ನಾಗರಿಕ ಸ್ನೇಹಿ ಆಸ್ತಿ ತೆರಿಗೆ ಪದ್ಧತಿಗೆ ಸಂಪುಟ ಅಸ್ತು
ಬೆಂಗಳೂರು, ಡಿ. 29 : ಆಸ್ತಿ ತೆರಿಗೆ ಎಷ್ಟು ಕಟ್ಟಬೇಕಾಗುತ್ತೋ ಎಂದು ಆತಂಕದಲ್ಲಿದ್ದ ಬೆಂಗಳೂರಿನ ನಾಗರಿಕರಿಗೆ ಹೊಸ ವರ್ಷದ ಕಾಣಿಕೆಯಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ಜನರಿಗೆ ಹೊರೆಯಾಗದ ಹಾಗೆ 'ನಾಗರಿಕ ಸ್ನೇಹಿ' ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಈ ಮಹತ್ವದ ನಿರ್ಧಾರವನ್ನು ಸಂಪುಟ ಸಭೆಯ ಬಳಿಕ ನಗರಾಭಿವೃದ್ಧಿ ಸಚಿವ ಆರ್ ಅಶೋಕ್ ಅವರು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.
ಸಂಪುಟ ನಿರ್ಧಾರ ಪ್ರಮುಖ ಅಂಶಗಳು ಕೆಳಗಿನಂತಿವೆ.
* ನಾಗರಿಕರಿಗೆ ಅನುಕೂಲವಾಗಲೆಂದು ಬೆಂಗಳೂರನ್ನು 6 ವಲಯಗಳನ್ನಾಗಿ ವಿಭಾಗಿಸಲಾಗಿದೆ.
* ಎಫ್ ವಲಯದಲ್ಲಿ ಬರುವ ನಾಗರಿಕರಿಗೆ ಹೆಚ್ಚಿನ ತೆರಿಗೆ ಪಾವತಿಸುವ ಭಾರವಿಲ್ಲ.
* ಎಲ್ಲ ವಲಯಗಳಲ್ಲಿ ಏಕರೂಪದ ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿದೆ.
* ಅವಧಿಯೊಳಗೆ ತೆರಿಗೆ ಕಟ್ಟಿದರೆ ಶೇ. 5ರಷ್ಟು ರಿಯಾಯತಿ ದೊರೆಯಲಿದೆ.
* ತೆರಿಗೆಯನ್ನು ಶೇ. 20ಕ್ಕೆ ಮಿತಿಗೊಳಿಸಲಾಗಿದೆ.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯದಲ್ಲಿ ಬರುವ ಹಳ್ಳಿಗಳೂ ತೆರಿಗೆ ವ್ಯಾಪ್ತಿಯಲ್ಲಿ ಬರಲಿವೆ.
* ಎಫ್ ವಲಯದಲ್ಲಿ ಬರುವ ಖಾಲಿ ನಿವೇಶನಗಳಿಗೆ ಹೆಚ್ಚಿನ ತೆರಿಗೆ ವಿಧಿಸಿಲ್ಲ.
* ಬಿಬಿಎಂಪಿ ವಲಯದಲ್ಲಿ ಬರುವ ಅನಧಿಕೃತ ಕಟ್ಟಡದ ಮಾಲಿಕರು ಕೂಡ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಕಡ್ಡಾಯವಾಗಿ ತೆರಿಗೆ ಕಟ್ಟಲೇಬೇಕು.
* ಅನಧಿಕೃತ ಕಟ್ಟಡಗಳ ಮಾಲಿಕರು ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಇನ್ನು ಯಾರೂ ತಪ್ಪಿಸಿಕೊಳ್ಳುವಂತಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications