ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ರಾಹುಲ್ ಗಾಂಧಿ ಗ್ರಾಮವಾಸ್ತವ್ಯ?

By * ಮೃತ್ಯುಂಜಯ ಕಲ್ಮಠ
|
Google Oneindia Kannada News

ಬೆಂಗಳೂರು, ಜ. 18 : ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗತೊಡಗಿವೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಕಾರ್ಯ ತೀವ್ರಗೊಂಡಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿ ತನ್ನ ಖಾತೆಯನ್ನು ತೆರೆದಿರುವ ಭಾರತೀಯ ಜನತಾ ಪಕ್ಷ ಇನ್ನಷ್ಟು ಭದ್ರ ಬುನಾದಿ ಹಾಕಿಕೊಳ್ಳುವತ್ತ ಸಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದೇ ಬಿಂಬಿಸಲಾಗಿದೆ. ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ಅಕ್ಷರಶಃ ಅಗ್ನಿಪರೀಕ್ಷೆಯೆ ಸರಿ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಹೀನಾಯ ಸೋಲಿನಿಂದ ಕೈ ಪಾಳೆಯದ ನಾಯಕರು ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಕಳೆದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆದ ಮಿನಿಮಹಾಸಮರ ಎಂದೇ ಪರಿಗಣಿಸಲ್ಪಟ್ಟಿದ್ದ ಐದು ರಾಜ್ಯಗಳ ವಿಧಾನಸಭೆ ಪಲಿತಾಂಶದಲ್ಲಿ ಬಿಜೆಪಿಗೆ ತುಸು ಹಿನ್ನೆಡೆಯೆ ಎನ್ನಬೇಕು. ದೆಹಲಿ ಮೇಲೆ ಕಣ್ಣಿಟ್ಟಿದ ಕಮಲದ ಪಡೆ ಶೀಲಾ ದೀಕ್ಷಿತ್ ಭಾರಿ ಆಘಾತ ನೀಡಿದರು. ಜತೆಗೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಡಳಿತದಿಂದ ತೀವ್ರ ಅತೃಪ್ತಿ ಹೊಂದಿದ್ದ ಜನತೆ ಅಲ್ಲಿ ಕೂಡ ಬಿಜೆಪಿಗೆ ಮಂಗಳಾರತಿ ಎತ್ತಿ ಮನೆಗೆ ಕಳಿಸಿದರು. ಇದ್ದುದರಲ್ಲಿ ಅಡ್ಡಿ ಇಲ್ಲ ಎನ್ನುವುದಾದರೆ ಮಧ್ಯಪ್ರದೇಶವನ್ನು ಉಳಿಸಿಕೊಂಡಿದ್ದು, ಬಿಜೆಪಿ ಪಾಲಿಗೆ ದೊಡ್ಡ ಸಾಧನೆ ಸರಿ.

ಇನ್ನು ಛತ್ತೀಸಗಡದಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಮತ್ತೆ ವಿಜಯ ಮಾಲೆ ದೊರೆತಿದೆ. ಬಿಜೆಪಿ ಸಮಾಧಾನಕರ ಅಂಶವೆಂದರೆ ಜಮ್ಮು ಕಾಶ್ಮೀರ ರಾಜಕೀಯ ಅಲ್ಪಸಂಖ್ಯಾತರು ಹೆಚ್ಚಿರುವ ಕಣಿವೆ ಪ್ರದೇಶದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 11 ಶಾಸಕರು ಕಮಲದ ಮೂಲಕ ಆಯ್ಕೆಯಾಗಿರುವುದು ಸಾಮಾನ್ಯ ಸಂಗತಿಯೇನಲ್ಲ. ಮಿಜೋರಾಂನಲ್ಲಿ ಬಿಜೆಪಿ ಲೆಕ್ಕದಲ್ಲಿಯೂ ಇಲ್ಲ ಬುಕ್ಕದಲ್ಲಿಯೂ ಇಲ್ಲ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಬಿಜೆಪಿ ಬಲಾಢ್ಯ ಎನ್ನುವ ಉತ್ತರ ದಟ್ಟವಾಗಿದೆ.

