ಲೆಕ್ಕಾಚಾರದಂತೆ ಜಯ ಲಭಿಸಿದೆ: ಎಚ್ಡಿಕೆ
ಬೆಂಗಳೂರು, ಡಿ. 30 : ನಮ್ಮ ಕುಟುಂಬವೇ ಹೋರಾಟದ ಮೂಲಕ ಬಂದಿರುವುದು. ಈ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಇಂದು ಜೆಡಿಎಸ್ ಅರ್ಹವಾದ ಮೂರು ಗೆಲುವುಗಳನ್ನು ಸಾಧಿಸಿದೆ. ಈ ಗೆಲುವು ಜೆಡಿಎಸ್ ಗೆ ನೈತಿಕ ಬಲ ತಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಮಧುಗಿರಿ ಕ್ಷೇತ್ರದ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ತನ್ನ ಸಾಮರ್ಥ್ಯವನ್ನು ಈ ಚುನಾವಣೆ ಮೂಲಕ ತೋರಿಸಿದೆ ಎಂದರು. ಮದ್ದೂರು, ಮಧುಗಿರಿ ಹಾಗೂ ತುರುವೇಕೆರೆಯಲ್ಲಿ ಜೆಡಿಎಸ್ ಗೆಲುವು ಖಚಿತ ಎಂದು ನಾವು ಈ ಹಿಂದೆಯೇ ಲೆಕ್ಕಾಚಾರ ಹಾಕಿಕೊಂಡಿದ್ದೇವು, ಅಲ್ಲದೆ ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅತ್ಯಧಿಕ ಮತಗಳಿಂದ ಜಯ ಸಾಧಿಸಲಿದೆ ಎನ್ನುವ ವಿಶ್ವಾಸವೂ ಇತ್ತು. ಆದರೆ ಮಧುಗಿರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದರೂ ಗೆಲುವಿನ ಅಂತರ ಕಡಿಮೆ ಇರುವುದರಿಂದ ಅಷ್ಟಾಗಿ ಸಮಾಧಾನ ತಂದಿಲ್ಲ ಎಂದು ಕುಮಾರಸ್ವಾಮಿ ಅತೃಪ್ತಿ ವ್ಯಕ್ತಪಡಿಸಿದರು.
ಪಕ್ಷವನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದವರಿಗೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ. ಮಧುಗಿರಿ, ಮದ್ದೂರು ಹಾಗೂ ತುರುವೇಕೆರೆಯಲ್ಲಿ ಜೆಡಿಎಸ್ ಜಯಗಳಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಮತ್ತಷ್ಟು ನೈತಿಕ ಬಲ ತಂದಂತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಯಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಗೆ ಅಡ್ಡಗಾಲಾದ ಸಿದ್ದರಾಮಯ್ಯ, ಕೊನೆಗೂ ತನ್ನ ಹಠ ಸಾಧಿಸುವಲ್ಲಿ ಸಫಲರಾದರು. ಇದರ ಲಾಭವನ್ನು ಬಿಜೆಪಿ ಪಡೆದುಕೊಂಡಿತೇ ವಿನಃ ಇದು ಬಿಜೆಪಿ ಸ್ವಸಾಮರ್ಥ್ಯದಿಂದ ಬಂದ ಜಯವಲ್ಲ ಎಂದು ಕುಮಾರಸ್ವಾಮಿ ವ್ಯಾಖ್ಯಾನಿಸಿದರು.
(ದಟ್ಸ್ ಕನ್ನಡ ವಾರ್ತೆ)
ಗೌಡರ ಮಾನ ಕಾಪಾಡಿದ ಸೊಸೆ ಅನಿತಾ
ಗೆದ್ದವರು ಬಿದ್ದವರು: ಮತಗಳಿಕೆ ವಿವರ
ಕಲ್ಪನಾ ಸಿದ್ದರಾಜುಗೆ ಮದ್ದೂರು ವಡೆ












Click it and Unblock the Notifications