ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ

By Staff
|
Google Oneindia Kannada News

yedyyurappa at srirangapatna
ಮಂಡ್ಯ, ಜ. 14 : ದೇಶದ ಅಭಿವೃದ್ಧಿ ಪಥವನ್ನು ದಾರಿತಪ್ಪಿಸುವ ಯತ್ನವೇ ಭಯೋತ್ಪಾದನೆ. ಭಯೋತ್ಪಾದನೆಯ ಮೂಲೋತ್ಪಾಟನೆ ಹಾಗೂ ದೇಶದ ಅಭಿವೃದ್ಧಿ ಪಥವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹಿರಿಯರು, ಚಿಂತಕರುಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ರಾಷ್ಟ್ರದ ಯುವಶಕ್ತಿಯನ್ನು ನಿರ್ಮಿಸುವ ಕಾರ್ಯ ಮಾಡೋಣ. ಆಗ ಮಾತ್ರ ದೇಶದ ಐಕ್ಯತೆ, ಸುಭದ್ರತೆ ಹಾಗೂ ಅಭಿವೃದ್ಧಿಯ ಕಾರ್ಯ ಯಶ ಸಾಧಿಸಬಲ್ಲದು ಎಂದು ರಾಜ್ಯದ ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ತಿಳಿಸಿದರು.

ಶನಿವಾರ ಮಂಡ್ಯದ ಶ್ರೀರಂಗಪಟ್ಟದ ಸರ್ಕಾರಿ ಪ್ರೌಢಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಯಲ್ಲಿ ಪ್ರಾಮಾಣಿಕ ಕೈಗಳ ಕೊರತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ದಿವಂಗತ ಜಯಪ್ರಕಾಶ್ ನಾರಾಯಣ್ ಅವರ ಚಿಂತನೆಯಂತೆ ಯುವಶಕ್ತಿಯನ್ನು ಜಾಗೃತಗೊಳಿಸಿ ದೇಶದ ಸಮಸ್ಯೆಗಳ ನಿವಾರಣೆ ಹಾಗೂ ಅಭಿವೃದ್ಧಿಗೆ ಮುನ್ನಡೆ ಇಡುವತ್ತ ಯುವಕರನ್ನು ಎಚ್ಚರಿಸಿ ಆತ್ಮಾಭಿಮಾನ ಮೂಡಿಸುವ ಕಾರ್ಯ ನಾವೆಲ್ಲ ಮಾಡೋಣ. ದೇಶದಲ್ಲಿ ವಿಶ್ವಕ್ಕೆಲ್ಲಾ ಆಗುವಷ್ಟು ಜ್ಞಾನಸಂಪತ್ತು ಇದೆ. ಅದರ ಸದುಪಯೋಗ ಪಡೆದು ದೇಶಕಟ್ಟುವ ಕೆಲಸವಿಂದೇ ಆಗಬೇಕಿದೆ. ಎಲ್ಲ ಸಮಸ್ಯೆಗಳಿಗೆ ಮೂಲ ಇಂದು ಪ್ರಾಮಾಣಿಕತೆಯ, ದೃಢಸಂಕಲ್ಪದ ಕೊರತೆಯೇ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ದೇಶದ ಸ್ವಾತಂತ್ರ್ಯ ಬಂದು 60 ವರ್ಷವಾದರೂ ಇಂದಿಗೂ ಕುಡಿಯಲು ನೀರಿಲ್ಲ , ರಸ್ತೆ ಇಲ್ಲ, ರೇಷನ್ ಕಾರ್ಡ್ ಇಲ್ಲವೆಂದರೆ ಏನರ್ಥ. ನಾಗರಿಕರು ಸ್ವಾಭಿಮಾನದಿಂದ ಬದುಕುವ ದಾರಿಯೇ ಕಾಣದ ಪರಿಸ್ಥಿತಿ ಇಂದಿಗೂ ಇದೆ. ಇದನ್ನು ಸರಿಪಡಿಸುವ ಕೆಲಸ ಎಲ್ಲ ಪಕ್ಷಗಳೂ ಒಟ್ಟಾಗಿ ಕೂತು ಹಿರಿಯರ ಮಾರ್ಗದರ್ಶನ ಪಡೆದು, ಸರಿಪಡಿಸುವ ನಾಡುಕಟ್ಟುವ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ತಿಳಿಸಿದರು.