ಒಟ್ಟಾರೆಯಾಗಿ ಅವಲೋಕಿಸುವುದಾದರೆ, ಕಾಂಗ್ರೆಸ್ಸಿನ ಇಂದಿನ ಸ್ಥಿತಿ ತುಂಬಾ ಹೀನಾಯವಾಗಿದೆ. ದೆಹಲಿ ಗೆಲುವು ಬಿಟ್ಟರೆ ಉಳಿದ ರಾಜ್ಯದಲ್ಲಿ ಕಾಂಗ್ರೆಸ್ ಸಾಧನೆ ಹೇಳಿಕೊಳ್ಳುವಂತಿಲ್ಲ. ಆಂಧ್ರಪ್ರದೇಶದಲ್ಲಿ ಕೂಡ ಲೋಕಸಭೆಯೊಂದಿಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿರುವಾಗ ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಅವರನ್ನು ಆ ಪಕ್ಷದ ಕೆಲ ಹಿರಿಯ ನಾಯಕರು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸತೊಡಗಿದ್ದಾರೆ. ಇದು ಯುವ ಜನತೆ ಮೇಲೆ ಪರಿಣಾಮ ಬೀರಬಹುದು ಎನ್ನುವ ಲೆಕ್ಕಚಾರ ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ. ಉತ್ತರ ಭಾರತದಲ್ಲಿ ಈಗಾಗಲೇ ಚುನಾವಣೆ ಪ್ರಚಾರ ಆರಂಭಿಸಿರುವ ರಾಹುಲ್ ಗಾಂಧಿ, ತಮ್ಮ ಸ್ವಂತ ಕ್ಷೇತ್ರ ಅಮೇಥಿಯಲ್ಲಿ ಗ್ರಾಮ ವಾಸ್ತವ್ಯ ಹೂಡುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಕ್ರಮೇಣ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತ ತೆರೆಳಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಆಂಧ್ರಪ್ರದೇಶದಲ್ಲಿ ಕೈ ಸರ್ಕಾರವಿದ್ದರೂ ಅವರ ಕಾಲಾವಕಾಶ ಅಂತಿಮ ಹಂತಕ್ಕೆ ಬಂದು ನಿಂತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ಸನ್ನು ಕೇಳುವವರು ಗತಿಯಿಲ್ಲ. ಮಹಾರಾಷ್ಟ್ರದಲ್ಲಿ ಎನ್ ಸಿಪಿಯೊಂದಿಗೆ ಮೈತ್ರಿ ಹೊಂದಿದೆ. ಜತೆಗೆ ಇತ್ತೀಚೆಗೆ ನಡೆದ ಮುಂಬೈ ಭಯೋತ್ಪಾದನೆ ಕಾಂಗ್ರೆಸ್ ಪಾಲಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳೆ ಹೆಚ್ಚು.

ಇನ್ನೂ ಕರ್ನಾಟಕದ ವಿಷಯಕ್ಕೆ ಬರುವುದಾದರೆ ಇಲ್ಲಿ ಕಾಂಗ್ರೆಸ್ ಪಕ್ಷ ಅಡ್ಡ ಅಡ್ಡ ಮಲಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಕಂಡ ಭೀಕರ ಸೋಲು ಸ್ವತಃ ಗಾಂಧಿಗೂ ಅವಮಾನವಾಗುವಷ್ಟು ಹೀನಾಯವಾಗಿತ್ತು. 120 ಕ್ಕಿಂತ ಅಧಿಕ ವರ್ಷಗಳ ಇತಿಹಾಸ ಹೊಂದಿದ ಒಂದು ಪಕ್ಷ ಎಂಟು ಕ್ಷೇತ್ರಗಳ ಉಪಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಕಾಣಿದಿರುವುದು ಅದರ ದೌರ್ಭಾಗ್ಯವೇ ಸರಿ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವಾಗ ಸಿದ್ದರಾಮಯ್ಯನಂತಹ ನಾಯಕರು ಕೂಡ ಕೈಗೆ ಕೈಲಾಸ ತೋರಿಸಿದರೆ ಅದರ ಸ್ಥಿತಿ ದೇವರಿಗೆ ಪ್ರೀತಿ ಅನ್ನುವ ಮಟ್ಟಕ್ಕೆ ಬಂದು ನಿಲ್ಲುವುದರಲ್ಲಿ ಸಂಶಯವಿಲ್ಲ.

