಿಇಡಿಯಾಗಿ ಎತ್ತಿಕೊಳ್ಳುತ್ತಿದೆ. ಜೆಡಿಎಸ್ ಉಸಿರು ಇರುವುದೇ ಗ್ರಾಮೀಣ ಪ್ರದೇಶಗಳಲ್ಲಿ. ಗ್ರಾಮಮಟ್ಟದ ನಾಯಕರನ್ನೇ ಹೈಜಾಕ್ ಮಾಡುತ್ತಿರುವುದರಿಂದ ಸಹಜವಾಗಿಯೇ ಕುಮಾರಸ್ವಾಮಿಯವರಿಗೆ ಆತಂಕ ಕಾಡುತ್ತಿದೆ. ಈ ಮಾನಸಿಕ ಹಿಂಸೆಯಿಂದ ಮುಕ್ತಿಪಡೆಯಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದರೆ ಮತ್ತಷ್ಟು ಹಿಂಸೆ ಹೆಚ್ಚಾಗಬಹುದು. ಒಂದುವೇಳೆ ಹಿಂದೆ ಇದ್ದ ಹದಿನೆಂಟು ಸಂಸದರನ್ನು ಉಳಿಸಿಕೊಳ್ಳಗಾದಿದ್ದರೆ ಅದರ ಪರಿಣಾಮ ಯಡಿಯೂರಪ್ಪ ಅವರ ಮೇಲೆ ಬೀಳುತ್ತದೆ. ಗಣಿಧಣಿಗಳು ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ. ದೆಹಲಿಯಲ್ಲೂ ರೆಡ್ಡಿ ಕಂಪೆನಿಗೆ ಪ್ರಭಾವ ಇದೆ, ಸಂದರ್ಭನೋಡಿ ದಾಳ ಉರುಳಿಸುತ್ತಾರೆ. ಇದನ್ನು ನಿಭಾಯಿಸಬೇಕಾದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಕೈಜೋಡಿಸುವುದು ಅನಿವಾರ್ಯ ಎನ್ನುವ ಸಂದೇಶವನ್ನು ದೆಹಲಿಗೆ ಖುದ್ದಾಗಿ ತಲುಪಿಸಿದ್ದಾರೆ ಕುಮಾರಸ್ವಾಮಿ.

ಬಿಜೆಪಿಯ ಆಪರೇಶನ್ ಕಮಲ'ವನ್ನು ಹೀಗೆಯೇ ಬಿಟ್ಟರೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಮಲಮಯವಾಗುವ ಅಪಾಯವಿದೆ ಎನ್ನುವ ಆತಂಕ ಕುಮಾರಸ್ವಾಮಿಯವರಿಗೆ ಮಾತ್ರವಲ್ಲ ಕಾಂಗ್ರೆಸ್‌ನ್ನೂ ಕಾಡುತ್ತಿದೆ. ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆ ನಡೆಯಲಿರುವುದರಿಂದ ಅಲ್ಲೂ ಕಮಲದ ಕಲರವ ಉಂಟಾದೀತು ಎನ್ನುವ ಸಂಗತಿ ಇಬ್ಬರನ್ನೂ ಕಾಡುತ್ತಿದೆ. ಸಿದ್ದು ಮತ್ತು ಡಿಕೆಶಿಯವರದ್ದು ರಾಜಕೀಯ ವೈರತ್ವವೇ ಹೊರತು ಬೇರೇನೂ ಅಲ್ಲ ಎಂಬ ಅಂಶವನ್ನು ಸೋನಿಯಾರಿಗೆ ಮನವರಿಕೆ ಮಾಡಿರಬಹುದು.

ಮುಂದಿನ ಹೆಜ್ಜೆ ಏನಿರಬಹುದು?

