ಮಂಗಳೂರಿನಲ್ಲಿ ಕರವೇಯಿಂದ ರೈಲು ತಡೆ
ಮಂಗಳೂರು, ಡಿ.22: ಕರ್ನಾಟಕ ರಕ್ಷಣಾವೇದಿಕೆಯ ದಕ್ಷಿಣ ಕನ್ನಡ ವಿಭಾಗದ ಸದಸ್ಯರು ಓಖಾ-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲನ್ನು ತಡೆದು ಧರಣಿ ನಡೆಸಿದ ಘಟನೆ ಭಾನುವಾರ ಜರುಗಿದೆ. ಹತ್ತು ನಿಮಿಷಗಳ ಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರು -ಮಂಗಳೂರು ಪ್ಯಾಸೆಂಜರ್ ರೈಲನ್ನು ಬೆಳಗ್ಗಿನ ಜಾವದಲ್ಲಿ ಸಂಚರಿಸುವಂತೆ ಆದೇಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕರವೇ ಸದಸ್ಯರು ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕರವೇ ಮುಖ್ಯಸ್ಥ ಅಣ್ಣಯ್ಯ ಕುಲಾಲ್ ನೇತೃತ್ವದ ಕರವೇ ಸದಸ್ಯರು ಘೋಷಣೆ ಕೂಗುತ್ತಾ, ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಸರಿಯಾದ ಸ್ಥಾನ ಮಾನ, ಪ್ಯಾಸೆಂಜರ್ ರೈಲು ಸಂಚಾರ ವೇಳೆ ಬದಲಾವಣೆಗೆ ಆಗ್ರಹಿಸಿದರು. ಈ ಕುರಿತ ಬೇಡಿಕೆ ಪತ್ರವನ್ನು ಸ್ಥಾನೀಯ ರೈಲ್ವೇ ಅಧಿಕಾರಿ ರಾಮಯ್ಯ ಅವರಿಗೆ ನೀಡುತ್ತಾ, ಕೇಂದ್ರ ರೈಲ್ವೇ ಸಚಿವ ಲಾಲೂ ಅವರಿಗೆ ತಲುಪಿಸುವಂತೆ ಕೋರಿದರು.
ಬೇಡಿಕೆಗಳು: ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಾಂಡೇಶ್ವರ, ಮಹಾಕಾಲಿಪಡ್ಪು ಲೆವರ್ ಕ್ರಾಸಿಂಗ್ ಬಳಿ ಸೇತುವೆ ನಿರ್ಮಾಣ. ಮತ್ಸ್ಯಗಂಧಿ ಎಕ್ಸ್ ಪ್ರೆಸ್ ಮಂಗಳೂರಿನಲ್ಲಿ ನಿಲುಗಡೆ, ಮಹಿಳೆಯರಿಗೆ ಪ್ರತ್ಯೇಕ ಆಸನ/ ಬೋಗಿ ವ್ಯವಸ್ಥೆ.ಮಂಗಳೂರು-ಬೆಂಗಳೂರು ರೈಲಿಗೆ 'ಯಕ್ಷಗಂಧರ್ವ' ಎಂದು ಹೆಸರಿಡಬೇಕು.ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಪೂರೈಕೆ..ಇತ್ಯಾದಿ.
(ಏಜೆನ್ಸೀಸ್)


Click it and Unblock the Notifications
