ರಾಹುಲ್ ದ್ರಾವಿಡ್ ಶಾಪ ವಿಮೋಚನೆ

ಫಾರ್ಮ್ ಮರಳಿಪಡೆಯುವ ಪ್ರಯತ್ನದಲ್ಲಿ ಅತಿಯಾದ ಎಚ್ಚರಿಕೆಯಿಂದ, ಕಳೆಗುಂದಿದವರಂತೆ ಆಡುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನು ಮೂರನೇ ಕ್ರಮಾಂಕದಿಂದ ಐದನೇ ಕ್ರಮಾಂಕಕ್ಕೆ ಇಳಿಸುವ ಯತ್ನ ಮಾಡಿದವರಿಗೂ ದ್ರಾವಿಡ್ ತಕ್ಕ ಉತ್ತರವನ್ನು ನೀಡಿದ್ದಾರೆ.
ಮೋಹಾಲಿಯಲ್ಲಿ ನಡೆಯುತ್ತಿರುವ ಇಂಗ್ಲೆಡ್ ವಿರುದ್ಧದ ಎರಡನೇ ಮತ್ತು ಕೊನೆಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಸೆಹ್ವಾಗ್ ವಿಕೆಟ್ ಪತನವಾದ ಬಳಿಕ ಗೌತಮ್ ಗಂಭೀರ್ ಅವರನ್ನು ಕೂಡಿಕೊಂಡ ದ್ರಾವಿಡ್ ಎಚ್ಚರಿಕೆಯಿಂದಲೇ ಆಟವಾಡಿ ತಮ್ಮ ಎಂದಿನ ನೈಪುಣ್ಯತೆಯನ್ನು ಮೆರೆದರು.
50 ರನ್ ಗಳಿಸಿ ಅಜೇಯರಾಗುಳಿದಿರುವ ದ್ರಾವಿಡ್ ಮುರಿಯದ ಎರಡನೇ ವಿಕೆಟ್ ಗೆ ಗಂಭೀರ್ ಜತೆಗೂಡಿ ಚಹಾದ ವೇಳೆಗೆ 134 ರನ್ ಕಲೆ ಹಾಕಿದ್ದಾರೆ. ದ್ರಾವಿಡ್ ಅವರ 50 ರನ್ 153 ಬಾಲುಗಳಲ್ಲಿ 6 ಬೌಂಡರಿಗಳ ಸಹಾಯದಿಂದ ಬಂದಿದೆ. ದ್ರಾವಿಡ್ ರಿಂದ ಉತ್ತಮ ಸಾಥ್ ಪಡೆದ ಗಂಭೀರ್ 165 ಬಾಲುಗಳಲ್ಲಿ 10 ಬೌಂಡರಿಗಳ ಸಹಾಯದಿಂದ 78 ರನ್ ಗಳಿಸಿ ಆಡುತ್ತಿದ್ದಾರೆ. ಚೆನ್ನೈ ಪಂದ್ಯದಲ್ಲಿ ಪಂದ್ಯದ ಪುರುಷೋತ್ತಮರಾಗಿದ್ದ ಸೆಹ್ವಾಗ್ ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಸೊನ್ನೆಗೆ ಔಟಾದರು.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ಹೀನಾಯ ಸೋಲು ಅನುಭವಿಸಿತ್ತು. ಆ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ ಗಳಿಂದ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದ ದ್ರಾವಿಡ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.
(ದಟ್ಸ್ ಕ್ರಿಕೆಟ್ ವಾರ್ತೆ)


Click it and Unblock the Notifications
