ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಮಾ ತನ್ನಿ ಇಲ್ಲ ಮನೆಗೆ ಹೋಗಿ

By Staff
|
Google Oneindia Kannada News

ಬೆಂಗಳೂರು, ಜ.8: ಲಾರಿ ಮುಷ್ಕರದ ಬಿಸಿ ಗಂಟೆಗಂಟೆಗೆ, ಕ್ಷಣಕ್ಷಣಕ್ಕೆ ಏರುತ್ತಿದೆ. ಮುಷ್ಕರ ಹೀಗೇ ಮುಂದುವರಿದರೆ ತರಕಾರಿ, ಹಾಲು ಇನ್ನಿತರೆ ಅಗತ್ಯ ವಸ್ತುಗಳಿಗಾಗಿ ಗ್ರಾಹಕರು ಪರದಾಡಬೇಕಾಗುತ್ತದೆ. ಬೆಂಗಳೂರಿನ ಪೆಟ್ರೋಲ್ ಬಂಕ್ ಗಳ ಮುಂದೆ ಈಗಾಗಲೇ 'ಪೆಟ್ರೋಲ್ ದಾಸ್ತಾನು ಇಲ್ಲ' ಎಂಬ ಫಲಕಗಳು ನೇತಾಡತೊಡಗಿವೆ.

ಲಾರಿ ಮಾಲೀಕರ ಮುಷ್ಕರದೊಂದಿಗೆ ಟ್ಯಾಂಕರ್ ಲಾರಿ ಮಾಲೀಕರು ಕೈಜೋಡಿಸುರುವುದೇ ಇಷ್ಟೆಲ್ಲಾ ದುರಂತಕ್ಕೆ ಕಾರಣವಾಗಿದೆ. ಪ್ರತಿ ವಾಹನಕ್ಕೆ ಕೇವಲ ಎರಡು, ಮೂರು ಲೀಟರ್ ಪೆಟ್ರೋಲನ್ನು ನಿಗದಿಪಡಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅದೂ ಇಲ್ಲದಾಗುತ್ತದೆ. ಬೇಡಿಕೆ ಈಡೇರುವವರೆಗೂ ಕರ್ನಾಟಕದಾದ್ಯಂತ 3.6 ಲಕ್ಷ ಲಾರಿಗಳು ರಸ್ತೆಗೆ ಇಳಿಯುವುದಿಲ್ಲ ಎಂದು ರಚ್ಚೆ ಹಿಡಿದಿವೆ.

ಈ ರೀತಿ ಮುಷ್ಕರಗಳಾದಾಗಲೆಲ್ಲಾ ನಮ್ಮ ಘನ ಸರ್ಕಾರಗಳು ಅಗತ್ಯ ವಸ್ತುಗಳ ಸೇವಾ ಕಾಯ್ದೆ (ಎಸ್ಮಾ) ಜಾರಿ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಲೇ ಇರುತ್ತವೆ. ಆದರೆ ಇದುವರೆಗೂ ಯಾವುದೆ ಸರ್ಕಾರಗಳು ಎಸ್ಮಾನಂತಹ ಪ್ರಬಲ ಕಾಯಿದೆಗಳನ್ನು ಜಾರಿ ಮಾಡಿದ ಉದಾಹರಣೆಗಳಿಲ್ಲ. ಲಾರಿ ಮುಷ್ಕರ ಎರಡು ದಿನಗಳಲ್ಲಿ ಕೈಬಿಡದಿದ್ದರೆ ಎಸ್ಮಾ ಜಾರಿಗೊಳಿಸಲಾಗುತ್ತದೆ ಎಂದು ಸನ್ಮಾನ್ಯ ಸಾರಿಗೆ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ವಸ್ತುಗಳ ಸೇವೆಯಿಂದ ಲಾರಿಗಳಿಗೆ ವಿನಾಯಿತಿ ಇದೆ. ಎಸ್ಮಾ ಜಾರಿಗೊಳಿಸುವುದರಿಂದ ಉಪಯೋಗವಾದರೂ ಏನು? ಎಂದು ಪ್ರಶ್ನಿಸುತ್ತಾರೆ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ.

ಎಸ್ಮಾ ಜಾರಿಗೊಳಿಸುತ್ತೇವೆ ಎಂಬ ಸರ್ಕಾರದ ಗೊಡ್ಡು ಬೆದರಿಕೆಗಳಿಗೆ ಸೊಪ್ಪುಹಾಕುವುದಿಲ್ಲ ಎಂದು ಗೂಡ್ಸ್ ಟ್ರಕ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ಗುಡುಗಿದ್ದಾರೆ. ಒಂದು ವೇಳೆ ಎಸ್ಮಾ ಜಾರಿ ಮಾಡಿದ್ದೇ ಆದರೆ ನಮ್ಮ ಲಾರಿಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತೇವೆ. ಅಗತ್ಯ ವಸ್ತುಗಳನ್ನು ಸಾಗಿಸುತ್ತಿರುವ ವಾಹನಗಳನ್ನು ತಡೆದು ಪ್ರತಿಭಟಿಸುತ್ತೇವೆ ಎಂದು ಅವರು ಎಚ್ಚರಿಸಿದರು.

ಸಾರ್ವಜನಿಕರಿಗೆ ತೊಂದರೆ ಆಗಬಾರದು. ಜನಜೀವನ ಅಸ್ತವ್ಯಸ್ತವಾಗಬಾರದು. ಇದೊಂದೆ ಸಾರಿಗೆ ಸಚಿವರ ಗುರಿಯಾಗಿದ್ದರೆ ತತ್ ಕ್ಷಣ ಎಸ್ಮಾ ಜಾರಿ ಮಾಡಿ ಈ ಲಾರಿಗಳ ಪರ್ಮಿಟ್ ರದ್ದು ಮಾಡಲಿ. ಅಂಥ ಗಡುಸಾದ ನಿರ್ಧಾರ ಕೈಗೊಳ್ಳುವ ಗಂಡೆದೆ ಈ ಬಿಜೆಪಿ ಸರಕಾರಕ್ಕೆ ಇದೆಯಾ ಎನ್ನುವುದು ಪ್ರಶ್ನೆ. ಅದೂ ಆಗದಿದ್ದರೆ ಅಶೋಕ್ ಮತ್ತು ಅವರ ಸಂಗಡಿಗರು ಹೀರೋ ಸೈಕಲ್ಲಿನಲ್ಲಿ ಮನೆಗೆ ಹೋಗಲಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X