ಸರ್ಕಾರದ ಕೆಲವ ದೇವರ ಕೆಲಸ ಎಂದರೆ ದೇವರು ಬಂದು ಮಾಡಬೇಕೇ? ಸರ್ಕಾರದ ಕೆಲಸ ಎಲ್ಲರ ಕೆಲಸ. ಎಲ್ಲರೂ ಅದರತ್ತ ಗಮನಹರಿಸಿ ಲೋಪ ಹೋಗಲಾಡಿಸಿ ಸಮರ್ಪಕಗೊಳಿಸಬೇಕು. ರಸ್ತೆ ನಿರ್ಮಾಣ ಮಾಡಿ ನಂತರ ಕೊಳಾಯಿ ಹಾಕಲು ರಸ್ತೆ ಅಗೆಯುವ ಅಧಿಕಾರಿಗಳೂ ಇದ್ದಾರೆ. ಅವರಿಗೆ ಸಾಮಾನ್ಯ ಅರಿವೂ ಇಲ್ಲವೇ? ಯೋಜಿತ ರೀತಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದಾಗ ಜನರಲ್ಲಿ ನಾವು ಸಂತೃಪ್ತಿ ಮೂಡಿಸಲು ಸಾಧ್ಯ. ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡದಿದ್ದಲ್ಲಿ ಅಭಿವೃದ್ದಿ ಅಸಾಧ್ಯ ಎಂದು ಹೇಳಿದರು.

ವಿದ್ಯುತ್ ಸಮಸ್ಯೆ ರಾಜ್ಯದಲ್ಲಿ ತಾಂಡವವಾಡುತ್ತಿತ್ತು. ಅಧಿಕಾರ ವಹಿಸಿಕೊಂಡ ಕೂಡಲೇ 5000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿದೆ. ಛತ್ತೀಸ್‌ಘಡದಲ್ಲಿ 2000 ಕಿ.ವ್ಯಾಟ್ ಉತ್ಪಾದನೆಗೆ ಕ್ರಮ ಜರುಗಿಸಿದೆ. ರಾಜ್ಯದಲ್ಲಿ ಈಗ 5 ರಿಂದ 6 ಲಕ್ಷ ಕಡುಬಡವ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ ಮೂಲಕ ವಿದ್ಯಾಭ್ಯಾಸಕ್ಕೆ, ಅಭಿವೃದ್ಧಿಗೆ ಯತ್ನ ಮಾಡಲಾಗಿದೆ. ಮಧ್ಯಮ ವರ್ಗದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಕನಿಷ್ಠ ಶೇಕಡ 6ರ ಬಡ್ಡಿದರದಲ್ಲಿ ಗರಿಷ್ಠ 5 ಲಕ್ಷ ರೂಪಾಯಿ ಸಾಲ ಒದಗಿಸುವ ಕಾರ್ಯ ನಡೆದಿದೆ. ಅದಕ್ಕೆ ಯಾವುದೇ ಆಧಾರವೂ ಬೇಕಿಲ್ಲ. ಉದ್ಯೋಗ ದೊರಕಿದ ನಂತರ ಸಾಲ ತೀರಿಸಬೇಕಿದೆ. ಈ ಕಾರ್ಯಕ್ರಮಗಳನ್ನು ಯುವಶಕ್ತಿ ಅಭ್ಯುದಯಕ್ಕೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಾ. ಬಿ.ಎಸ್. ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X