ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣಾಭಿವೃದ್ಧಿಗೆ ಹಣಕಾಸು ಆಯೋಗ ಒತ್ತು

By Staff
|
Google Oneindia Kannada News

ಬೆಂಗಳೂರು, ಡಿ 31 : ರಾಜ್ಯದ 3ನೇ ಹಣಕಾಸು ಆಯೋಗದ ವರದಿಯಲ್ಲಿ ಮಾಡಿರುವ ಹಲವಾರು ಮೌಲಿಕ ಸಲಹೆಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಡಾ. ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ವಿಶೇಷವಾಗಿ ಅಧಿಕಾರ ವಿಕೇಂದ್ರೀಕರಣ, ಕಾಲಬದ್ಧವಾಗಿ ಗ್ರಾಮ ಸಭೆಗಳ ಆಯೋಜನೆ, ಗ್ರಾಮ ಪಂಚಾಯತ್‌ಗಳ ಆದಾಯ ಮೂಲ ವೃದ್ಧಿ ಮತ್ತಿತರ ಪ್ರಮುಖ ವಿಚಾರಗಳ ಬಗ್ಗೆ, ಹಣಕಾಸು ಆಯೋಗವು ವರದಿಯಲ್ಲಿ ಶಿಫಾರಸ್ಸುಗಳನ್ನು ಮಾಡಿರುವುದನ್ನು ಗಮನಿಸಿದ್ದೇನೆ ಹಾಗೂ ಇವುಗಳ ಅಧ್ಯಯನ ನಡೆಸಿ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ನುಡಿದರು.

ಎರಡು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದಾದ್ಯಂತ ಪ್ರವಾಸ ನಡೆಸಿ ಕ್ಷೇತ್ರ ಮಟ್ಟದ ಅಧ್ಯಯನ ನಡೆಸಿ ಮೌಲಿಕವಾದ ವರದಿಯನ್ನು ನೀಡಿದ್ದಕ್ಕಾಗಿ ಸಮಿತಿಯ ಅಧ್ಯಕ್ಷ ಕೊಡ್ಗಿಯವರನ್ನು ಮತ್ತು ಸದಸ್ಯರಾದ ಡಾ. ಮಹೇಂದ್ರ ಎಸ್ ಕಂಠಿ ಮತ್ತು ಟಿ. ತಿಮ್ಮೇಗೌಡ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.ಪಂಚಾಯತ್ ರಾಜ್ ಸಂಸ್ಥೆಗಳಿಗೆ ಈಗಿರುವ ಪದ್ದತಿಯಂತೆ ವೇತನ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಒಟ್ಟಾರೆಯಾಗಿ ಹಣಕಾಸನ್ನು ಒದಗಿಸುವ ಬದಲು ಧನ ವಿನಿಯೋಗವನ್ನು ಎರಡು ಭಾಗಗಳಲ್ಲಿ ಮಾಡಬೇಕು.

ವೇತನದ ಭಾಗ ಮತ್ತು ಯೋಜನೆಗಳು, ಕಾಯಕ್ರಮಗಳ ಅನುಷ್ಠಾನದ ಭಾಗ ಎಂದು ವಿಂಗಡಿಸಬೇಕೆಂದು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿರುವುದಾಗಿ ಮೂರನೇ ಹಣಕಾಸು ಆಯೋಗದ ಅಧ್ಯಕ್ಷ ಎ. ಜಿ. ಕೊಡ್ಗಿಯವರು ತಿಳಿಸಿದರು. ರಾಜ್ಯದ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳಿಂದ ಶೇ 33 ರಷ್ಟು ಪಾಲನ್ನು (ಪಂಚಾಯತ್ ರಾಜ್ ಸಂಸ್ಥೆಗಳ ವೇತನದ ಭಾಗ ಹೊರತುಪಡಿಸಿ) ಹಂಚಿಕೆ ಮಾಡಬೇಕು. ಇದರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾಲು ಶೇ 23 ರಷ್ಟು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪಾಲು ಶೇ 10 ರಷ್ಟು ಆಗಿರುತ್ತದೆ ಮತ್ತು ಗ್ರಾಮ ಪಂಚಾಯತ್‌ಗಳಿಗೆ ಈಗ ಹಂಚಿಕೆ ಮಾಡುತ್ತಿರುವ ವಾರ್ಷಿಕ ತಲಾ ರೂ 6 ಲಕ್ಷ ಗಳ ಶಾಸನಬದ್ಧ ಅಭಿವೃದ್ಧಿ ಅನುದಾನವನ್ನು ಹೆಚ್ಚಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ಎ. ಜಿ. ಕೊಡ್ಗಿ ಅವರು ತಿಳಿಸಿದರು.

ರಾಜ್ಯದ ಹಿಂದುಳಿದ ಪ್ರದೇಶದಲ್ಲಿರುವ ಗ್ರಾಮ ಪಂಚಾಯತಿಗಳಿಗೆ ರೂ 1 ಲಕ್ಷದಿಂದ ರೂ 3 ಲಕ್ಷಗಳವರೆಗೆ ಪ್ರತಿ ಗ್ರಾಮ ಪಂಚಾಯತಿಗೆ ಪ್ರತಿ ವರ್ಷಕ್ಕೆ ಹೆಚ್ಚವರಿ ಅನುದಾನವನ್ನು ನೀಡಲು ಶಿಫಾರಸ್ಸು ಮಾಡಲಾಗಿದೆ ಎಂದರು. ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆ ಆಧಾರದ ಮೇಲೆ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಡಾ. ಡಿ. ಎಂ. ನಂಜುಂಡಪ್ಪ ಪ್ರಾದೇಶಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿ ವರದಿಯಲ್ಲಿ ಗುರುತಿಸಿರುವ ತಾಲ್ಲೂಕು ಪ್ರವರ್ಗಗಳ ಆಧಾರದ ಸಮೂಹ ನಿರ್ಭಂಧ ರಹಿತ ಅನುದಾನಗಳನ್ನು ರಾಜ್ಯದ ಸಂಚಿತ ನಿಧಿಯಿಂದ ಒದಗಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ನುಡಿದರು.

ಕೆ.ಯು.ಡಿ.ಎಫ್.ಸಿ. ಮಾದರಿಯಲ್ಲಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಸ್ಥಾಪನೆ. ಸ್ಥಳೀಯ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಜನ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆ ಹಾಗೂ ನಾಗರೀಕ ಸನ್ನದು ಜಾರಿಗೊಳಿಸುವ ಶಿಫಾರಸ್ಸುಗಳು ಈ ವರದಿಯಲ್ಲಿದೆ ಎಂದು ಹಣಕಾಸು ಆಯೋಗದ ಅಧ್ಯಕ್ಷರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X