ಬಳಿಗಾರ್ ವಿರುದ್ಧ ಗುಡುಗಿದ ದೇವೇಗೌಡ
ಬೆಂಗಳೂರು, ಮೇ. 4 : ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ವಿಪಿ ಬಳಿಗಾರ್ ಈಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿಯೇತರ ಸರಕಾರ ರಚನೆಯಾದರೆ ಬಳಿಗಾರ್ ತನಿಖೆ ಎದುರಿಸಬೇಕಾಗುತ್ತದೆ. ಇಂತಹ ಅಧಿಕಾರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೌಡರು, ಬಳಿಗಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಾನು ಎಂಎಲ್ ಎ ಆದಂದಿನಿಂದಲೂ ಬಳಿಗಾರ್ ಅವರ ದುರಹಂಕಾರವನ್ನು ನೋಡಿದ್ದೇನೆ. ಅವರು ಈ ರಾಜ್ಯದ ಲಿಂಗಾಯಿತರು ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಕಚೇರಿಯಲ್ಲಿ ಆಗುತ್ತಿರುವ ಶೇ.70 ರಷ್ಟು ಅವ್ಯವಹಾರಕ್ಕೆ ಬಳಿಗಾರ್ ಅವರೇ ಕಾರಣ ಎಂದು ಗೌಡರು ಆರೋಪಿಸಿದರು. ಈ ಅಧಿಕಾರಿಯನ್ನು ತಮ್ಮ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿರುವ ಮುಖ್ಯಮಂತ್ರಿ ಮಹಾನ್ ನಾಯಕರು ಎಂದು ಲೇವಡಿ ಮಾಡಿದರು.
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮೇಲೆ ಅನಗತ್ಯವಾಗಿ ಸುಳ್ಳು ಆರೋಪ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಅಕ್ರಮ ಹಣ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ರಾಮನಗರದ ಜಿಲ್ಲಾಧಿಕಾರಿಗಳ ಮೇಲೆ ತಾವು ಒತ್ತಡ ತಂದಿರುವುದಾಗಿ ಕುಮಾರಸ್ವಾಮಿಯವರು ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಈ ಸಂಬಂಧ ಜಿಲ್ಲಾಧಿಕಾರಿ ಅಥವಾ ಮತ್ತಾವ ಅಧಿಕಾರಿಯ ಜೊತೆಯಲ್ಲಿ ತಾವು ಮಾತನಾಡಿಲ್ಲ. ಯಾವುದೇ ಸಮಾಲೋಚನೆಯನ್ನೂ ಮಾಡಿಲ್ಲ ಎಂದು ವಿಪಿ ಬಳಿಗಾರ್ ನೀಡಿರುವ ಹೇಳಿಕೆಗೆ ದೇವೇಗೌಡರು ಈ ಪ್ರತಿಕ್ರಿಯೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಫಲಿತಾಂಶದ ನಂತರ ಸಚಿವ ಸಂಪುಟ ಪುನರ್ ರಚನೆ












Click it and Unblock the Notifications