ಸೋನಿಯಾರನ್ನು ಭೇಟಿ ಮಾಡಿರುವ ಕುಮಾರಸ್ವಾಮಿ ಏನು ಮಾತಾಡಿದ್ದಾರೆನ್ನುವುದು ಸೋನಿಯಾ ಮತ್ತು ಕುಮಾರಸ್ವಾಮಿಯವರಿಗೆ ಮಾತ್ರ ಗೊತ್ತು. ಈ ಭೇಟಿಗೆ ಕಾರಣವಾಗಿರುವ ಬಳ್ಳಾರಿಯ ಕೆ.ಸಿ.ಕೊಂಡಯ್ಯ ಅವರಿಗೂ ಗೊತ್ತು, ಆದರೆ ಅವರು ಖುದ್ದು ಬಾಯಿಬಿಟ್ಟಿಲ್ಲ. ಕೊಂಡಯ್ಯ ಅವರ ಮೂಲಕವೇ ಈ ಭೇಟಿ ಮಾಡಿರುವುದರಿಂದ ಬಳ್ಳಾರಿ ಆಧಾರಿತ ರಾಜಕೀಯವನ್ನು ಮಟ್ಟಹಾಕುವುದೇ ಪರಮಗುರಿಯಾಗಿರಬೇಕು ಎನ್ನಲು ಕಾರಣವಾಗಿವೆ.

ಲೋಕಸಭಾ ಫಲಿತಾಂಶ ಹೊರಬಿದ್ದ ಕೂಡಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಕಾರ್ಯಾಚರಣೆಗಿಳಿದು ಯಡಿಯೂರಪ್ಪ ಸರ್ಕಾರವನ್ನು ಕೆಡವಬಹುದೇ? ಎನ್ನುವ ಶಂಕೆ ಪ್ರಬಲವಾಗುತ್ತಿದೆ. ಬಿಜೆಪಿ ಸರ್ಕಾರ ಪವರ್‌ನಲ್ಲಿರುವುದರಿಂದಲೇ ಡಿ.ಬಿ ಚಂದ್ರೇಗೌಡ, ಎಚ್.ಸಿ.ಶ್ರೀಕಂಠಯ್ಯ, ಎಲ್.ಆರ್.ಶಿವರಾಮೇಗೌಡ, ವಿ.ಸೋಮಣ್ಣ ಮುಂತಾದವರು ಕಮಲದ ತೆಕ್ಕೆಗೆ ಸಿಲುಕಿದರು. ಈಗ ಕೈಕಟ್ಟಿ ಕುಳಿತರೆ ರಾಜ್ಯದಾದ್ಯಂತ ಕಮಲದ ಕಲರವ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ ಜಂಟಿ ಕಾರ್ಯಾಚರಣೆಗಿಳಿಯಬಹುದು. ಅಲ್ಲದಿದ್ದರೆ ಮುಖಮುಚ್ಚಿಕೊಂಡು ಕುಮಾರಸ್ವಾಮಿ ಸೋನಿಯಾರನ್ನು ಭೇಟಿ ಮಾಡುವ ಅಗತ್ಯವಿರಲಿಲ್ಲ ಅನ್ನಿಸುತ್ತದೆ.

ಇಲ್ಲವಾದರೆ ಕುಮಾರಸ್ವಾಮಿ ದೆಹಲಿಗೆ ಹೋಗಿದ್ದು ಯಾಕೆ ಅಂತ ಅರಳಿಕಟ್ಟೆ ಮೇಲೆ ಕುಳಿತು ನೀವು-ನಾವು ಹರಟೆ ಹೊಡೆಯೋಣ ಬನ್ನಿ. ಹರಟೆಗೆ ವಸ್ತುವಾಗಲು ಗೌಡರು ದಾಳ ಉರುಳಿಸಿದ್ದಾರೆಂದುಕೊಳ್ಳಬೇಡಿ. ಗೌಡರು ಒಂದು ಹೆಜ್ಜೆ ಇಡಬೇಕಾದರೆ ಹತ್ತುಸಲ ಕಣ್ಣುಜ್ಜಿಕೊಂಡು ಯೋಚನೆ ಮಾಡಿರುತ್ತಾರೆ. ಈ ಭೇಟಿ ಗಹನವಾದುದು ಎನ್ನುವುದಕ್ಕೆ ಸೋನಿಯಾ ಮೇಡಂ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣರನ್ನು ಕರೆಸಿಕೊಂಡು ಅರ್ಧಗಂಟೆ ಮಾತಾಡಿದ್ದಾರೆ. ರಾಜ್ಯದ ರಾಜಕೀಯದ ಕುರಿತು ಮೇಡಂ ಮಾಹಿತಿ ಪಡೆದರು ಅಂತ ಕೃಷ್ಣರೂ ಹೇಳಿದ್ದಾರಲ್ಲಾ, ನೀವೂ ಸ್ವಲ್ಪ ಯೋಚಿಸಿ ಏನಾದರೂ ಹೊಳೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X