ರಾಜ್ಯದಲ್ಲಿ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದೂ ನಾಳೆಯೂ ಬಿಡುಗಡೆ ಮಾಡುವ ಸಂಭವವಿದೆ. ಜೆಡಿಎಸ್ ಕೂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ಚಟುವಟಿಕೆಗಳನ್ನು ಬಿರುಸುಗೊಳಿಸಿದೆ. ಆದರೆ ಕಾಂಗ್ರೆಸ್ ನಲ್ಲಿ ಅಂತಹ ಯಾವ ಬೆಳವಣಿಗಳೂ ಕಂಡು ಬರುತ್ತಿಲ್ಲ. ಹೀಗಾದರೆ ಲೋಕಸಭೆ ಚುನಾವಣೆಯಲ್ಲಿ ಹೇಳಹೆಸರಿಲ್ಲದಂತಾಗುವುದು ಖಚಿತ. ಈಗಾಗಲೇ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಆವರಿಸಿರುವ ಬಿಜೆಪಿ ನಿಧನವಾಗಿ ದಕ್ಷಿಣ ಕರ್ನಾಟಕದ ಕಡೆಗೆ ಮುಖ ಮಾಡಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಬಲೆ ಬೀಸಿರುವ ಬಿಜೆಪಿ ಅದರಲ್ಲಿ ಯಶಸ್ಸು ಕಾಣುವುದನ್ನು ಅಲ್ಲಗಳೆಯಲು ಆಗದು. ಸಿದ್ದು ಬಿಜೆಪಿ ಸೇರಿದರೆ, ಕಮಲದ ಪಡೆ ಕರ್ನಾಟಕವನ್ನು ತನ್ನ ಮುಷ್ಠಿಯಲ್ಲಿರಿಸಿಕೊಳ್ಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

ಕಾಂಗ್ರೆಸ್ ಇದೀಗ ಎದುರಿಸುತ್ತಿರುವ ಸಂಕಷ್ಟದ ದಿನಗಳಿಂದ ಪಾರು ಮಾಡಲು ಏಕೈಕ ದಾರಿ ಎಂದರೆ, ರಾಹುಲ್ ಗಾಂಧಿ ಅವರನ್ನು ರಾಜ್ಯದ ಉದ್ದಗಲಕ್ಕೂ ಪ್ರಚಾರಕ್ಕೆ ಬಳಸಿಕೊಳ್ಳಬೇಕು. ಬಳಸಿಕೊಂಡರೆ ಸಾಲದು, ರಾಹುಲ್ ಗಾಂಧಿ ತಮ್ಮ ಲೋಕಸಭೆ ಕ್ಷೇತ್ರ ಅಮೇಥಿಯಲ್ಲಿ ಗ್ರಾಮ ವಾಸ್ತವ್ಯ ಹೂಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕ ಅನೇಕ ಕಡೆಗಳಲ್ಲಿ ಗ್ರಾಮ ವಾಸ್ತವ್ಯ ಹೂಡಿದರೆ ಖಂಡಿತವಾಗಿ ತಕ್ಕ ಮಟ್ಟಿಗೆ ಲಾಭ ಆಗಲಿದೆ.

(ದಟ್ಸ್ ಕನ್ನಡ ವಾರ್ತೆ)
ಜ. 27 ರಂದು ಅಡ್ವಾಣಿ ಜೊತೆ ಸಿದ್ದು ಮಾತುಕತೆ
ಮಾರ್ಗರೆಟ್ ಆಳ್ವಾಗೆ ಎಐಸಿಸಿಯಲ್ಲಿ ಮತ್ತೆ ಸ್ಥಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X